DK ಅಬ್ಬರ ನೋಡಿ ಕಂಬ್ಯಾಕ್ ಮಾಡಿದ ಮುರಳಿ ವಿಜಯ್: ಮೊದಲ ಪಂದ್ಯದಲ್ಲೇ ವಿಫಲ..!
Murali Vijay: 2018 ರಲ್ಲಿ ಕೊನೆಯ ಬಾರಿಗೆ ಟೀಮ್ ಇಂಡಿಯಾ ಪರ ಟೆಸ್ಟ್ ಪಂದ್ಯವಾಡಿದ್ದ ಮುರಳಿ ವಿಜಯ್ಗೆ ಆ ಬಳಿಕ ತಂಡದಲ್ಲಿ ಅವಕಾಶ ದೊರೆತಿರಲಿಲ್ಲ.
ಒಂದು ಕಾಲದಲ್ಲಿ ಭಾರತ ಟೆಸ್ಟ್ ತಂಡದ ಪ್ರಮುಖ ಭಾಗವಾಗಿದ್ದ ಆರಂಭಿಕ ಆಟಗಾರ ಮುರಳಿ ವಿಜಯ್ ಸುಮಾರು ಎರಡು ವರ್ಷಗಳ ನಂತರ ಇದೀಗ ಕ್ರಿಕೆಟ್ ಅಂಗಳಕ್ಕೆ ಕಂಬ್ಯಾಕ್ ಮಾಡಿದ್ದಾರೆ. ತಮಿಳುನಾಡು ಪ್ರೀಮಿಯರ್ ಲೀಗ್ (TNPL) ಮೂಲಕ ಮೈದಾನಕ್ಕೆ ಮರಳಿರುವ ಮುರಳಿ ವಿಜಯ್ ತಿರುಚ್ಚಿ ವಾರಿಯರ್ಸ್ ಪರ ಕಣಕ್ಕಿಳಿದಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ದಿಂಡಿಗಲ್ ಡ್ರಾಗನ್ಸ್ ಮತ್ತು ತಿರುಚ್ಚಿ ವಾರಿಯರ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ತಿರುಚ್ಚಿ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ದಿಂಡಿಗಲ್ ಡ್ರಾಗನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 144 ರನ್ ಕಲೆಹಾಕಿತು.
ಈ ಸಾಧಾರಣ ಸವಾಲನ್ನು ಬೆನ್ನತ್ತಲು ತಿರುಚ್ಚಿ ವಾರಿಯರ್ಸ್ ಪರ ಮುರಳಿ ವಿಜಯ್ ಹಾಗೂ ಅಮಿತ್ ಸತ್ವಿಕ್ ಕಣಕ್ಕಿಳಿದಿದ್ದರು. ವಿಶೇಷ ಎಂದರೆ ಕ್ರಿಕೆಟ್ ಅಂಗಳದಿಂದ ದೂರವೇ ಉಳಿದಿದ್ದ ಮುರಳಿ ವಿಜಯ್ 2 ವರ್ಷಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಇನಿಂಗ್ಸ್ ಆರಂಭಿಸಿದ್ದರು. ಅದರಂತೆ 13 ಎಸೆತಗಳನ್ನು ಎದುರಿಸಿದರೂ ಮುರಳಿ ವಿಜಯ್ ಕಲೆಹಾಕಿದ್ದು ಕೇವಲ 8 ರನ್ ಮಾತ್ರ. ಈ ವೇಳೆ ರನೌಟ್ ಆಗುವ ಮೂಲಕ ಇನಿಂಗ್ಸ್ ಅಂತ್ಯಗೊಳಿಸಿದರು. ಇತ್ತ ಭರ್ಜರಿ ಕಂಬ್ಯಾಕ್ ನಿರೀಕ್ಷೆಯಲ್ಲಿದ್ದ ಮುರಳಿ ವಿಜಯ್ ನಿರಾಸೆಯೊಂದಿಗೆ ಪೆವಿಲಿಯನ್ಗೆ ಮರಳಿದರು.
ಇದಾಗ್ಯೂ ನಿದೀಶ್ ರಾಜಗೋಪಾಲ್ ಅವರ ಅರ್ಧಶತಕದ ನೆರವಿನಿಂದ ತಿರುಚ್ಚಿ ವಾರಿಯರ್ಸ್ ತಂಡವು 19 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್ಗಳಿಸುವ ಮೂಲಕ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಮುರಳಿ ವಿಜಯ್ ಕಂಬ್ಯಾಕ್: ತಮಿಳುನಾಡಿನ ಆಟಗಾರ ದಿನೇಶ್ ಕಾರ್ತಿಕ್ ಇತ್ತೀಚೆಗಷ್ಟೇ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದರು. 2019 ರ ಬಳಿಕ ಮತ್ತೆ ಟೀಮ್ ಇಂಡಿಯಾದಲ್ಲಿ ಡಿಕೆ ಕಾಣಿಸಿಕೊಂಡ ಬೆನ್ನಲ್ಲೇ ಅತ್ತ ಮುರಳಿ ವಿಜಯ್ ಕೂಡ ಕ್ರಿಕೆಟ್ ಅಂಗಳಕ್ಕೆ ಮರಳುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದಾಗ್ಯೂ ತಮ್ಮ ಕಂಬ್ಯಾಕ್ ಪಂದ್ಯದ ಚೊಚ್ಚಲ ಇನಿಂಗ್ಸ್ನಲ್ಲಿ ಕೇವಲ 8 ರನ್ಗೆ ಔಟಾಗಿ ನಿರಾಸೆ ಮೂಡಿಸಿದ್ದಾರೆ.
2020ರ ತನಕ ಐಪಿಎಲ್ ತಂಡಗಳ ಭಾಗವಾಗಿದ್ದ ಮುರಳಿ ವಿಜಯ್ ಕೊನೆಯ ಬಾರಿಗೆ ಸಿಎಸ್ಕೆ ಪರ ಆಡಿದ್ದರು. ಆ ಪಂದ್ಯದಲ್ಲಿ ಕೇವಲ 10 ರನ್ಗಳಿಸಲು ಮಾತ್ರ ಯಶಸ್ವಿಯಾಗಿದ್ದ ವಿಜಯ್ ಅವರನ್ನು ಬಳಿಕ ಸಿಎಸ್ಕೆ ತಂಡವು ಕೈಬಿಟ್ಟಿತ್ತು. ಅಲ್ಲದೆ 2021 ರಲ್ಲಿ ಮುರಳಿ ವಿಜಯ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಹೀಗಾಗಿ ಈ ಬಾರಿಯ ಐಪಿಎಲ್ ಹರಾಜು ಪಟ್ಟಿಯಲ್ಲೂ ಕಾಣಿಸಿಕೊಂಡಿರಲಿಲ್ಲ.
ಇದನ್ನೂ ಓದಿ: Dinesh Karthik: ಮೋಸ, ಖಿನ್ನತೆ, ಆತ್ಮಹತ್ಯೆ ಚಿಂತೆ: ಇದು ಸೋತು ಗೆದ್ದ DK ಯ ಕಥೆ
ಅತ್ತ 2018 ರಲ್ಲಿ ಕೊನೆಯ ಬಾರಿಗೆ ಟೀಮ್ ಇಂಡಿಯಾ ಪರ ಟೆಸ್ಟ್ ಪಂದ್ಯವಾಡಿದ್ದ ಮುರಳಿ ವಿಜಯ್ಗೆ ಆ ಬಳಿಕ ತಂಡದಲ್ಲಿ ಅವಕಾಶ ದೊರೆತಿರಲಿಲ್ಲ. ಇದೀಗ ದಿನೇಶ್ ಕಾರ್ತಿಕ್ 2 ವರ್ಷಗಳ ಬಳಿಕ ತಂಡಕ್ಕೆ ಕಂಬ್ಯಾಕ್ ಮಾಡಿದ ಬೆನ್ನಲ್ಲೇ ಮುರಳಿ ವಿಜಯ್ ಕೂಡ ಪುನರಾಗಮನದ ಮೂಲಕ ಸೆಕೆಂಡ್ ಇನಿಂಗ್ಸ್ ಆರಂಭಿಸಿದ್ದಾರೆ.