ILT20 League: ಚೊಚ್ಚಲ ಯುಎಇ ಟಿ20 ಲೀಗ್ ಗೆದ್ದ ಅದಾನಿ ಒಡೆತನದ ಗಲ್ಫ್ ಜೈಂಟ್ಸ್ ತಂಡ..!
ILT20 League: ಅದಾನಿ ಸ್ಪೋರ್ಟ್ಸ್ ಲೈನ್ ಒಡೆತನದ ಈ ತಂಡ ಅಂತಿಮ ಪಂದ್ಯದಲ್ಲಿ ಡೆಸರ್ಟ್ ವೈಪರ್ಸ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಆಯಿತು.
ಯುಎಇಯಲ್ಲಿ ನಡೆದ ಚೊಚ್ಚಲ ಟಿ20 ಲೀಗ್ನ (IL T20) ಚಾಂಪಿಯನ್ ಪಟ್ಟವನ್ನು ಗಲ್ಫ್ ಜೈಂಟ್ಸ್ (Gulf Giants) ತಂಡಕ್ಕೆ ಕಟ್ಟಲಾಗಿದೆ. ಅದಾನಿ ಸ್ಪೋರ್ಟ್ಸ್ ಲೈನ್ (Adani Sports Line) ಒಡೆತನದ ಈ ತಂಡ ಅಂತಿಮ ಪಂದ್ಯದಲ್ಲಿ ಡೆಸರ್ಟ್ ವೈಪರ್ಸ್ (Desert Vipers) ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಚಾಂಪಿಯನ್ ಆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಸರ್ಟ್ ವೈಪರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 146 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಗಲ್ಫ್ ಜೈಂಟ್ಸ್ ತಂಡ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ಸುಲಭವಾಗಿ ಸಾಧಿಸಿತು. ಗಲ್ಫ್ ತಂಡದ ಗೆಲುವಿನ ದೊಡ್ಡ ಶ್ರೇಯ ಅಂತಿಮ ಪಂದ್ಯದಲ್ಲಿ ಬಿರುಗಾಳಿಯ ಇನ್ನಿಂಗ್ಸ್ ಆಡಿದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಕ್ರಿಸ್ ಲಿನ್‌ಗೆ ಸಲ್ಲುತ್ತದೆ.
ದುಬೈನ ಈ ಲೀಗ್ ಅನ್ನು ಮೊದಲ ಬಾರಿಗೆ ಆಯೋಜಿಸಲಾಗಿದ್ದು ಇದರಲ್ಲಿ ಆರು ತಂಡಗಳು ಭಾಗವಹಿಸಿದ್ದವು. ಜನವರಿ 12ರಿಂದ ಆರಂಭವಾದ ಈ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಒಡೆತನದ ತಂಡಗಳೂ ಸೇರಿದ್ದವು. ಒಂದು ತಿಂಗಳ ಕಾಲ ನಡೆದ ಹಲವು ರೋಚಕ ಪಂದ್ಯಗಳ ಬಳಿಕ ಭಾನುವಾರ ಈ ಲೀಗ್ಗೆ ಹೊಸ ಚಾಂಪಿಯನ್ ತಂಡ ಸಿಕ್ಕಿದೆ.
INDW vs PAKW: ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದ ರೋಚಕ ಕ್ಷಣಗಳು ಇಲ್ಲಿದೆ ನೋಡಿ
ಗಲ್ಫ್ ತಂಡಕ್ಕೆ ಸುಲಭ ಜಯ
ಡೆಸರ್ಟ್ ವೈಪರ್ಸ್ ತಂಡ ನೀಡಿದ 146 ರನ್‌ಗಳ ಟಾರ್ಗೆಟ್ ಗಲ್ಫ್ ತಂಡದ ಅತ್ಯುತ್ತಮ ಬ್ಯಾಟಿಂಗ್ ಲೈನ್‌ಅಪ್ ಮುಂದೆ ಅಷ್ಟು ದೊಡ್ಡದಾಗಿರಲಿಲ್ಲ. ಆದರೆ ಈ ಗುರಿ ಬೆನ್ನಟ್ಟಿದ ತಂಡದ ಆರಂಭ ಅಷ್ಟು ಉತ್ತಮವಾಗಿರಲಿಲ್ಲ. ತಂಡ 26 ರನ್ ಗಳಿಸುವಷ್ಟರಲ್ಲಿ ಜೇಮ್ಸ್ ವಿನ್ಸ್ (14) ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (1) ವಿಕೆಟ್ ಕಳೆದುಕೊಂಡಿತು. ಆದಾಗ್ಯೂ, ತಂಡದ ಆರಂಭಿಕ ಆಟಗಾರ ಕ್ರಿಸ್ ಲಿನ್ ಅವರ ಬಿರುಗಾಳಿಯ ಬ್ಯಾಟಿಂಗ್ ಮುಂದೆ ವೈಪರ್ಸ್ ಬೌಲರ್‌ಗಳು ಕೊಚ್ಚಿ ಹೊದರು. ಗಲ್ಫ್ ಪರ ಅಬ್ಬರದ ಇನ್ನಿಂಗ್ಸ್ ಆಡಿದ ಲಿನ್ 50 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಂತೆ 72 ರನ್ ಚಚ್ಚಿದರು.
ಹಸರಂಗ ಅರ್ಧಶತಕ ವ್ಯರ್ಥ
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ವೈಪರ್ಸ್ ತಂಡದ ಆರಂಭವೂ ಕೂಡ ಉತ್ತಮವಾಗಿರಲಿಲ್ಲ. 25 ರನ್ ಗಳಿಸುವಷ್ಟರಲ್ಲಿ ತಂಡ ಮೂರು ವಿಕೆಟ್ ಕಳೆದುಕೊಂಡಿತ್ತು. ಆದರೆ ತಂಡಕ್ಕೆ ಕೊಂಚ ನೆರವಾದ ಶ್ರೀಲಂಕಾದ ಬೌಲರ್ ವನಿಂದು ಹಸರಂಗ ತಂಡದ ಸ್ಕೋರ್ ಅನ್ನು 146ಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಆಟಗಾರ 27 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಿತ 55 ರನ್ ಗಳಿಸಿದರು. ಅವರಲ್ಲದೆ ಸ್ಯಾಮ್ ಬಿಲ್ಲಿಂಗ್ಸ್ ಕೂಡ 31 ರನ್‌ಗಳ ಪ್ರಮುಖ ಇನ್ನಿಂಗ್ಸ್ ಆಡಿದರು. ಇವರಿಬ್ಬರ ನಡುವೆ ಐದನೇ ವಿಕೆಟ್‌ಗೆ 72 ರನ್‌ಗಳ ಮಹತ್ವದ ಜೊತೆಯಾಟವಿತ್ತು. ಆದಾಗ್ಯೂ, ಮೂರು ರನ್‌ಗಳ ಅಂತರದಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಯಾವುದೇ ಬ್ಯಾಟ್ಸ್‌ಮನ್ ತಂಡದ ಪರ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಗಲ್ಫ್ ಜೈಂಟ್ಸ್ ಪರ ಕಾರ್ಲೋಸ್ ಬ್ರಾಥ್‌ವೈಟ್ ಮೂರು ಮತ್ತು ಕೈಸ್ ಅಹ್ಮದ್ ಎರಡು ವಿಕೆಟ್ ಪಡೆದರೆ, ಕ್ರಿಸ್ ಜೋರ್ಡಾನ್ ಮತ್ತು ಕಾಲಿನ್ ಡಿ ಗ್ರಾಂಡ್ಹೋಮ್ ತಲಾ 1 ವಿಕೆಟ್ ಪಡೆದರು.
ಟೂರ್ನಿಯ ವಿಶೇಷ ಪ್ರಶಸ್ತಿಗಳ ವಿನ್ನರ್ಸ್
- ಸ್ಮಾರ್ಟ್ ಬೌಲರ್ – ಟಾಮ್ ಕರನ್
- ಬಜ್ಮೇಕರ್ – ಅಲೆಕ್ಸ್ ಹೇಲ್ಸ್
- ಗ್ರೀನ್ ಬೆಲ್ಟ್ (ಹೆಚ್ಚು ರನ್) – ಅಲೆಕ್ಸ್ ಹೇಲ್ಸ್
- ವೈಟ್ ಬೆಲ್ಟ್ (ಹೆಚ್ಚು ವಿಕೆಟ್) – ಕ್ರಿಸ್ ಜೋರ್ಡಾನ್ – 20 ವಿಕೆಟ್
- ರೆಡ್ ಬೆಲ್ಟ್ (ಅತ್ಯಂತ ಮೌಲ್ಯಯುತ ಆಟಗಾರ) – ಕ್ರಿಸ್ ಜೋರ್ಡಾನ್
- ಬ್ಲೂ ಬೆಲ್ಟ್ (ಯುಎಇಯ ಅತ್ಯುತ್ತಮ ಆಟಗಾರ) – ಮೊಹಮ್ಮದ್ ವಾಸಿಮ್
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:32 am, Mon, 13 February 23