ಭಾರತೀಯ ಮೂಲದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ: ರಚಿನ್ ರವೀಂದ್ರ
Rachin Ravindra: ರಚಿನ್ ರವೀಂದ್ರ ನ್ಯೂಝಿಲೆಂಡ್ ತಂಡದ ಭರವಸೆಯ ಯುವ ಆಲ್ರೌಂಡರ್. ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿರುವ ರಚಿನ್ ಇದೇ ಮೊದಲ ಬಾರಿಗೆ ಭಾರತದ ವಿರುದ್ಧ ಟೆಸ್ಟ್ ಪಂದ್ಯವಾಡಲು ಆಗಮಿಸಿದ್ದಾರೆ. ಅದರಲ್ಲೂ ತಂದೆ ತವರು ಬೆಂಗಳೂರಿನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡಲು ಉತ್ಸುಕರಾಗಿದ್ದಾರೆ.
ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಬುಧವಾರದಿಂದ (ಅ.16) ಶುರುವಾಗಲಿದೆ. ಈ ಸರಣಿಗೆ ಆಯ್ಕೆಯಾಗಿರುವ ನ್ಯೂಝಿಲೆಂಡ್ ಬಳಗದಲ್ಲಿ ಭಾರತೀಯ ಮೂಲದ ರಚಿನ್ ರವೀಂದ್ರ ಕೂಡ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮೊದಲ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಕಣಕ್ಕಿಳಿಯಲು ರಚಿನ್ ಉತ್ಸುಕರಾಗಿದ್ದಾರೆ. ಏಕೆಂದರೆ ರಚಿನ್ ರವೀಂದ್ರ ಮೂಲತಃ ಕರ್ನಾಟಕದವರು. ಹೀಗಾಗಿಯೇ ತಂದೆಯ ತವರು ಬೆಂಗಳೂರಿನಲ್ಲಿ ಕಣಕ್ಕಿಳಿಯಲು ಯುವ ಆಲ್ರೌಂಡರ್ ಕಾತುರರಾಗಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಚಿನ್ ರವೀಂದ್ರ, ನನ್ನ ಭಾರತೀಯ ಮೂಲದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಬೆಂಗಳೂರು ನನ್ನ ಕುಟುಂಬಸ್ಥರು ನೆಲೆಸಿರುವ ಸ್ಥಳ. ಇಲ್ಲಿ ಆಡಲು ಸಾಧ್ಯವಾಗುವುದು ನನ್ನ ಪಾಲಿಗೆ ವಿಶೇಷ ಕ್ಷಣ. ನಾನು ಬೆಂಗಳೂರಿನಲ್ಲಿ ಕಣಕ್ಕಿಳಿಯುವುದನ್ನು ನನ್ನ ತಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೂತು ನೋಡಲಿದ್ದಾರೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯವು ನನ್ನ ಪಾಲಿಗೆ ಅಸ್ಮರಣೀಯ ಎಂದು ರಚಿನ್ ರವೀಂದ್ರ ಹೇಳಿದ್ದಾರೆ.
ಯಾರು ಈ ರಚಿನ್ ರವೀಂದ್ರ?
ರಚಿನ್ ರವೀಂದ್ರ ಮೂಲತಃ ಬೆಂಗಳೂರಿನ ಹುಡುಗ. ಬೆಂಗಳೂರು ಮೂಲದ ರವೀಂದ್ರ ಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ಅವರ ಮಗ. ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ರವೀಂದ್ರ ಕೃಷ್ಣಮೂರ್ತಿ ಅವರು 1990ರಲ್ಲಿ ನ್ಯೂಝಿಲೆಂಡ್ಗೆ ತೆರಳಿದ್ದರು. ಆ ಬಳಿಕ ಅಲ್ಲಿಯೇ ನೆಲೆಸಿದ್ದರು. ಅತ್ತ ಕ್ರಿಕೆಟ್ ಪ್ರೇಮಿಯಾಗಿದ್ದ ರವಿ ಕೃಷ್ಣಮೂರ್ತಿ ಹಟ್ ಹಾಕ್ಸ್ ಕ್ರಿಕೆಟ್ ಕ್ಲಬ್‌ನ ಸ್ಥಾಪಿಸಿದ್ದರು.
ಬಳಿಕ ಮಗ ಕೂಡ ತಂದೆಯ ಹಾದಿಯಲ್ಲೇ ಸಾಗಿದರು. ಅದರಂತೆ ಬಾಲ್ಯದಿಂದಲೇ ಭಾರತದಲ್ಲಿ ಹಾಗೂ ನ್ಯೂಝಿಲೆಂಡ್ನಲ್ಲಿ ಕ್ರಿಕೆಟ್ ಟ್ರೈನಿಂಗ್ ಪಡೆದ ರಚಿನ್ ಕಿವೀಸ್ ಕಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದರು. 2016 ರ ಅಂಡರ್ -19 ವಿಶ್ವಕಪ್ ಮತ್ತು 2018 ರ ಅಂಡರ್ -19 ಕ್ರಿಕೆಟ್ ವಿಶ್ವಕಪ್‌ನಲ್ಲಿ ನ್ಯೂಝಿಲೆಂಡ್ ಅನ್ನು ಪ್ರತಿನಿಧಿಸಿದ್ದರು.
ಇದನ್ನೂ ಓದಿ: IPL 2025: RCB ತಂಡದಿಂದ ಗ್ರೀನ್ಗೆ ಗೇಟ್ ಪಾಸ್..!
ಇದೀಗ ರಾಷ್ಟ್ರೀಯ ತಂಡದ ಆಟಗಾರನಾಗಿರುವ ರಚಿನ್ ರವೀಂದ್ರ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಆಡಲು ಆಗಮಿಸಿದ್ದಾರೆ. ಅದರಲ್ಲೂ ತಂದೆಯ ತವರು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ.
ರಚಿನ್ ರವೀಂದ್ರ ವೃತ್ತಿಜೀವನ:
ನ್ಯೂಝಿಲೆಂಡ್ ಪರ 9 ಟೆಸ್ಟ್ ಪಂದ್ಯಗಳನ್ನಾಡಿರುವ ರಚಿನ್ ರವೀಂದ್ರ 1 ದ್ವಿಶತಕ ಹಾಗೂ 1 ಶತಕದೊಂದಿಗೆ ಒಟ್ಟು 672 ರನ್ ಕಲೆಹಾಕಿದ್ದಾರೆ. ಹಾಗೆಯೇ 25 ಏಕದಿನ ಪಂದ್ಯಗಳಿಂದ 3 ಶತಕಗಳೊಂದಿಗೆ 820 ರನ್ಗಳಿಸಿದ್ದಾರೆ. ಇನ್ನು 23 ಟಿ20 ಪಂದ್ಯಗಳಿಂದ 231 ರನ್ ಕಲೆಹಾಕಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 41 ವಿಕೆಟ್ಗಳನ್ನು ಸಹ ಪಡೆದಿದ್ದಾರೆ.