ಇಮ್ರಾನ್ ಖಾನ್​ಗೆ ಪಿಸಿಬಿ ಅವಮಾನ: ರಾಜಕೀಯ ಸೇಡು ಎಂದ ಭಾರತೀಯ ಕ್ರಿಕೆಟಿಗ

| Updated By: ಝಾಹಿರ್ ಯೂಸುಫ್

Updated on: Aug 16, 2023 | 5:52 PM

Kirti Azad: ಟೀಮ್ ಇಂಡಿಯಾ ಪರ 7 ಟೆಸ್ಟ್ ಪಂದ್ಯಗಳಲ್ಲಿ 135 ರನ್ ಹಾಗೂ 3 ವಿಕೆಟ್ ಪಡೆದಿದ್ದಾರೆ. ಹಾಗೆಯೇ 25 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕೀರ್ತಿ ಆಝಾದ್ 269 ರನ್ ಹಾಗೂ 7 ವಿಕೆಟ್ ಕಬಳಿಸಿದ್ದಾರೆ.

ಇಮ್ರಾನ್ ಖಾನ್​ಗೆ ಪಿಸಿಬಿ ಅವಮಾನ: ರಾಜಕೀಯ ಸೇಡು ಎಂದ ಭಾರತೀಯ ಕ್ರಿಕೆಟಿಗ
Imran Khan-Kirti Azad
Follow us on

ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯಂದು ಪಾಕ್ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದ ವಿಡಿಯೋವೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಇಂತಹದೊಂದು ವಿವಾದ ಹುಟ್ಟಿಕೊಳ್ಳಲು ಮುಖ್ಯ ಕಾರಣ ಈ ವಿಡಿಯೋದಲ್ಲಿ ಪಾಕಿಸ್ತಾನ್ ಕ್ರಿಕೆಟ್ ತಂಡ ಕಂಡಂತಹ ಶ್ರೇಷ್ಠ ನಾಯಕ ಇಮ್ರಾನ್ ಖಾನ್ ಅವರನ್ನು ತೋರಿಸದೇ ಇರುವುದು.

ಆಗಸ್ಟ್ 14 ರಂದು, ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ದೇಶದ ಕ್ರಿಕೆಟ್​ ಸಾಧನೆಗಳ ಕುರಿತಾದ ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು. ಈ ವಿಡಿಯೋದಲ್ಲಿ 1992 ರ ವಿಶ್ವಕಪ್ ವಿಜೇತ ತಂಡದ ನಾಯಕ ಇಮ್ರಾನ್ ಖಾನ್ ಅವರ ಫೋಟೋ ಅಥವಾ ವಿಡಿಯೋ ಕ್ಲಿಪ್​ ಅನ್ನು ತೋರಿಸಿಲ್ಲ. ಇತ್ತ ವಿಡಿಯೋದಲ್ಲಿ ಶ್ರೇಷ್ಠ ನಾಯಕನನ್ನು ಕೈಬಿಟ್ಟಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಈ ವಿಡಿಯೋದಲ್ಲಿ ಅಂತಹದ್ದೇನಿದೆ?

ಪಾಕಿಸ್ತಾನದ ಪಿತಾಮಹ ಎಂದು ಕರೆಯಲ್ಪಡುವ ಮೊಹಮ್ಮದ್ ಅಲಿ ಜಿನ್ನಾ ಅವರ ಫೋಟೋದೊಂದಿಗೆ ಈ ವಿಡಿಯೋ ಶುರುವಾಗುತ್ತದೆ. ಅಲ್ಲದೆ 1952 ರಲ್ಲಿ ಪಾಕಿಸ್ತಾನ್ ಕ್ರಿಕೆಟ್​ ತಂಡದ ಉದಯದ ಮಾಹಿತಿಯೊಂದಿಗೆ 1986 ರಲ್ಲಿ ಶಾರ್ಜಾದಲ್ಲಿ ನಡೆದ ಏಷ್ಯಾ ಕಪ್‌ನ ಫೈನಲ್‌ನಲ್ಲಿ ಭಾರತದ ಚೇತನ್ ಶರ್ಮಾ ವಿರುದ್ಧ ಜಾವೇದ್ ಮಿಯಾಂದಾದ್ ಬಾರಿಸಿದ ಸಿಕ್ಸರ್ ಅನ್ನು ತೋರಿಸಲಾಗಿದೆ.

ಹಾಗೆಯೇ 1992 ವಿಶ್ವಕಪ್​ನಲ್ಲಿನ ಇಂಝಮಾಮ್ ಉಲ್ ಹಕ್ ಅವರ ಭರ್ಜರಿ ಬ್ಯಾಟಿಂಗ್, ವಿಶ್ವಕಪ್ ಎತ್ತಿ ಹಿಡಿದ ಪಾಕ್ ತಂಡವನ್ನು ಈ ವಿಡಿಯೋದಲ್ಲಿ ಕಾಣಬಹುದು. ಆದರೆ ಈ ತಂಡದಲ್ಲಿ ಎಲ್ಲೂ ಕೂಡ ನಾಯಕ ಇಮ್ರಾನ್ ಖಾನ್ ಕಾಣಿಸಿಕೊಳ್ಳುವುದಿಲ್ಲ ಎಂಬುದೇ ಅಚ್ಚರಿ.

ಅಂದರೆ ವಿಶ್ವಕಪ್ ವಿಜೇತ ತಂಡದ ನಾಯಕ ಇಮ್ರಾನ್ ಖಾನ್ ಅವರು ಇಲ್ಲದ ಫೋಟೋವನ್ನು ಬಳಸಲಾಗಿಲ್ಲ. ಅಥವಾ ಅವರನ್ನು ಮರೆಮಾಚಿದ ಫೋಟೋಗಳನ್ನು ಈ ವಿಡಿಯೋ ಕ್ಲಿಪ್​ನಲ್ಲಿ ತೋರಿಸಲಾಗಿದೆ. ಇದಲ್ಲದೆ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಶೊಯೇಬ್ ಅಖ್ತರ್ ಎಸೆತದಲ್ಲಿ ಸಚಿನ್ ತೆಂಡೂಲ್ಕರ್ ಕ್ಲೀನ್ ಬೌಲ್ಡ್ ಆಗಿರುವುದು ಕೂಡ ವಿಡಿಯೋದಲ್ಲಿದೆ.

ಹೀಗೆ ಸಾಗುವ ವಿಡಿಯೋ ತುಣುಕಿನಲ್ಲಿ ವಾಸಿಂ ಅಕ್ರಮ್, ಜಾವೇದ್ ಮಿಯಾಂದಾದ್, ಸಲೀಂ ಮಲಿಕ್, ಶಾಹಿದ್ ಅಫ್ರಿದಿ ಸೇರಿದಂತೆ ಹಲವು ಕ್ರಿಕೆಟಿಗರ ಹಾಗೂ ಪಾಕ್ ತಂಡದ ಸಾಧನೆಗಳನ್ನು ತೋರಿಸಲಾಗಿದೆ. ಇದಾಗ್ಯೂ ಎಲ್ಲೂ ಕೂಡ ಕಪ್ತಾನ್ ಖಾನ್ ಖ್ಯಾತಿಯ ಇಮ್ರಾನ್ ಖಾನ್ ಅವರ ಯಾವುದೇ ಕ್ಲಿಪ್ ಅಥವಾ ಫೋಟೋವನ್ನು ಬಳಸಿಕೊಳ್ಳದಿರುವುದು ವಿಪಯಾರ್ಸ.

ರಾಜಕೀಯ ಸೇಡು:

ದೇಶದ ಕ್ರಿಕೆಟ್ ಸಾಧನೆಯನ್ನು ಬಿಂಬಿಸಿದ ವಿಡಿಯೋದಲ್ಲಿ ನಾಯಕ ಇಮ್ರಾನ್ ಖಾನ್ ಅವರನ್ನು ಮೂಲೆಗುಂಪಾಗಿಸಿದ್ದು ರಾಜಕೀಯ ಸೇಡು ಎಂದು ಅಭಿಪ್ರಾಯಪಟ್ಟಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಕೀರ್ತಿ ಆಝಾದ್. ಒಬ್ಬ ಶ್ರೇಷ್ಠ ನಾಯಕನನ್ನು ಪ್ರಮುಖ ವಿಡಿಯೋದಿಂದ ಹೊರಗಿಡುವುದನ್ನು ರಾಜಕೀಯ ಸೇಡು ತೀರಿಸಿಕೊಳ್ಳುವಿಕೆ ಎನ್ನದೇ, ಅದನ್ನು ಬೇರೆ ಹೇಗೆ ವಿವರಿಸಬಹುದು? ಎಂದು ಆಝಾದ್ ಪ್ರಶ್ನಿಸಿದ್ದಾರೆ.

ಇಮ್ರಾನ್ ಖಾನ್ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಪಿಸಿಬಿಯ ಈ ನಡೆ ಓರ್ವ ಕ್ರಿಕೆಟಿಗನಿಗೆ ಹಾಗೂ ಅವರನ್ನು ಪ್ರೀತಿಸುವವರಿಗೆ ಮಾಡಿದ ಅವಮಾನ. ಜಾತಿ, ಮತ, ಧರ್ಮ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳ ಆಧಾರದ ಮೇಲೆ ವಿಭಜನೆಗೆ ಕ್ರೀಡೆಯಲ್ಲಿ ಸ್ಥಾನವಿಲ್ಲ ಎಂದು ನಾನು ನಂಬುತ್ತೇನೆ.

ಈ ರೀತಿಯ ವೀಡಿಯೊಗಳು ಯಾವ ಸರ್ಕಾರವು ಅಧಿಕಾರದಲ್ಲಿದೆ ಮತ್ತು ಯಾರನ್ನು ಹೊರಗಿಡಬೇಕು ಎಂಬುದರ ಮೇಲೆ ನಿರ್ಧಾರಿತವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಈ ವಿಷಯದಲ್ಲಿ ಹೆಚ್ಚು ಉದಾರವಾಗಿರಬಹುದಿತ್ತು ಎಂದು ಕೀರ್ತಿ ಆಝಾದ್ ತಿಳಿಸಿದ್ದಾರೆ ತಿಳಿಸಿದ್ದಾರೆ.

ಇಮ್ರಾನ್ ಖಾನ್ ನನ್ನ ಉತ್ತಮ ಸ್ನೇಹಿತರಲ್ಲಿ ಒಬ್ಬರು. ಅದರಲ್ಲೂ ಶ್ರೇಷ್ಠ ಕ್ರಿಕೆಟಿಗ. 1980 ರ ದಶಕದಲ್ಲಿ ಅವರು ದಕ್ಷಿಣ ಆಫ್ರಿಕಾದ ಕ್ಲೈವ್ ರೈಸ್, ನ್ಯೂಜಿಲೆಂಡ್‌ನ ಸರ್ ರಿಚರ್ಡ್ ಹ್ಯಾಡ್ಲೀ, ಇಂಗ್ಲೆಂಡ್‌ನ ಇಯಾನ್ ಬೋಥಮ್ ಮತ್ತು ವಿಶ್ವ ಚಾಂಪಿಯನ್ ಕಪಿಲ್ ದೇವ್ ಅವರೊಂದಿಗೆ ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಆಟಗಾರ.

ಕಪಿಲ್ ದೇವ್ ಮತ್ತು ಇಮ್ರಾನ್ ಖಾನ್ ನಡುವಿನ ಪೈಪೋಟಿ ನನಗೆ ಈಗಲೂ ನೆನಪಿದೆ. ಏಷ್ಯಾದ ಈ ಇಬ್ಬರು ದಂತಕಥೆಗಳು ಒಬ್ಬರನ್ನೊಬ್ಬರು ಮೀರಿಸಲು ಪ್ರಯತ್ನಿಸುತ್ತಿದ್ದವು ಎಂದು ಇದೇ ವೇಳೆ ಕೀರ್ತಿ ಆಝಾದ್ ನೆನಪಿಸಿಕೊಂಡಿದ್ದಾರೆ.

ಕ್ಯಾಪ್ಟನ್ ಈಗ ರಾಜಕೀಯ ನಾಯಕ:

ಪಿಸಿಬಿಯ ಈ ನಡೆಯನ್ನು ಕೀರ್ತಿ ಆಝಾದ್ ರಾಜಕೀಯ ಸೇಡು ಎಂದು ಕರೆಯಲು ಮುಖ್ಯ ಕಾರಣ ಇಮ್ರಾನ್ ಖಾನ್ ಈಗ ರಾಜಕಾರಣಿ. ಅಲ್ಲದೆ ಈ ಹಿಂದೆ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ಹಾಗೆಯೇ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಎಂಬ ರಾಜಕೀಯ ಪಕ್ಷದ ಸ್ಥಾಪಕರು. ಹೀಗಾಗಿಯೇ ಪಿಸಿಬಿ ಇಮ್ರಾನ್ ಖಾನ್ ಅವರನ್ನು ರಾಜಕೀಯ ಕಾರಣಕ್ಕೆ ವಿಡಿಯೋದಿಂದ ಹೊರಗಿಟ್ಟಿದೆ ಎಂದು ಕೀರ್ತಿ ಆಝಾದ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತ ವಿಶ್ವಕಪ್ ತಂಡದಿಂದ 7 ಆಟಗಾರರು ಔಟ್..!

ಪಾಕಿಸ್ತಾನದ ಮಾಜಿ ಪ್ರಧಾನಿ:

2018 ರಲ್ಲಿ ಪಾಕಿಸ್ತಾನದ 22ನೇ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದ ಇಮ್ರಾನ್ ಖಾನ್ ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸಿದ್ದರು. ಆ ಬಳಿಕ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತದ ನಂತರ ಅವರನ್ನು ಪದಚ್ಯುತಗೊಳಿಸಲಾಯಿತು.

ಈ ಉಚ್ಚಾಟನೆಯನ್ನು ಇಮ್ರಾನ್ ಖಾನ್ “ವಿದೇಶಿ ಪಿತೂರಿ” ಎಂದು ಕರೆದಿದ್ದರು. ಆ ಬಳಿಕ ಭ್ರಷ್ಟಾಚಾರದ ಆರೋಪದಲ್ಲಿ ಅವರು ಮೂರು ವರ್ಷಗಳ ಕಾಲ ಜೈಲುವಾಸ ಅನುಭವಿಸಿದರು. ಇದೀಗ ಮತ್ತೊಮ್ಮೆ ಬಂಧನಕ್ಕೊಳಗಾಗಿರುವ ಇಮ್ರಾನ್ ಖಾನ್ ಅವರ ಮೇಲ್ಮನವಿಯ ವಿಚಾರಣೆ ಆಗಸ್ಟ್ 16 ರಂದು ಪಾಕಿಸ್ತಾನ ಹೈಕೋರ್ಟ್‌ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

ಯಾರು ಈ ಕೀರ್ತಿ ಆಝಾದ್?

ಇಮ್ರಾನ್ ಖಾನ್ ಅವರನ್ನು ವಿಡಿಯೋದಿಂದ ಹೊರಗಿಟ್ಟಿರುವ ಪಿಸಿಬಿ ನಡೆಯನ್ನು ಖಂಡಿಸಿರುವ ಕೀರ್ತಿವರ್ಧನ್ ಭಾಗವತ್ ಝಾ ಆಝಾದ್ (ಕೀರ್ತಿ ಆಝಾದ್) ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ. 1983 ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಅಲ್ಲದೆ ಟೀಮ್ ಇಂಡಿಯಾ ಪರ 7 ಟೆಸ್ಟ್ ಪಂದ್ಯಗಳಲ್ಲಿ 135 ರನ್ ಹಾಗೂ 3 ವಿಕೆಟ್ ಪಡೆದಿದ್ದಾರೆ. ಹಾಗೆಯೇ 25 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕೀರ್ತಿ ಆಝಾದ್ 269 ರನ್ ಹಾಗೂ 7 ವಿಕೆಟ್ ಕಬಳಿಸಿದ್ದಾರೆ.