VIDEO: ಮಿಂಚಿನ ವೇಗ, ಹದ್ದಿನ ಕಣ್ಣು… ರಮಣ್ದೀಪ್ ಹಿಡಿದ ಕ್ಯಾಚ್ ನೋಡಿ ದಂಗಾದ ಪ್ರೇಕ್ಷಕರು..!
India A vs Pakistan A: ಉದಯೋನ್ಮುಖ ತಂಡಗಳ ನಡುವಣ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಎ ತಂಡ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ಎ ತಂಡವನ್ನು 7 ರನ್ಗಳಿಂದ ಸೋಲಿಸುವ ಮೂಲಕ ಟೀಮ್ ಇಂಡಿಯಾ 2 ಅಂಕಗಳನ್ನು ಕಲೆಹಾಕಿದೆ.
ಒಮಾನ್ನಲ್ಲಿ ನಡೆಯುತ್ತಿರುವ ಎಮರ್ಜಿಂಗ್ ಏಷ್ಯಾಕಪ್ ಟಿ20 ಟೂರ್ನಿಯ 4ನೇ ಪಂದ್ಯದಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದು ಟೀಮ್ ಇಂಡಿಯಾದ ರಮಣ್ದೀಪ್ ಸಿಂಗ್ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಭಾರತ ಎ ಮತ್ತು ಪಾಕಿಸ್ತಾನ್ ಎ ತಂಡಗಳ ನಡುವಣ ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ತಿಲಕ್ ವರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡಕ್ಕೆ ಅಭಿಷೇಕ್ ಶರ್ಮಾ (35) ಹಾಗೂ ಪ್ರಭ್ಸಿಮ್ರಾನ್ (36) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ 44 ರನ್ ಬಾರಿಸಿದರು. ಈ ಮೂಲಕ ಭಾರತ ಎ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು.
184 ರನ್ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಎ ತಂಡವು ಉತ್ತಮ ಆರಂಭವೇನು ಪಡೆದಿರಲಿಲ್ಲ. ಇದಾಗ್ಯೂ ಯಾಸಿರ್ ಖಾನ್ ಕ್ರೀಸ್ ಕಚ್ಚಿ ನಿಲ್ಲುವ ಮೂಲಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಇದರ ನಡುವೆ ನಿಶಾಂತ್ ಸಿಂಧು ಎಸೆದ 9ನೇ ಓವರ್ನ ಮೊದಲ ಎಸೆತದಲ್ಲಿ ಯಾಸಿರ್ ಖಾನ್ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿಯಾಗಿ ಬಾರಿಸಿದ್ದರು. ಇನ್ನೇನು ಚೆಂಡು ಬೌಂಡರಿ ಲೈನ್ ದಾಟಲಿದೆ ಅನ್ನುವಷ್ಟರಲ್ಲಿ ಮಿಂಚಿನ ವೇಗದಲ್ಲಿ ಬಂದ ರಮಣ್ದೀಪ್ ಸಿಂಗ್ ಅದ್ಭುತ ಡೈವಿಂಗ್ನೊಂದಿಗೆ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದರು.
ರಮಣ್ದೀಪ್ ಅವರ ಈ ಮಿಂಚಿನ ಫೀಲ್ಡಿಂಗ್ ನೋಡಿ ಇಡೀ ಪ್ರೇಕ್ಷಕರು ಮೂಕವಿಸ್ಮಿತರಾದರು. ಇದೀಗ ಈ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಕ್ಯಾಚ್ಗಳಲ್ಲಿ ಇದು ಕೂಡ ಒಂದು ಎಂದು ಅನೇಕರು ಬಣ್ಣಿಸಿದ್ದಾರೆ.
ರಮಣ್ದೀಪ್ ಸಿಂಗ್ ಕ್ಯಾಚ್ ವಿಡಿಯೋ:
WHAT DID YOU JUST DO RAMANDEEP! 🤯
A stunning catch from Ramandeep Singh gets rid of the dangerous Yasir Khan! 👋
📺 Watch 👉 #EmergingAsiaCupOnStar | #INDvPAK, LIVE NOW! pic.twitter.com/EyyDkEbsM7
— Star Sports (@StarSportsIndia) October 19, 2024
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 184 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ ಎ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ಎ ತಂಡ 7 ರನ್ಗಳ ರೋಚಕ ಜಯ ಸಾಧಿಸಿದೆ.