IND vs AUS: ಕೊನೆಯ ಪಂದ್ಯದಿಂದ ಗಂಭೀರ್ ದತ್ತು ಪುತ್ರನಿಗೆ ಕೋಕ್? ಕುಲ್ದೀಪ್, ಪ್ರಸಿದ್ಧ್​ಗೆ ಅವಕಾಶ

India vs Australia 3rd ODI: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ 2-0 ಹಿನ್ನಡೆ ಅನುಭವಿಸಿರುವ ಟೀಂ ಇಂಡಿಯಾ, ಸಿಡ್ನಿಯಲ್ಲಿ ಕ್ಲೀನ್ ಸ್ವೀಪ್ ತಪ್ಪಿಸಲು ಯತ್ನಿಸುತ್ತಿದೆ. 3ನೇ ಏಕದಿನ ಪಂದ್ಯಕ್ಕೆ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಪ್ರಮುಖ ಬದಲಾವಣೆಗಳ ನಿರೀಕ್ಷೆಯಿದೆ. ಕುಲ್ದೀಪ್ ಯಾದವ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ತಂಡಕ್ಕೆ ಸೇರುವ ಸಾಧ್ಯತೆಯಿದ್ದು, ಹರ್ಷಿತ್ ರಾಣಾ ಮತ್ತು ವಾಷಿಂಗ್ಟನ್ ಸುಂದರ್ ಹೊರಗುಳಿಯಬಹುದು. ಸ್ಪಿನ್ನರ್‌ಗಳಿಗೆ ನೆರವಾಗುವ ಸಿಡ್ನಿ ಪಿಚ್‌ನಲ್ಲಿ ಭಾರತದ ಬೌಲಿಂಗ್ ಬಲ ಹೆಚ್ಚಿಸಲು ಈ ಬದಲಾವಣೆಗಳು ಸಹಕಾರಿಯಾಗಲಿವೆ.

IND vs AUS: ಕೊನೆಯ ಪಂದ್ಯದಿಂದ ಗಂಭೀರ್ ದತ್ತು ಪುತ್ರನಿಗೆ ಕೋಕ್? ಕುಲ್ದೀಪ್, ಪ್ರಸಿದ್ಧ್​ಗೆ ಅವಕಾಶ
Kuldeep, Harshit

Updated on: Oct 24, 2025 | 8:56 PM

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಸೋತಿರುವ ಟೀಂ ಇಂಡಿಯಾ (India vs Australia) ಈಗ ಸಿಡ್ನಿಯಲ್ಲಿ ಕ್ಲೀನ್ ಸ್ವೀಪ್ ತಪ್ಪಿಸಲು ಪ್ರಯತ್ನಿಸುತ್ತಿದೆ. ಆತಿಥೇಯರು ಪರ್ತ್ ಮತ್ತು ಅಡಿಲೇಡ್ ಏಕದಿನ ಪಂದ್ಯವನ್ನು ಗೆದ್ದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದಾರೆ. ಈಗ, ಟೀಂ ಇಂಡಿಯಾ ತಮ್ಮ ಸೋಲಿನ ನೋವನ್ನು ನಿವಾರಿಸಲು ಯಾವುದೇ ಬೆಲೆ ತೆತ್ತಾದರೂ ಮೂರನೇ ಪಂದ್ಯವನ್ನು ಗೆಲ್ಲಲು ನೋಡುತ್ತಿದೆ. ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯಕ್ಕೆ ಭಾರತೀಯ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕೆಲವು ಬದಲಾವಣೆಗಳನ್ನು ಕಾಣಬಹುದಾಗಿದೆ. ಕುಲ್ದೀಪ್ ಯಾದವ್ (Kuldeep Yadav) ಹಾಗೂ ಪ್ರಸಿದ್ಧ್ ಕೃಷ್ಣಗೆ (Prasidh Krishna) ಅವಕಾಶ ಸಿಗುವ ಸಾಧ್ಯತೆಗಳಿವೆ. ಹಾಗೆಯೇ ಗಂಭೀರ್ ದತ್ತು ಪುತ್ರನೆಂದು ಪ್ರಸಿದ್ಧನಾಗಿರುವ ಹರ್ಷಿತ್ ರಾಣಾ ಹಾಗೂ ವಾಷಿಂಗ್ಟನ್ ಸುಂದರ್​ ಅವರನ್ನು ಹೊರಗಿಡಬಹುದು ಎನ್ನಲಾಗುತ್ತಿದೆ.

ಕುಲ್ದೀಪ್, ಪ್ರಸಿದ್ಧ್​ಗೆ ಅವಕಾಶ?

ಅಕ್ಟೋಬರ್ 25 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಹಾಗೂ ಪ್ರಸಿದ್ಧ್ ಕೃಷ್ಣಗೆ ಅವಕಾಶ ಸಿಗಬಹುದು . 2025 ರ ಏಷ್ಯಾಕಪ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಕುಲ್ದೀಪ್ ಯಾದವ್ ಅವರಿಗೆ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಪಂದ್ಯಗಳಲ್ಲಿ ಆಡಲು ಅವಕಾಶ ನೀಡಲಾಗಿಲ್ಲ. ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭ್​ಮನ್ ಗಿಲ್ ಅವರ ಈ ನಿರ್ಧಾರ ಆಶ್ಚರ್ಯಕರವಾಗಿತ್ತು. ಏಕೆಂದರೆ ಪಿಚ್ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿದ್ದ ಈ ಎರಡೂ ಮೈದಾನಗಳಲ್ಲಿ ಕುಲ್ದೀಪ್​ಗೆ ಅವಕಾಶ ಸಿಗಲಿಲ್ಲ. ಅದರಲ್ಲೂ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ಆಡಮ್ ಜಂಪಾ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಹೀಗಿರುವಾಗ ಕುಲ್ದೀಪ್ ತಂಡದಲ್ಲಿದ್ದಿದ್ದರೆ, ಟೀಂ ಇಂಡಿಯಾಕ್ಕೆ ಖಂಡಿತ ನೆರವಾಗುತಿತ್ತು. ಇದೀಗ ಸಿಡ್ನಿ ಪಿಚ್ ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದನ್ನು ಗಮನಿಸಿದರೆ ಕುಲ್ದೀಪ್ ಯಾದವ್​ಗೆ ಅವಕಾಶ ಸಿಗಬಹುದು.

ಹಾಗೆಯೇ ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಸರಾಗವಾಗಿ ರನ್ ಬಿಟ್ಟುಕೊಟ್ಟಿರುವ ಹರ್ಷಿತ್ ರಾಣಾ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಅವಕಾಶ ಸಿಗಬಹುದು. ಎರಡನೇ ಏಕದಿನ ಪಂದ್ಯದಲ್ಲಿ ಹರ್ಷಿತ್ 2 ವಿಕೆಟ್ ಪಡೆದರಾದರೂ 7.38 ರ ಎಕಾನಮಿಯಲ್ಲಿ 59 ರನ್ ಬಿಟ್ಟುಕೊಟ್ಟರು. ಹಾಗೆಯೇ ಮೊದಲ ಏಕದಿನ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ್ದ ಹರ್ಷಿತ್ ಯಾವುದೇ ವಿಕೆಟ್ ಪಡೆಯದೆ 27 ರನ್ ಬಿಟ್ಟುಕೊಟ್ಟಿದ್ದರು. ಇತ್ತ ಬ್ಯಾಟಿಂಗ್​ನಲ್ಲೂ ಅವರಿಂದ ಯಾವುದೇ ಉಪಯುಕ್ತ ಇನ್ನಿಂಗ್ಸ್ ಮೂಡಿಬಂದಿಲ್ಲ. ಹೀಗಾಗಿ ಅವರ ಬದಲು ಪ್ರಸಿದ್ಧ್ ಕೃಷ್ಣಗೆ ಅವಕಾಶ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಭಾರತದ ಸಂಭಾವ್ಯ ಆಡುವ XI: ರೋಹಿತ್ ಶರ್ಮಾ, ಶುಭ್​ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಪ್ರಸಿದ್ಧ್ ಕೃಷ್ಣ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ