IND vs AUS: ಹ್ಯಾಟ್ರಿಕ್ ಸೊನ್ನೆ ಸುತ್ತುವ ಭಯ; ಸಿಡ್ನಿಯಲ್ಲಿ ಸಿಡಿದೇಳ್ತಾರಾ ಕೊಹ್ಲಿ?
Virat Kohli Duck Streak: ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಶೂನ್ಯಾತಂಕ ಎದುರಿಸುತ್ತಿದ್ದಾರೆ. ಸತತ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿರುವ ಕೊಹ್ಲಿ, ಸಿಡ್ನಿಯಲ್ಲಿ ಮತ್ತೊಂದು ಸೊನ್ನೆಗೆ ಔಟಾದರೆ ಸತತ ಮೂರು ಏಕದಿನ ಪಂದ್ಯಗಳಲ್ಲಿ ಶೂನ್ಯ ಸುತ್ತಿದ ಮೊದಲ ಭಾರತೀಯರಾಗಲಿದ್ದಾರೆ. ಈಗಾಗಲೇ ಸಿಡ್ನಿ ಮೈದಾನದಲ್ಲಿ ಕಳಪೆ ದಾಖಲೆ ಹೊಂದಿರುವ ಕೊಹ್ಲಿ, ಈ ಅನಗತ್ಯ ದಾಖಲೆಯಿಂದ ಪಾರಾಗಿ ಶತಕ ಸಿಡಿಸಲಿ ಎಂಬುದು ಅಭಿಮಾನಿಗಳ ಆಶಯ.

ಪರ್ತ್‌ನಲ್ಲಿ 8 ಎಸೆತಗಳಲ್ಲಿ ಸೊನ್ನೆ, ಅಡಿಲೇಡ್‌ನಲ್ಲಿ 4 ಎಸೆತಗಳಲ್ಲಿ ಸೊನ್ನೆ, ಇದೀಗ ಸಿಡ್ನಿಯಲ್ಲಿ..? ದಶಕಗಳ ಕಾಲ ವಿಶ್ವ ಕ್ರಿಕೆಟ್ ಅನ್ನು ಆಳಿದ್ದ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ( Virat Kohli) ಇದೀಗ ಆಸ್ಟ್ರೇಲಿಯಾ ಪ್ರವಾಸದಲ್ಲಿ ಖಾತೆ ತೆರೆಯುವುದಕ್ಕೂ ಕಷ್ಟ ಪಡುತ್ತಿದ್ದಾರೆ. ಬರೋಬ್ಬರಿ 7 ತಿಂಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿರುವ ವಿರಾಟ್ ಕೊಹ್ಲಿಗೆ ಶೂನ್ಯಾತಂಕ ಶುರುವಾಗಿದೆ. ಒಂದು ವೇಳೆ ಸಿಡ್ನಿಯಲ್ಲೂ ಕೊಹ್ಲಿ ಸಿಡಿದೇಳದೆ ಸೊನ್ನೆಗೆ ಔಟಾದರೆಂದರೆ ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಯಾರಿಗೂ ಬೇಡವಾದ ದಾಖಲೆಗೆ ಕೊರಳೊಡ್ಡಲಿದ್ದಾರೆ. ಕ್ರಿಕೆಟ್ ಲೋಕದಲ್ಲಿ ನೂರಾರು ದಾಖಲೆಗಳ ಸರದಾರನಾಗಿರುವ ಕೊಹ್ಲಿ, ಕೊನೆಯ ಪಂದ್ಯದಲ್ಲಿ ಸೊನ್ನೆ ಸುತ್ತಿ ವಿಶ್ವ ಕ್ರಿಕೆಟ್ನ ಮುಂದೆ ಮುಜುಗರಕ್ಕೊಳಗಾಗದಿರಲಿ ಎಂಬುದು ಕೋಟ್ಯಾಂತರ ಅಭಿಮಾನಿಗಳ ಆಶಯವಾಗಿದೆ.
ಹ್ಯಾಟ್ರಿಕ್ ಸೊನ್ನೆ ಸುತ್ತುವ ಭಯದಲ್ಲಿ ಕೊಹ್ಲಿ
ಅಕ್ಟೋಬರ್ 25 ರ ಶನಿವಾರದಂದು ಸಿಡ್ನಿಯಲ್ಲಿ ನಡೆಯುವ ಕೊನೆಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರೆ ಸತತ ಮೂರು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ ಆರನೇ ಭಾರತೀಯ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಇದಕ್ಕೂ ಮೊದಲು ಸೂರ್ಯಕುಮಾರ್ ಯಾದವ್, ಅನಿಲ್ ಕುಂಬ್ಳೆ, ಜಹೀರ್ ಖಾನ್ ಮತ್ತು ಇಶಾಂತ್ ಶರ್ಮಾ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಆದರೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಆಟಗಾರ ಏಕದಿನ ಸರಣಿಯಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗಿಲ್ಲ.
ಸಿಡ್ನಿ ಏಕದಿನ ಪಂದ್ಯದಲ್ಲಿ ಇದು ಸಂಭವಿಸಿದಲ್ಲಿ, ವಿರಾಟ್ ಕೊಹ್ಲಿ ಹೆಸರಿನಲ್ಲಿ ಅನಗತ್ಯ ದಾಖಲೆ ಸೃಷ್ಟಿಯಾಗುತ್ತದೆ. ಏಕದಿನ ಪಂದ್ಯದಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾದವರ ಪಟ್ಟಿಯಲ್ಲಿ ಅನುಭವಿ ಆಟಗಾರರಿದ್ದಾರೆ. ಇದರಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಿಕಿ ಪಾಂಟಿಂಗ್‌ರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳು ಸೇರಿದ್ದಾರೆ. ಅಲ್ಲದೆ, ಟಾಮ್ ಲೇಥಮ್, ಲ್ಯಾನ್ಸ್ ಕ್ಲೂಸ್ನರ್, ಸೂರ್ಯಕುಮಾರ್ ಯಾದವ್ ಮತ್ತು ಶೋಯೆಬ್ ಮಲಿಕ್ ಏಕದಿನ ಪಂದ್ಯಗಳಲ್ಲಿ ಹ್ಯಾಟ್ರಿಕ್ ಶೂನ್ಯಕ್ಕೆ ಔಟಾಗಿದ್ದಾರೆ.
IND vs AUS: ಆಸ್ಟ್ರೇಲಿಯಾದಲ್ಲಿ ರೋಹಿತ್, ಕೊಹ್ಲಿಯ ಕೊನೆಯ ಪಂದ್ಯ; ಎಷ್ಟು ಗಂಟೆಗೆ ಆರಂಭ?
ಸಿಡ್ನಿ ಮೈದಾನದಲ್ಲಿ ಕೊಹ್ಲಿ ದಾಖಲೆ ಹೇಗಿದೆ?
ಸಿಡ್ನಿ ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆ ತುಂಬಾ ಕೆಟ್ಟದಾಗಿದೆ. ಈ ಮೈದಾನದಲ್ಲಿ ಇದುವರೆಗೆ 7 ಏಕದಿನ ಪಂದ್ಯಗಳನ್ನಾಡಿರುವ ಕೊಹ್ಲಿ ಕೇವಲ 146 ರನ್ ಗಳಿಸಿದ್ದಾರೆ. ಅವರು 25 ಕ್ಕಿಂತ ಕಡಿಮೆ ಸರಾಸರಿಯಲ್ಲಿ ಈ ರನ್ ಗಳಿಸಿದ್ದಾರೆ. ಪ್ರಸ್ತುತ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಈ ಮೈದಾನದಲ್ಲಾದರೂ ಶತಕದ ಇನ್ನಿಂಗ್ಸ್ ಆಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
