IND U19 vs SA U19 Final: ಮಳೆಯಿಂದಾಗಿ ಫೈನಲ್ ಪಂದ್ಯ ರದ್ದು; ಟ್ರೋಫಿ ಹಂಚಿಕೆ

|

Updated on: Jan 11, 2024 | 2:55 PM

IND U19 vs SA U19 Final: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 19 ವರ್ಷದೊಳಗಿನವರ ತ್ರಿಕೋನ ಸರಣಿಯ ಅಂತಿಮ ಪಂದ್ಯ ಬುಧವಾರ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಒಂದೇ ಒಂದು ಎಸೆತವನ್ನು ಎಸೆಯಲಾಗದೆ ಪಂದ್ಯವನ್ನು ರದ್ದುಗೊಳಿಸಲಾಯಿತು.

IND U19 vs SA U19 Final: ಮಳೆಯಿಂದಾಗಿ ಫೈನಲ್ ಪಂದ್ಯ ರದ್ದು; ಟ್ರೋಫಿ ಹಂಚಿಕೆ
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡ
Follow us on

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ 19 ವರ್ಷದೊಳಗಿನವರ (Under 19) ತ್ರಿಕೋನ ಸರಣಿಯ ಫೈನಲ್ ಪಂದ್ಯ ಬುಧವಾರ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಒಂದೇ ಒಂದು ಎಸೆತವನ್ನು ಎಸೆಯಲಾಗದೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ಪಂದ್ಯಕ್ಕೆ ಮೀಸಲು ದಿನ ಇಲ್ಲದ ಕಾರಣ ಎರಡು ತಂಡಗಳ ನಡುವೆ ಟ್ರೋಫಿಯನ್ನು ಹಂಚಲಾಗಿದೆ. ಕನಿಷ್ಠ 20 ಓವರ್‌ಗಳ ಪಂದ್ಯವನ್ನು ಆಡಿಸುವ ಸಲುವಾಗಿ ಮ್ಯಾಚ್ ರೆಫರಿ ಪಂದ್ಯ ಆರಂಭಿಸಲು ಕಟ್-ಆಫ್ ಸಮಯದವರೆಗೆ ಕಾಯ್ದರು. ಆದರೆ ಆ ಸಾಧ್ಯತೆ ಇಲ್ಲದ ಕಾರಣ ಕೊನೆಗೆ ಪಂದ್ಯ ರದ್ದುಗೊಳಿಸುವ ನಿರ್ಧಾರಕ್ಕೆ ಬರಬೇಕಾಯಿತು.

ಲೀಗ್ ಹಂತದಲ್ಲಿ ಭಾರತ ಅಜೇಯ

ಭಾರತ ಅಂಡರ್-19 ಕ್ರಿಕೆಟ್ ತಂಡವು ಲೀಗ್ ಹಂತದಲ್ಲಿ ಎರಡು ಬಾರಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿತ್ತು. ಸರಣಿಯಲ್ಲಿ ಮೊದಲ ಬಾರಿಗೆ ಉಭಯ ತಂಡಗಳ ನಡುವೆ ಪಂದ್ಯ ನಡೆದಾಗ ಟೀಂ ಇಂಡಿಯಾ 7 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‌ಗಳ ಜಯ ಸಾಧಿಸಿತ್ತು. ಟೂರ್ನಮೆಂಟ್‌ನ ಫೈನಲ್‌ನಲ್ಲಿಯೂ ಟೀಂ ಇಂಡಿಯಾ ಅತ್ಯಂತ ಬಲಿಷ್ಠವಾಗಿ ಕಾಣಿಸಿಕೊಂಡಿತ್ತು. ಆದರೆ ವಿಭಿನ್ನ ಹವಾಮಾನದಿಂದಾಗಿ ಟೀಂ ಇಂಡಿಯಾ ಟ್ರೋಫಿಯನ್ನು ಹಂಚಿಕೊಳ್ಳಬೇಕಾಯಿತು. ಲೀಗ್ ಹಂತದಲ್ಲಿ ಭಾರತ ತಂಡ ಎಲ್ಲಾ ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು.

ಅಂಡರ್-19 ಏಷ್ಯಾಕಪ್​ಗೆ ಟೀಂ ಇಂಡಿಯಾ ಪ್ರಕಟ; ಈ ದಿನದಂದು ಭಾರತ- ಪಾಕ್ ಫೈಟ್

ವಿಶ್ವಕಪ್ ಮೇಲೆ ಭಾರತದ ಕಣ್ಣು

ದಕ್ಷಿಣ ಆಫ್ರಿಕಾದಲ್ಲಿ ನಡೆದ ಈ ಸರಣಿಯ ಅಂತಿಮ ಪಂದ್ಯಕ್ಕೆ ಮೀಸಲು ದಿನ ಇಲ್ಲದ ಕಾರಣ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು. ಐದು ಬಾರಿ ಅಂಡರ್-19 ವಿಶ್ವ ಚಾಂಪಿಯನ್ ಆಗಿರುವ ಭಾರತ ಇದೀಗ ಜನವರಿ 19ರಿಂದ ಆರಂಭವಾಗಲಿರುವ ಅಂಡರ್-19 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಶನಿವಾರ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಅಂಡರ್-19 ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ತಂಡವು ಜನವರಿ 17 ರಂದು ಶ್ರೀಲಂಕಾ ವಿರುದ್ಧ ಎರಡನೇ ಅಭ್ಯಾಸ ಪಂದ್ಯವನ್ನು ಆಡಲಿದೆ.

ಅಂಡರ್-19 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಅಭಿಯಾನ ಆರಂಭಿಸಲಿದೆ. ಉದಯ್ ಸಹರನ್ ನೇತೃತ್ವದ ಭಾರತ ತಂಡವು ತ್ರಿಕೋನ ಸರಣಿ ಪಂದ್ಯಾವಳಿಯಲ್ಲಿ ತನ್ನ ಎಲ್ಲಾ ನಾಲ್ಕು ಗುಂಪಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಫೈನಲ್‌ಗೆ ಪ್ರವೇಶಿಸಿತು. ಸಹರಾನ್ ಮತ್ತು ಆದರ್ಶ್ ಸಿಂಗ್ ಲೀಗ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಈ ಪಂದ್ಯಾವಳಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವೆ ನಡೆದಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ