IND vs AFG ಪಂದ್ಯ: 2 ಸಾವಿರ ಪೊಲೀಸರ ನಿಯೋಜನೆ, 1500 ಸಿಸಿ ಕ್ಯಾಮೆರಾ ಕಣ್ಗಾವಲು
India vs Afghanistan: ಭಾರತ-ಅಫ್ಘಾನಿಸ್ತಾನ್ ನಡುವಣ ಮೊದಲ ಪಂದ್ಯಕ್ಕೆ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಲಿದೆ. ಅದಕ್ಕೂ ಮುನ್ನ 6.30 ಕ್ಕೆ ಟಾಸ್ ಪ್ರಕ್ರಿಯೆ ಜರುಗಲಿದೆ.
ಭಾರತ ಮತ್ತು ಅಫ್ಘಾನಿಸ್ತಾನ್ (India vs Afghanistan) ನಡುವಣ ಮೊದಲ ಟಿ20 ಪಂದ್ಯವು ಗುರುವಾರ ಮೊಹಾಲಿಯ ಪಿಸಿಎ ಐಎಸ್ ಬಿಂದ್ರಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಕ್ರೀಡಾಂಗಣದ ಸುತ್ತ ಮುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಸ್ಟೇಡಿಯಂನ ಒಳಗೆ ಮತ್ತು ಹೊರಗೆ 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಪಂದ್ಯಕ್ಕೆ ಒಂದು ದಿನ ಮೊದಲು ಎಸ್‌ಎಸ್‌ಪಿ ಡಾ. ಸಂದೀಪ್ ಗಾರ್ಗ್ ಅವರು ಪಿಸಿಎ ಕ್ರೀಡಾಂಗಣವನ್ನು ಖುದ್ದಾಗಿ ಪರಿಶೀಲಿಸಿದರು. ಈ ವೇಳೆ 1500 ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುವುದು ಎಂದರು. ಪ್ರವೇಶ ದ್ವಾರದಲ್ಲಿ ವಿಡಿಯೋ ಹೆಡ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಪಂದ್ಯ ವೀಕ್ಷಿಸಲು ಬಂದಿರುವ ಒಟ್ಟು ಪ್ರೇಕ್ಷಕರ ಮಾಹಿತಿ ದೊರೆಯಲಿದೆ.
ಇನ್ನು ಬುಧವಾರ ಶ್ವಾನದಳದವರು ಕ್ರೀಡಾಂಗಣದೊಳಗೆ ತಪಾಸಣೆ ನಡೆಸಿದ್ದಾರೆ. ಇದರೊಂದಿಗೆ ಪ್ರತಿ ಚೆಕ್‌ಪಾಯಿಂಟ್‌ನಲ್ಲಿಯೂ ಹೊರಗಿನಿಂದ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗಿದೆ. ಪಂದ್ಯದ ವೇಳೆ ಪಿಸಿಎ ಸ್ಟೇಡಿಯಂನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಎಸ್‌ಎಸ್‌ಪಿ ಡಾ.ಗಾರ್ಗ್ ತಿಳಿಸಿದ್ದಾರೆ.
ಇದಕ್ಕಾಗಿ ಹೊರ ರಾಜ್ಯಗಳಿಂದ ಮತ್ತು ಬೆಟಾಲಿಯನ್‌ಗಳಿಂದ ಪೊಲೀಸರನ್ನು ಕರೆಸಲಾಗಿದೆ. ಪಂದ್ಯದ ವೇಳೆ ಭದ್ರತೆಗಾಗಿ ಕ್ರೀಡಾಂಗಣದ ಹೊರಗೆ ಮತ್ತು ಒಳಗೆ 1000 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸುತ್ತಮುತ್ತ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ 500 ಕ್ಯಾಮೆರಾಗಳನ್ನು ಇಡಲಾಗಿದೆ.
ಕ್ರೀಡಾಂಗಣದಲ್ಲಿ 500 ಮೆಗಾಪಿಕ್ಸೆಲ್ ಸೇರಿದಂತೆ ಒಟ್ಟು ನಾಲ್ಕು ವಿಶೇಷ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದ್ದು, ಇವುಗಳ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಸ್ಪಷ್ಟ ಚಿತ್ರಣವನ್ನು ಕಾಣಬಹುದು. ಇದರಿಂದ ಯಾವುದೇ ಗೊಂದಲದ ಸಂದರ್ಭದಲ್ಲಿ ಪ್ರೇಕ್ಷಕರನ್ನು ಗುರುತಿಸಲು ಸಹಾಯಕವಾಗಲಿದೆ.
ಕ್ರೀಡಾಂಗಣದ ನಾಲ್ಕೂ ದಿಕ್ಕುಗಳಲ್ಲಿ ಈ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆಸನದ ಮೇಲೆ ಕುಳಿತ ವ್ಯಕ್ತಿಯನ್ನು ಗುರುತಿಸಲು ಮತ್ತು ವೀಡಿಯೊದಿಂದ ಸ್ಪಷ್ಟ ಚಿತ್ರವನ್ನು ಹೊರತೆಗೆಯಲಾಗುತ್ತದೆ. ಕ್ಯಾಮೆರಾಗಳ ನಿಯಂತ್ರಣ ಕೊಠಡಿ ಕ್ರೀಡಾಂಗಣದಲ್ಲಿಯೇ ಇರಲಿದ್ದು, ಆಡಳಿತ ಅಧಿಕಾರಿಗಳು ನಿಗಾ ಇಡಲಿದ್ದಾರೆ.
ಇದಲ್ಲದೇ 15 ಗಲಭೆ ನಿಗ್ರಹ ತಂಡಗಳನ್ನು ನಿಯೋಜಿಸಲಾಗಿದೆ. ವೀಕ್ಷಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಎಂಟು ಪಾರ್ಕಿಂಗ್ ಸ್ಲಾಟ್‌ಗಳನ್ನು ಒದಗಿಸಲಾಗಿದೆ. ಕ್ರೀಡಾಂಗಣಕ್ಕೆ ಪ್ರವೇಶಿಸುವಾಗ ಯಾವುದೇ ರೀತಿಯ ತೊಂದರೆಯಾಗದಂತೆ ವೀಕ್ಷಕರಿಗೆ ಅನುಕೂಲವಾಗುವಂತೆ ಫಲಕಗಳನ್ನು ಹಾಕಲು ಪಿಸಿಎ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ ಎಂದು ಎಸ್‌ಎಸ್‌ಪಿ ಡಾ. ಸಂದೀಪ್ ಗಾರ್ಗ್ ತಿಳಿಸಿದ್ದಾರೆ.
ಎಷ್ಟು ಗಂಟೆಗೆ ಪಂದ್ಯ ಶುರು?
ಈ ಸರಣಿ ಮೊದಲ ಪಂದ್ಯಕ್ಕೆ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಲಿದೆ. ಅದಕ್ಕೂ ಮುನ್ನ 6.30 ಕ್ಕೆ ಟಾಸ್ ಪ್ರಕ್ರಿಯೆ ಜರುಗಲಿದೆ.
ಇದನ್ನೂ ಓದಿ: Rahul Dravid: ದ್ರಾವಿಡ್ ಹೆಸರಿನಲ್ಲಿರುವ ಈ ವಿಶ್ವ ದಾಖಲೆ ಮುರಿಯುವುದು ಕನಸು ಮನಸಿನಲ್ಲೂ ಸಾಧ್ಯವಿಲ್ಲ
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಈ ಪಂದ್ಯದ ನೇರ ಪ್ರಸಾರವು ಸ್ಪೋರ್ಟ್ಸ್ 18 ಚಾನೆಲ್ನಲ್ಲಿ ಇರಲಿದೆ. ಹಾಗೆಯೇ ಜಿಯೋ ಸಿನಿಮಾ ಆ್ಯಪ್ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.
Published On - 1:41 pm, Thu, 11 January 24