6 ಭರ್ಜರಿ ಸಿಕ್ಸ್, 13 ಫೋರ್​: ಇಂಗ್ಲೆಂಡ್ ವಿರುದ್ಧ ಸ್ಫೋಟಕ ಸೆಂಚುರಿ ಸಿಡಿಸಿದ ಆಯುಷ್

India U19 vs England U19: ಭಾರತ ಮತ್ತು ಇಂಗ್ಲೆಂಡ್ ನಡುವಣ ಅಂಡರ್-19 ಯೂತ್ ಟೆಸ್ಟ್ ಸರಣಿಯು ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಸರಣಿಯ ಮೊದಲ ಮ್ಯಾಚ್ ಡ್ರಾನಲ್ಲಿ ಅಂತ್ಯವಾದರೆ, ದ್ವಿತೀಯ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ. ಈ ಎರಡು ಮ್ಯಾಚ್​ಗಳಲ್ಲೂ ಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾದ ಯಂಗ್ ಕ್ಯಾಪ್ಟನ್ ಆಯುಷ್ ಮ್ಹಾತ್ರೆ ಸಂಚಲನ ಸೃಷ್ಟಿಸಿದ್ದಾರೆ.

6 ಭರ್ಜರಿ ಸಿಕ್ಸ್, 13 ಫೋರ್​: ಇಂಗ್ಲೆಂಡ್ ವಿರುದ್ಧ ಸ್ಫೋಟಕ ಸೆಂಚುರಿ ಸಿಡಿಸಿದ ಆಯುಷ್
Ayush Mhatre

Updated on: Jul 24, 2025 | 7:58 AM

ಚೆಲ್ಮ್ಸ್‌ಫೋರ್ಡ್​ನ ಕೌಂಟಿ ಗ್ರೌಂಡ್​ನಲ್ಲಿ ನಡೆದ ಇಂಗ್ಲೆಂಡ್ ಅಂಡರ್-19 ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಅಂಡರ್-19 ತಂಡದ ನಾಯಕ ಆಯುಷ್ ಮ್ಹಾತ್ರೆ ಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಆಯುಷ್ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೇವಲ 64 ಎಸೆತಗಳಲ್ಲಿ ಸೆಂಚುರಿ ಮೂಡಿಬಂತು. ಈ ಶತಕದೊಂದಿಗೆ ಯೂತ್ ಟೆಸ್ಟ್​ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡರು.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 309 ರನ್​ಗಳಿಸಿ ಆಲೌಟ್ ಆಗಿದ್ದರು. ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಶುರು ಮಾಡಿದ ಭಾರತ ಆಯುಷ್ ಮ್ಹಾತ್ರೆ (80) ಅವರ ಅರ್ಧಶತಕ ಹಾಗೂ ವಿಯಾನ್ ಮಲ್ಹೋತ್ರಾ (120) ಅವರ ಶತಕದೊಂದಿಗೆ 279 ರನ್ ಕಲೆಹಾಕಿತು.

30 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 5 ವಿಕೆಟ್ ಕಳೆದುಕೊಂಡು 324 ರನ್​ಗಳಿಸಿ ಡಿಕ್ಲೇರ್ ಘೋಷಿಸಿತು. ಅದರಂತೆ ಕೊನೆಯ ಇನಿಂಗ್ಸ್​ನಲ್ಲಿ 355 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾ ಪರ ಆಯುಷ್ ಮ್ಹಾತ್ರೆ ಸ್ಫೋಟಕ ಇನಿಂಗ್ಸ್ ಆಡಿದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಆಯುಷ್ ಇಂಗ್ಲೆಂಡ್ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಯುವ ದಾಂಡಿಗನ ಬ್ಯಾಟ್​ನಿಂದ ಕೇವಲ 64 ಎಸೆತಗಳಲ್ಲಿ ಶತಕ ಮೂಡಿಬಂತು. ಈ ಶತಕದ ಬಳಿಕ ಕೂಡ ಅಬ್ಬರ ಮುಂದುವರೆಸಿದ ಆಯುಷ್ ಮ್ಹಾತ್ರೆ 80 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 13 ಫೋರ್​ಗಳೊಂದಿಗೆ 126 ರನ್​ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.

ಆಯುಷ್ ಮ್ಹಾತ್ರೆ ಅವರ ಈ ಭರ್ಜರಿ ಇನಿಂಗ್ಸ್​ ನೆರವಿನೊಂದಿಗೆ ಟೀಮ್ ಇಂಡಿಯಾ ಕೊನೆಯ ದಿನದಾಟದಲ್ಲಿ 6 ವಿಕೆಟ್ ಕಳೆದುಕೊಂಡು 290 ರನ್​ ಕಲೆಹಾಕಿತು. ಈ ಮೂಲಕ ಇಂಗ್ಲೆಂಡ್ ಅಂಡರ್-19 ವಿರುದ್ಧದ 2ನೇ ಯೂತ್ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಭಾರತ ಅಂಡರ್-19 ತಂಡ ಯಶಸ್ವಿಯಾಗಿದೆ.

ಇಂಗ್ಲೆಂಡ್ ಅಂಡರ್-19 ಪ್ಲೇಯಿಂಗ್ 11: ಆ್ಯಡಮ್ ಥಾಮಸ್ , ಬೆನ್ ಡಾಕಿನ್ಸ್ , ಆರ್ಯನ್ ಸಾವಂತ್ , ರಾಕಿ ಫ್ಲಿಂಟಾಫ್ , ಬೆನ್ ಮೇಯಸ್ , ಥಾಮಸ್ ರೆವ್ (ನಾಯಕ) , ಏಕಾನ್ಶ್ ಸಿಂಗ್ , ರಾಲ್ಫಿ ಆಲ್ಬರ್ಟ್ , ಜೇಮ್ಸ್ ಮಿಂಟೊ , ಅಲೆಕ್ಸ್ ಗ್ರೀನ್ , ಎಎಮ್ ಫ್ರೆಂಚ್.

ಇದನ್ನೂ ಓದಿ: ಟಾಸ್ ಸೋಲುವುದರಲ್ಲೂ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ

ಭಾರತ ಅಂಡರ್-19 ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ , ಆಯುಷ್ ಮ್ಹಾತ್ರೆ (ನಾಯಕ) , ವಿಹಾನ್ ಮಲ್ಹೋತ್ರಾ , ಅಭಿಜ್ಞಾನ್ ಕುಂದು (ವಿಕೆಟ್ ಕೀಪರ್) , ರಾಹುಲ್ ಕುಮಾರ್ , ಹರ್ವಂಶ್ ಪಂಗಾಲಿಯಾ , ಆರ್ ಎಸ್ ಅಂಬ್ರಿಶ್ , ಕಾನಿಷ್ಕ್ ಚೌಹಾಣ್ , ಹೆನಿಲ್ ಪಟೇಲ್ , ನಮನ್ ಪುಷ್ಪಕ್ , ಆದಿತ್ಯ ರಾವತ್.

 

Published On - 7:53 am, Thu, 24 July 25