ಮಿಡಲ್ ಸ್ಟಂಪ್… ಮೊದಲ ಇನಿಂಗ್ಸ್ನ ಹೀರೋನ ಝೀರೋ ಮಾಡಿದ ಬುಮ್ರಾ
Australia vs India, 4th Test: ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ (140) ಭರ್ಜರಿ ಶತಕ ಸಿಡಿಸಿ ಮಿಂಚಿದರೆ, ಭಾರತದ ಪರ ನಿತೀಶ್ ಕುಮಾರ್ ರೆಡ್ಡಿ (114) ಆಕರ್ಷಕ ಸೆಂಚುರಿ ಬಾರಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 474 ರನ್ ಕಲೆಹಾಕಿದರೆ, ಭಾರತ 369 ರನ್ಗಳಿಸಿದೆ.
ಸ್ಯಾಮ್ ಕೊನ್ಸ್ಟಾಸ್… ಮೆಲ್ಬೋರ್ನ್ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಜಸ್ಪ್ರೀತ್ ಬುಮ್ರಾರನ್ನು ಬೆಂಡೆತ್ತುವ ಮೂಲಕ ಯುವ ದಾಂಡಿಗ ಇಡೀ ವಿಶ್ವದ ಗಮನ ಸೆಳೆದಿದ್ದರು. ಅದರಲ್ಲೂ ಬುಮ್ರಾ ಓವರ್ನಲ್ಲಿ 18 ರನ್ ಸಿಡಿಸಿ ಹೊಸ ದಾಖಲೆಯನ್ನು ಸಹ ಬರೆದಿದ್ದರು. ಇದಲ್ಲದೆ ಟೆಸ್ಟ್ ಪಂದ್ಯದಲ್ಲಿ ಬುಮ್ರಾಗೆ 2 ಸಿಕ್ಸ್ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದರು.
ಈ ಮೂಲಕ ಚೊಚ್ಚಲ ಇನಿಂಗ್ಸ್ನಲ್ಲೇ ಬುಮ್ರಾ ಮುಂದೆ ಆರ್ಭಟ ತೋರಿಸಿದ್ದ ಸ್ಯಾಮ್ ಕೊನ್ಸ್ಟಾಸ್ ದ್ವಿತೀಯ ಇನಿಂಗ್ಸ್ನಲ್ಲಿ ಮುಗ್ಗರಿಸಿದ್ದಾರೆ. ಅದು ಕೂಡ ಜಸ್ಪ್ರೀತ್ ಬುಮ್ರಾ ಅವರ ಓವರ್ನಲ್ಲಿ ಎಂಬುದು ವಿಶೇಷ. ಅಂದರೆ ದ್ವಿತೀಯ ಇನಿಂಗ್ಸ್ನಲ್ಲಿ ಕೊನ್ಸ್ಟಾಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವಲ್ಲಿ ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಯಶಸ್ವಿಯಾಗಿದ್ದಾರೆ.
18 ಎಸೆತಗಳಲ್ಲಿ 1 ಫೋರ್ನೊಂದಿಗೆ 8 ರನ್ ಬಾರಿಸಿದ್ದ ಸ್ಯಾಮ್ ಕೊನ್ಸ್ಟಾಸ್ ಅವರ ಮಿಡಲ್ ಸ್ಟಂಪ್ ಎಗರಿಸುವಲ್ಲಿ ಜಸ್ಪ್ರೀತ್ ಬುಮ್ರಾ ಸಫಲರಾಗಿದ್ದು, ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ ಹೀರೋ ಆಗಿ ಮೆರೆದಿದ್ದ ಸ್ಯಾಮ್ ಕೊನ್ಸ್ಟಾಸ್ ಅವರನ್ನು ದ್ವಿತೀಯ ಇನಿಂಗ್ಸ್ನಲ್ಲಿ ಝೀರೊ ಮಾಡುವಲ್ಲಿ ಬುಮ್ರಾ ಯಶಸ್ವಿಯಾಗಿದ್ದಾರೆ.
ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸ್ಯಾಮ್ ಕೊನ್ಸ್ಟಾಸ್ 65 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 60 ರನ್ ಬಾರಿಸಿದ್ದರು. ಹಾಗೆಯೇ ಸ್ಟೀವ್ ಸ್ಮಿತ್ (140) ಭರ್ಜರಿ ಶತಕ ಸಿಡಿಸಿದ್ದರು. ಈ ಮೂಲಕ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 474 ರನ್ ಪೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಟೀಮ್ ಇಂಡಿಯಾ ಪರ ನಿತೀಶ್ ಕುಮಾರ್ ರೆಡ್ಡಿ (114) ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಸೆಂಚುರಿ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 369 ರನ್ಗಳಿಸಿ ಆಲೌಟ್ ಆಗಿದೆ.