ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!

ಖ್ವಾಜಾ ಕ್ಲೀನ್ ಬೌಲ್ಡ್… ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!

ಝಾಹಿರ್ ಯೂಸುಫ್
|

Updated on: Dec 29, 2024 | 7:56 AM

India vs Australia: ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಸ್ಟೀವ್ ಸ್ಮಿತ್ (140) ಭರ್ಜರಿ ಶತಕ ಸಿಡಿಸಿದ್ದರು. ಈ ಮೂಲಕ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​ನಲ್ಲಿ 474 ರನ್ ಪೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಟೀಮ್ ಇಂಡಿಯಾ ಪರ ನಿತೀಶ್ ಕುಮಾರ್ ರೆಡ್ಡಿ (114) ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಸೆಂಚುರಿ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್​ನಲ್ಲಿ 369 ರನ್​​ಗಳಿಸಿ ಆಲೌಟ್ ಆಗಿದೆ.

ಮೆಲ್ಬೋರ್ನ್​​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು 4ನೇ ದಿನದಾಟಕ್ಕೆ ಕಾಲಿಟ್ಟಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 474 ರನ್ ಪೇರಿಸಿದರೆ, ಟೀಮ್ ಇಂಡಿಯಾ 369 ರನ್ ಕಲೆಹಾಕಿದೆ. ಇದೀಗ 105 ರನ್​​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾಗೆ ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದ್ದಾರೆ.

7ನೇ ಓವರ್​ನಲ್ಲಿ ಸ್ಯಾಮ್​ ಕೊನ್​ಸ್ಟಾಸ್ (8) ವಿಕೆಟ್ ಕಬಳಿಸುವ ಮೂಲಕ ಬುಮ್ರಾ ಭಾರತ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರೆ, 19ನೇ ಓವರ್​ನಲ್ಲಿ ಮೊಹಮ್ಮದ್ ಸಿರಾಜ್ 2ನೇ ವಿಕೆಟ್ ಪಡೆದರು. ಅದರಲ್ಲೂ ಮೊದಲ ಇನಿಂಗ್ಸ್​ನಲ್ಲಿ ವಿಕೆಟ್ ಕಬಳಿಸುವಲ್ಲಿ ವಿಫಲರಾಗಿದ್ದ ಸಿರಾಜ್ ಈ ಬಾರಿ ಉಸ್ಮಾನ್ ಖ್ವಾಜಾ (21) ಕ್ಲೀನ್ ಬೌಲ್ಡ್ ಮಾಡಿ ಗಮನ ಸೆಳೆದರು.

ಇತ್ತ ಮೊಹಮ್ಮದ್ ಸಿರಾಜ್ ವಿಕೆಟ್ ಕಬಳಿಸಿದರೆ ಸೈಲೆಂಟ್ ಸೆಲೆಬ್ರೇಷನ್ ಮಾಡುತ್ತಿದ್ದರೆ, ಅತ್ತ ಟೀಮ್ ಇಂಡಿಯಾ ಅಭಿಮಾನಿಗಳು ಡಿಎಸ್​ಪಿ…ಡಿಎಸ್​ಪಿ…ಡಿಎಸ್​ಪಿ ಘೋಷವಾಕ್ಯದೊಂದಿಗೆ ಸಿರಾಜ್ ಅವರನ್ನು ಹುರಿದುಂಬಿಸಿದರು. ಇದೀಗ ಮೆಲ್ಬೋರ್ನ್​ ಕ್ರಿಕೆಟ್ ಮೈದಾನದಲ್ಲಿ ಮೊಳಗಿದ ಡಿಎಸ್​ಪಿ ಘೋಷಣೆಯ ವಿಡಿಯೋ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಟಿ20 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಭಾಗವಾಗಿರುವ ಮೊಹಮ್ಮದ್ ಸಿರಾಜ್ ಅವರಿಗೆ ತೆಲಂಗಾಣ ಸರ್ಕಾರ ಗೌರವಾನ್ವಿತ ಡೆಪ್ಯೂಟಿ ಸೂಪರಿಂಟೆಂಡಂಟ್‌ ಅಫ್‌ ಪೊಲೀಸ್ (DSP) ಹುದ್ದೆ ನೀಡಿದೆ. ಹೀಗಾಗಿಯೇ ಇದೀಗ ಸಿರಾಜ್ ವಿಕೆಟ್ ಕಬಳಿಸಿದರೆ ಸ್ಟೇಡಿಯಂಗಳಲ್ಲಿ ಡಿಎಸ್​ಪಿ ಘೋಷಣೆಗಳು ಕೇಳಿ ಬರುತ್ತಿವೆ.

ಇನ್ನು ಈ ಪಂದ್ಯದ ನಾಲ್ಕನೇ ದಿನದಾಟದ ಭೋಜನಾ ವಿರಾಮದ ವೇಳೆಗೆ ಆಸ್ಟ್ರೇಲಿಯಾ ತಂಡವು 2 ವಿಕೆಟ್ ಕಳೆದುಕೊಂಡು 56 ರನ್ ಕಲೆಹಾಕಿದೆ. ಕ್ರೀಸ್​ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.