IND vs AUS: ರಾಹುಲ್​ಗೆ ಒಂದೇ ಓವರ್​ನಲ್ಲಿ ಎರಡೆರಡು ಜೀವದಾನ! ವಿಡಿಯೋ ನೋಡಿ

KL Rahul: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಜೈಸ್ವಾಲ್ ಶೂನ್ಯಕ್ಕೆ ಔಟ್ ಆದರು. ಆದರೆ ಗಿಲ್ ಮತ್ತು ರಾಹುಲ್ ಅವರಿಂದ ತಂಡಕ್ಕೆ ಅರ್ಧಶತಕದ ಜೊತೆಯಾಟ ಸಿಕ್ಕಿತು. ಈ ವೇಳೆ ರಾಹುಲ್​ಗೆ ಎರಡು ಬಾರಿ ಜೀವದಾನ ಸಿಕ್ಕಿತು.

IND vs AUS: ರಾಹುಲ್​ಗೆ ಒಂದೇ ಓವರ್​ನಲ್ಲಿ ಎರಡೆರಡು ಜೀವದಾನ! ವಿಡಿಯೋ ನೋಡಿ
ಕೆಎಲ್ ರಾಹುಲ್

Updated on: Dec 06, 2024 | 11:40 AM

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಅಡಿಲೇಡ್‌ನಲ್ಲಿ ಇಂದಿನಿಂದ ಆರಂಭವಾಗಿದೆ. ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದು ತಂಡಕ್ಕೆ ಆರಂಭಿಕ ಆಘಾತ ನೀಡಿತು. ಆದರೆ ಆ ಬಳಿಕ ಬಂದ ಶುಭ್​ಮನ್ ಗಿಲ್ ಉತ್ತಮವಾಗಿ ಬ್ಯಾಟ್ ಬೀಸಿ ಬೌಂಡರಿ ಬಾರಿಸುವ ಮೂಲಕ ತಂಡದ ಖಾತೆ ತೆರೆದರು. ನಂತರದ 6 ಓವರ್​ಗಳಲ್ಲಿ ರಾಹುಲ್ ಹಾಗೂ ಗಿಲ್ ನಡುವೆ ತಾಳ್ಮೆಯ ಜೊತೆಯಾಟ ಕಂಡುಬಂತು. ಆದರೆ 8ನೇ ಓವರ್​ನಲ್ಲಿ ಟೀಂ ಇಂಡಿಯಾಕ್ಕೆ ಎರಡು ಬ್ಯಾಕ್ ಟು ಬ್ಯಾಕ್ ಆಘಾತ ಎದುರಾಗಿತ್ತು. ಆದರೆ ಆಸೀಸ್ ಆಟಗಾರರು ಮಾಡಿದ ಎಡವಟ್ಟು ಟೀಂ ಇಂಡಿಯಾ ಪಾಳವನ್ನು ನಿಟ್ಟುಸಿರು ಬಿಡುವಂತೆ ಮಾಡಿತು.

ರಾಹುಲ್​ಗೆ 2 ಜೀವದಾನ

ರಾಹುಲ್ ಹಾಗೂ ಗಿಲ್ ಅವರ ಜೊತೆಯಾಟ ನಿಧಾನವಾಗಿ ಬೆಳೆಯುತ್ತಿರುವುದನ್ನು ಗಮನಿಸಿದ ಆಸೀಸ್ ನಾಯಕ ಕಮಿನ್ಸ್ ಬೌಲಿಂಗ್​ನಲ್ಲಿ ಬದಲಾವಣೆ ಮಾಡಿ ಸ್ಕಾಟ್ ಬೋಲ್ಯಾಂಡ್​ರನ್ನು ದಾಳಿಗಿಳಿಸಿದರು. ಬೋಲ್ಯಾಂಡ್ ಎಸೆದ ಈ ಎಂಟನೇ ಓವರ್‌ನಲ್ಲಿ ಕೆಎಲ್ ರಾಹುಲ್​ಗೆ ಎರಡು ಎಸೆತಗಳಲ್ಲಿ ಎರಡು ಜೀವದಾನ ಸಿಕ್ಕಿತು. ಈ ಓವರ್‌ನ ಮೊದಲ ಎಸೆತದಲ್ಲೇ ರಾಹುಲ್​ ವಿಕೆಟ್‌ಕೀಪರ್ ಕೈಗೆ ಕ್ಯಾಚ್ ನೀಡಿದ್ದರು. ಆಸೀಸ್ ಆಟಗಾರರು ವಿಕೆಟ್ ಸಿಕ್ಕ ಖುಷಿಯಲ್ಲಿದ್ದರು. ಇತ್ತ ರಾಹುಲ್​ ಕೂಡ ಪೆವಿಲಿಯನತ್ತ ಹೆಜ್ಜೆ ಹಾಕಿದರೆ, ಅತ್ತ ವಿರಾಟ್ ಕೊಹ್ಲಿ ಕೂಡ ಡ್ರೆಸ್ಸಿಂಗ್ ರೂಮ್‌ನಿಂದ ಕ್ರೀಸ್​ನತ್ತ ಹೆಜ್ಜೆ ಹಾಕಿದ್ದರು. ಆಗ ಮೈದಾನದಲ್ಲಿದ್ದ ಅಂಪೈರ್ ಏಕಾಏಕಿ ಇಬ್ಬರನ್ನೂ ತಡೆದು ನೋ ಬಾಲ್ ಎಂದು ತೀರ್ಪು ನೀಡಿದರು.

ಆಗ ರಾಹುಲ್​ಗೆ ಖಾತೆ ತೆರೆಯಲೂ ಸಾಧ್ಯವಾಗಿರಲಿಲ್ಲ. ಅಚ್ಚರಿ ಎಂದರೆ ರಿವ್ಯೂವ್​ನಲ್ಲಿ ನೋಡಿದಾಗ ಚೆಂಡು ಬ್ಯಾಟ್​ಗೆ ತಾಗಿಲ್ಲ ಎಂಬುದು ಸ್ನೀಕೋಮೀಟರ್‌ನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ರಾಹುಲ್ ಮಾತ್ರ ಡಿಆರ್​ಎಸ್​ ತೆಗೆದುಕೊಳ್ಳದೆ ಪೆವಿಲಿಯನತ್ತ ನಡೆಯ ತೊಡಗಿದ್ದರು. ಆ ಚೆಂಡು ನೋ ಬಾಲ್ ಆಗಿರದಿದ್ದರೆ ರಾಹುಲ್, ಉಚಿತವಾಗಿ ಆಸೀಸ್​ಗೆ ವಿಕೆಟ್ ನೀಡಿದಂತ್ತಾಗುತ್ತಿತ್ತು.

ಕ್ಯಾಚ್ ಬಿಟ್ಟ ಖವಾಜಾ

ಅದೇ ಓವರ್​ನಲ್ಲಿ ರಾಹುಲ್​ಗೆ ಎರಡನೇ ಬಾರಿಗೆ ಜೀವದಾನ ಸಿಕ್ಕಿತು. ಎಂಟನೇ ಓವರ್‌ನ ಐದನೇ ಎಸೆತದಲ್ಲಿ ಚೆಂಡು ಮತ್ತೊಮ್ಮೆ ರಾಹುಲ್​ ಅವರ ಬ್ಯಾಟ್‌ನ ಅಂಚನ್ನು ತಾಗಿ ವಿಕೆಟ್ ಹಿಂದೆ ಸ್ಲಿಪ್‌ನಲ್ಲಿ ನಿಂತಿದ್ದ ಉಸ್ಮಾನ್ ಖವಾಜಾ ಕಡೆಗೆ ಹೋಯಿತು. ಖವಾಜಾ ಕೂಡ ಬಲಕ್ಕೆ ಡೈವ್ ಮಾಡುವ ಮೂಲಕ ಕ್ಯಾಚ್ ತೆಗೆದುಕೊಳ್ಳಲು ಪ್ರಯತ್ನಿಸಿದರು, ಆದರೆ ಚೆಂಡು ಅವರ ಕೈಯಿಂದ ಜಾರಿತು. ಈ ಮೂಲಕ ರಾಹುಲ್ ಐದು ಎಸೆತಗಳಲ್ಲಿ ಎರಡು ಜೀವದಾನ ಪಡೆದರು.

37 ರನ್​ಗಳಿಗೆ ರಾಹುಲ್ ಔಟ್

ಶೂನ್ಯಕ್ಕೆ ಎರಡು ಜೀವದಾನ ಸಿಕ್ಕಿದ್ದನ್ನು ಬಿಗ್ ಇನ್ನಿಂಗ್ಸ್ ಆಗಿ ಬದಲಿಸಲು ರಾಹುಲ್​ಗೆ ಸಾಧ್ಯವಾಗಲಿಲ್ಲ. 19ನೇ ಓವರ್​ನ 4ನೇ ಎಸೆತದಲ್ಲಿ ರಾಹುಲ್, ಗಲ್ಲಿ ಫಿಲ್ಡರ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಆದಾಗ್ಯೂ ರಾಹುಲ್, ಗಿಲ್ ಜೊತೆಗೆ ಎರಡನೇ ವಿಕೆಟ್​ಗೆ 69 ರನ್​ಗಳ ಜೊತೆಯಾಟ ನೀಡಿದರು. ತಮ್ಮ ಇನ್ನಿಂಗ್ಸ್​ನಲ್ಲಿ 64 ಎಸೆತಗಳನ್ನು ಎದುರಿಸಿದ ರಾಹುಲ್ 6 ಬೌಂಡರಿ ಸಹಿತ 37 ರನ್ ಗಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ