India vs Australia 4th Test: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಅಂತಿಮ ಹಂತಕ್ಕೆ ಬಂದು ನಿಂತಿದೆ. ನಾಲ್ಕು ಪಂದ್ಯಗಳ ಸರಣಿಯ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದ ಟೀಮ್ ಇಂಡಿಯಾ (Team India), ಮೂರನೇ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿದೆ. ಇದೀಗ ಅಹಮದಾಬಾದ್ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕ. ಇಲ್ಲಿ ಈ ಪಂದ್ಯದಲ್ಲಿ ಗೆದ್ದರೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಲಿದೆ. ಹಾಗೆಯೇ ಆಸ್ಟ್ರೇಲಿಯಾ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿದರೆ ಸರಣಿಯನ್ನು 2-2 ಅಂತರದಿಂದ ಸಮಬಲದೊಂದಿಗೆ ಅಂತ್ಯಗೊಳಿಸಬಹುದು. ಹೀಗಾಗಿ ಮಾರ್ಚ್ 9 ರಿಂದ ಶುರುವಾಗಲಿರುವ ಈ ಪಂದ್ಯವನ್ನು ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ.
ಇತ್ತ ಇಂದೋರ್ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಟೀಮ್ ಇಂಡಿಯಾ ಆಟಗಾರರು ಮುಂದಿನ ಪಂದ್ಯಕ್ಕಾಗಿ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆದರೆ ಹೀಗೆ ಬೆವರಿಳಿಸುತ್ತಿರುವ ಆಟಗಾರರ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಲ್ಲ ಎಂಬುದೇ ಅಚ್ಚರಿ.
ಅಂದರೆ ಮೂರನೇ ದಿನಕ್ಕೆ ಮುಗಿದಿದ್ದ 3ನೇ ಟೆಸ್ಟ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ತೊರೆದಿದ್ದಾರೆ. ಅಲ್ಲದೆ ರಜೆಯ ಮೂಡ್ನಲ್ಲಿದ್ದಾರೆ. ಒಂದೆಡೆ ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಕೆಎಸ್ ಭರತ್, ಅಶ್ವಿನ್ ಸೇರಿದಂತೆ ಕೆಲ ಆಟಗಾರರು ನೆಟ್ಸ್ನಲ್ಲಿ ಬೆವರಿಳಿಸುತ್ತಿದ್ದಾರೆ.
ಇದರ ನಡುವೆ ಟೀಮ್ ಇಂಡಿಯಾದ ಇಬ್ಬರು ಪ್ರಮುಖ ಆಟಗಾರರು ರಜೆ ತೆಗೆದುಕೊಂಡಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಕೆಂದರೆ ಈ ಇಬ್ಬರು ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ.
ವಿರಾಟ್ ಕೊಹ್ಲಿ ಈ ಟೆಸ್ಟ್ ಸರಣಿಯ ಐದು ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. 3 ಟೆಸ್ಟ್‌ಗಳಿಂದ ಕೇವಲ 22.20 ಸರಾಸರಿಯಲ್ಲಿ 111 ರನ್ ಗಳಿಸಿದ್ದಾರೆ. ಇನ್ನು ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದ ರೋಹಿತ್ ಶರ್ಮಾ ಉಳಿದ 4 ಇನಿಂಗ್ಸ್ಗಳಲ್ಲಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ.
ಇದನ್ನೂ ಓದಿ: WTC Final: ಹೀಗಾದ್ರೆ ಮಾತ್ರ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಬಹುದು..!
ಇದಾಗ್ಯೂ ಟೀಮ್ ಇಂಡಿಯಾ ಪಾಲಿನ ನಿರ್ಣಾಯಕ ಪಂದ್ಯಕ್ಕೂ ಮುನ್ನ ಈ ಇಬ್ಬರು ಸ್ಟಾರ್ ಆಟಗಾರರು ಅಭ್ಯಾಸದಿಂದ ಹೊರಗುಳಿದಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಇನ್ನು ಮಾರ್ಚ್ 7 ರಂದು ಟೀಮ್ ಇಂಡಿಯಾ ಅಹಮದಾಬಾದ್ನಲ್ಲಿ ಅಭ್ಯಾಸ ಶುರು ಮಾಡಲಿದ್ದು, ಆ ವೇಳೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಂಡವನ್ನು ಕೂಡಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್.