Updated on: Feb 28, 2023 | 8:53 PM
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೆ ಕೌಂಟ್ ಡೌಟ್ ಶುರುವಾಗಿದೆ. ಮಾರ್ಚ್ 31 ರಿಂದ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ವಿಶೇಷ ಎಂದರೆ ಈ ಪಂದ್ಯದ ವೇಳೆ ಆರ್ಸಿಬಿ ತಂಡದ ತ್ರಿಮೂರ್ತಿಗಳಾದ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, ಮಿಸ್ಟರ್ 360 ಡಿಗ್ರಿ ಎಬಿ ಡಿವಿಲಿಯರ್ಸ್ ಹಾಗೂ ಕಿಂಗ್ ಕೊಹ್ಲಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಜೊತೆಗಾರಿಕೆ ಪಂದ್ಯಕ್ಕಾಗಿ ಅಲ್ಲ ಎಂಬುದಷ್ಟೇ ವ್ಯತ್ಯಾಸ.
ಆರ್ಸಿಬಿ ಫ್ರಾಂಚೈಸಿಯು ತಮ್ಮ ತಂಡದ ಪರ ಆಡಿದ ಶ್ರೇಷ್ಠ ಆಟಗಾರರನ್ನು ಗೌರವಿಸಲು ಮುಂದಾಗಿದೆ. ಈ ಗೌರವ ಪ್ರಶಸ್ತಿಗೆ ಆರ್ಸಿಬಿ ಹಾಲ್ ಆಫ್ ಫೇಮ್ ಎಂದು ಹೆಸರಿಡಲಾಗಿದೆ. ಅದರಂತೆ ಆರ್ಸಿಬಿ ತಂಡದ ಮೊದಲ ಹಾಲ್ ಆಫ್ ಫೇಮ್ ಗೌರವಕ್ಕೆ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಪಾತ್ರರಾಗಿದ್ದಾರೆ.
ಎಬಿಡಿ ಆರ್ಸಿಬಿ ಪರ 11 ವರ್ಷಗಳ ಕಾಲ ಆಡಿದ್ದರೆ, ಕ್ರಿಸ್ ಗೇಲ್ 7 ವರ್ಷಗಳ ಕಾಲ ಬ್ಯಾಟ್ ಬೀಸಿದ್ದರು. ಅಷ್ಟೇ ಅಲ್ಲದೆ ಆರ್ಸಿಬಿ ತಂಡದ ಪ್ರಮುಖ ಆಟಗಾರರಾಗಿ ಗುರುತಿಸಿಕೊಂಡಿದ್ದ ಈ ಇಬ್ಬರು ಮಾಜಿ ಆಟಗಾರರಿಗೆ ಆರ್ಸಿಬಿ ತಂಡದ ಹಾಲ್ ಫೇಮ್ ಗೌರವ ನೀಡಲು ಮುಂದಾಗಿದೆ.
ಅದರಂತೆ ಏಪ್ರಿಲ್ 2 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಅವರಿಗೆ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡುವ ಮೂಲಕ ಗೌರವಿಸಲಾಗುತ್ತದೆ ಎಂದು ವರದಿಯಾಗಿದೆ.
ಅಂದಹಾಗೆ ಈ ಗೌರವ ಪ್ರಶಸ್ತಿಯನ್ನು ಆರ್ಸಿಬಿ ಪರ ಆಡಿದ ಎಲ್ಲಾ ಆಟಗಾರರಿಗೆ ನೀಡಲಾಗುವುದಿಲ್ಲ. ಬದಲಾಗಿ ತಂಡದ ಪರ ಸರ್ವ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ಮಾತ್ರ ಸಲ್ಲುತ್ತದೆ. ಇದಕ್ಕಾಗಿ ಒಂದಷ್ಟು ಷರತ್ತುಗಳನ್ನು ಕೂಡ ಆರ್ಸಿಬಿ ರೂಪಿಸಿದೆ.
ಈ ಷರತ್ತುಗಳೆಂದರೆ, ಕನಿಷ್ಠ 3 ವರ್ಷಗಳ ಕಾಲ RCB ಪರ ಆಡಿರಬೇಕು. ಪ್ರಸ್ತುತ, ಅವರು ಐಪಿಎಲ್‌ನ ಯಾವುದೇ ತಂಡದ ಭಾಗವಾಗಿರಬಾರದು. ಮೈದಾನದಲ್ಲಿ ಮತ್ತು ಹೊರಗೆ RCB ಮೇಲೆ ಗಮನಾರ್ಹ ಪರಿಣಾಮ ಬೀರಬೇಕು. ಇಂತಹ ಸರ್ವ ಶ್ರೇಷ್ಠ ಆಟಗಾರರಿಗೆ ಮಾತ್ರ ಆರ್ಸಿಬಿ ಹಾಲ್ ಆಫ್ ಫೇಮ್ ಗೌರವ ನೀಡಲಿದೆ.
ಅದರಂತೆ ಆರ್ಸಿಬಿ ತಂಡದ ಮೊದಲ ಹಾಲ್ ಆಫ್ ಫೇಮ್ ಪ್ರಶಸ್ತಿ ಗೌರವಕ್ಕೆ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಆಯ್ಕೆಯಾಗಿದ್ದಾರೆ. ಈ ಗೌರವಾರ್ಪಣ ಕಾರ್ಯಕ್ರಮದಲ್ಲಿ ಆರ್ಸಿಬಿ ತಂಡದ ತ್ರಿಮೂರ್ತಿಗಳಾಗಿ ಮಿಂಚಿದ್ದ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಅವರನ್ನು ಮತ್ತೊಮ್ಮೆ ಜೊತೆಯಾಗಿ ಕಣ್ತುಂಬಿಕೊಳ್ಳುವ ಅವಕಾಶ ಆರ್ಸಿಬಿ ಅಭಿಮಾನಿಗಳಿಗೆ ಸಿಗಲಿದೆ.