IND vs AUS: ಆಸೀಸ್​​ ಬೌಲರ್​ಗಳ ಬೆವರಿಳಿಸಿ ರೋಹಿತ್ ಶರ್ಮಾ ನಿರ್ಮಿಸಿದ ದಾಖಲೆಗಳಿವು…

|

Updated on: Jun 25, 2024 | 8:04 AM

IND vs AUS, T20 World Cup 2024: ಆಸ್ಟ್ರೇಲಿಯಾ ವಿರುದ್ಧದ ಸೇಡಿನ ಪಂದ್ಯ ಎಂದೇ ಪರಿಗಣಿಸಲಾದ, ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ರಾತ್ರಿ ನಡೆದ ಟಿ20 ಕ್ರಿಕೆಟ್​​ನಲ್ಲಿ ಅಮೋಘ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡರು. ಆ ಬಗ್ಗೆ ವಿವರ ಇಲ್ಲಿದೆ.

IND vs AUS: ಆಸೀಸ್​​ ಬೌಲರ್​ಗಳ ಬೆವರಿಳಿಸಿ ರೋಹಿತ್ ಶರ್ಮಾ ನಿರ್ಮಿಸಿದ ದಾಖಲೆಗಳಿವು...
ರೋಹಿತ್ ಶರ್ಮಾ
Follow us on

ಟಿ20 ವಿಶ್ವಕಪ್​​ನ (T20 World Cup) ಸೂಪರ್ 8 ಹಂತದಲ್ಲಿ ಸೋಮವಾರ ರಾತ್ರಿ ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಆಸೀಸ್ ವೇಗಿಗಳ ಬೆವರಿಳಿಸಿದ ಟೀಂ ಇಂಡಿಯಾ (India vs Australia) ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಒಂದೇ ದಿನ ಮೂರು ವಿಶ್ವದಾಖಲೆ ನಿರ್ಮಿಸಿದ್ದಾರೆ. ಆಸೀಸ್ ವೇಗಿಗಳನ್ನು ಮನಸೋ ಇಚ್ಛೆ ದಂಡಿಸಿದ ಹಿಟ್​ಮ್ಯಾನ್ (Hitman), ಕೇವಲ 41 ಎಸೆತಗಳಲ್ಲಿ ಎಂಟು ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 92 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನ ಕೊನೆಯಲ್ಲಿ, ರೋಹಿತ್ ಸ್ಟ್ರೈಕ್ ರೇಟ್ 224.39 ರಷ್ಟಿತ್ತು.

ಸಿಕ್ಸರ್​ನಲ್ಲಿ ದ್ವಿಶತಕ ದಾಟಿದ ಹಿಟ್​ಮ್ಯಾನ್

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಟಿ20 ಮಾದರಿಯ ಕ್ರಿಕೆಟ್​​ನಲ್ಲಿ 200 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಅವರು ಒಟ್ಟು 203 ಸಿಕ್ಸರ್​ಗಳನ್ನು ಬಾರಿಸಿದ್ದಾರೆ.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅತಿಹೆಚ್ಚು ರನ್ ಸರದಾರ

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅತಿಹೆಚ್ಚು ರನ್​ ಗಳಿಸಿದ ಬ್ಯಾಟರ್ ಆಗಿಯೂ ರೋಹಿತ್ ಶರ್ಮಾ ಹೊರಹೊಮ್ಮಿದ್ದಾರೆ. ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 4165 ರನ್ ಗಳಿಸಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ 4145 ಹಾಗೂ ವಿರಾಟ್ ಕೊಹ್ಲಿ 4103 ರನ್​ಗಳೊಂದಿಗೆ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನಾಯಕನ ಗರಿಷ್ಠ ಸ್ಕೋರ್

2021ರಲ್ಲಿ ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ 57 ರನ್‌ ಗಳಿಸಿದ್ದರು. ಇದು ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನಾಯಕನ ಗರಿಷ್ಠ ಸ್ಕೋರ್ ಆಗಿತ್ತು. ಇದನ್ನು ಆಸೀಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಹಿಂದಿಕ್ಕಿದರು. ರೋಹಿತ್ ಅವರ 92 ರನ್​​​ ಟಿ20 ವಿಶ್ವಕಪ್‌ನಲ್ಲಿ ನಾಯಕನೊಬ್ಬ ಗಳಿಸಿದ ಎರಡನೇ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. 2010 ರಲ್ಲಿ ಭಾರತದ ವಿರುದ್ಧ ಕ್ರಿಸ್ ಗೇಲ್ 98 ರನ್‌ ಗಳಿಸಿದ್ದು, ನಾಯಕನೊಬ್ಬನ ಗರಿಷ್ಠ ಸ್ಕೋರ್ ಆಗಿದೆ. ಈಗ ಈ ಪಟ್ಟಿಯಲ್ಲಿ ರೋಹಿತ್ ಎರಡನೇ ಸ್ಥಾನ ಗಳಿಸಿದರು.

ಉಳಿದಂತೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಭಾರತದ ಪರ ಅತಿ ವೇಗದ ಅರ್ಧಶತಕ ಗಳಿಸಿದ ಬ್ಯಾಟರ್​​ಗಳ ಸಾಲಿಗೆ ರೋಹಿತ್ ಇನ್ನಿಂಗ್ಸ್ ಕೂಡ ಸೇರ್ಪಡೆಯಾಗಿದೆ. ಈ ಪಟ್ಟಿಯಲ್ಲಿ ಈಗಾಗಲೇ ಯುವರಾಜ್ ಸಿಂಗ್, ಕೆಎಲ್ ರಾಹುಲ್, ಸೂರ್ಯ ಕುಮಾರ್ ಯಾದವ್, ಗೌತಮ್ ಗಂಭೀರ್ ಸಹ ಇದ್ದು, ನಂತರದ ಸ್ಥಾನ ರೋಹಿತ್ ಪಾಲಾಗಿದೆ. ಯುವರಾಜ್ ಸಿಂಗ್ ಡರ್ಬನ್​​​ನಲ್ಲಿ ಇಂಗ್ಲೆಂಡ್ ವಿರುದ್ಧ 2007ರಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

ಇದನ್ನೂ ಓದಿ: ಸೇಡಿನ ಸಮರದಲ್ಲಿ ಆಸೀಸ್​ಗೆ ಮಣ್ಣು ಮುಕ್ಕಿಸಿದ ಟೀಂ ಇಂಡಿಯಾ..!

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ಇದೀಗ ಸೆಮಿಫೈನಲ್ ಪ್ರವೇಶಿಸಿದ್ದು, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಸೆಮಿಫೈನಲ್ ಪಂದ್ಯ ಗುರುವಾರ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:32 am, Tue, 25 June 24