‘ನಾವು ಅಭ್ಯಾಸ ಮಾಡಬೇಕೆಂದಿದ್ದ ಪಿಚ್​ ಮೇಲೆ ನೀರು ಸುರಿದರು’; ಆಸೀಸ್ ತಂಡದಿಂದ ಮತ್ತೊಂದು ಆರೋಪ..!

| Updated By: ಪೃಥ್ವಿಶಂಕರ

Updated on: Feb 13, 2023 | 1:55 PM

IND vs AUS: ಆಸ್ಟ್ರೇಲಿಯಾ ತಂಡವು ಭಾನುವಾರ ಮಧ್ಯಾಹ್ನ 5 ಆಟಗಾರರೊಂದಿಗೆ ಮೈದಾನದಲ್ಲಿ ಅಭ್ಯಾಸ ಮಾಡಲು ಬಯಸಿತ್ತು. ಆದರೆ ಪಿಚ್‌ಗಳಲ್ಲಿ ನೀರಿರುವ ಕಾರಣ ಆಸೀಸ್ ಪಡೆ ಅಭ್ಯಾಸವನ್ನು ರದ್ದುಗೊಳಿಸಬೇಕಾಯಿತು.

‘ನಾವು ಅಭ್ಯಾಸ ಮಾಡಬೇಕೆಂದಿದ್ದ ಪಿಚ್​ ಮೇಲೆ ನೀರು ಸುರಿದರು’; ಆಸೀಸ್ ತಂಡದಿಂದ ಮತ್ತೊಂದು ಆರೋಪ..!
ಆಸೀಸ್ ತಂಡ, ನಾಗ್ಪುರ ಪಿಚ್
Follow us on

ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ (India vs Australia) ಇನಿಂಗ್ಸ್ ಮತ್ತು 132 ರನ್‌ಗಳಿಂದ ಹೀನಾಯ ಸೋಲು ಕಂಡಿದೆ. ಪಂದ್ಯವು ಮೂರನೇ ದಿನ ಅಂದರೆ ಶನಿವಾರ ಫೆಬ್ರವರಿ 11 ರಂದೇ ಕೊನೆಗೊಂಡಿತು. ಇದೀಗ ಈ ಟೆಸ್ಟ್ ಮುಗಿದು 3 ದಿನ ಕಳೆದ ಬಳಿಕವೂ ಈ ಟೆಸ್ಟ್​ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದೀಗ ESPN-Cricinfo ಮಾಡಿರುವ ವರದಿ ಪ್ರಕಾರ, ವಿದರ್ಭ ಸ್ಟೇಡಿಯಂನಲ್ಲಿ ಮೂರನೇ ದಿನದಂದು ಟೆಸ್ಟ್ ಪಂದ್ಯ ಮುಗಿದ ನಂತರ, ಆಸ್ಟ್ರೇಲಿಯಾ ತಂಡದ ಟೀಂ ಮ್ಯಾನೇಜ್ಮೆಂಟ್, ಆಟಗಾರರು ಅಭ್ಯಾಸ ನಡೆಸುವ ಸಲುವಾಗಿ ಸ್ಟೇಡಿಯಂನ ಸೆಂಟರ್ ಪಿಚ್ ಮತ್ತು ಅಭ್ಯಾಸದ ಪಿಚ್​ಗಳನ್ನು ಹಾಗೆಯೇ ಬಿಡುವಂತೆ ಮೈದಾನ ಸಿಬ್ಬಂದಿಗೆ ಕೇಳಿಕೊಂಡಿದ್ದರಂತೆ. ಆದರೆ ಮೈದಾನದ ಸಿಬ್ಬಂದಿ ಆಸೀಸ್ ಕೇಳಿದ ಪಿಚ್​ ಮೇಲೆ ನೀರು ಹಾಕಿ ಅಭ್ಯಾಸ ನಡೆಸದಂತೆ ತಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪಿಚ್‌ಗಳಿಗೆ ನೀರು ಹರಿಸಿದರು

ವಾಸ್ತವವಾಗಿ ನಾಗ್ಪುರ ಟೆಸ್ಟ್, 3ನೇ ದಿನದ 2ನೇ ಸೆಷನ್​ನಲ್ಲಿಯೇ ಅಂತ್ಯಗೊಂಡ ಬಳಿಕ, ದೆಹಲಿಯಲ್ಲಿ ನಡೆಯಲ್ಲಿರುವ 2ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುವ ಸಲುವಾಗಿ ಆಸೀಸ್ ತಂಡ ವಿದರ್ಭ ಮೈದಾನದಲ್ಲಿಯೇ ಭಾನುವಾರ ಅಭ್ಯಾಸ ಮಾಡಲು ಯೋಜನೆ ಹಾಕಿಕೊಂಡಿತ್ತು. ಹೀಗಾಗಿ ಪಂದ್ಯ ಮುಗಿದ ಬಳಿಕ ಮೈದಾನದ ಸಿಬ್ಬಂದಿಯ ಬಳಿ ಸೆಂಟರ್ ಪಿಚ್ ಮತ್ತು ಅಭ್ಯಾಸದ ಪಿಚ್​ಗಳನ್ನು ಅಭ್ಯಾಸ ಮಾಡಲು ಹಾಗೆಯೇ ಬಿಡುವಂತೆ ಆಸೀಸ್ ಆಡಳಿತ ಮಂಡಳಿ ಕೇಳಿಕೊಂಡಿತ್ತು. ಆದರೆ ಈ ಮನವಿಯ ಹೊರತಾಗಿಯೂ ಮೈದಾನದ ಸಿಬ್ಬಂದಿ ಶನಿವಾರ ರಾತ್ರಿಯೇ ಎಲ್ಲಾ ಪಿಚ್‌ಗಳಿಗೆ ನೀರು ಹರಿಸಿದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

WPL Auction: ಹರಾಜಿನಲ್ಲಿ ದುಬಾರಿ ಬೆಲೆ ಪಡೆಯಬಹುದಾದ ಅಂಡರ್-19 ಮಹಿಳಾ ವಿಶ್ವಕಪ್​ನ ಸ್ಟಾರ್ಸ್ ಇವರೇ

ವರದಿಯ ಪ್ರಕಾರ, ಆಸ್ಟ್ರೇಲಿಯಾ ತಂಡವು ಭಾನುವಾರ ಮಧ್ಯಾಹ್ನ 5 ಆಟಗಾರರೊಂದಿಗೆ ಮೈದಾನದಲ್ಲಿ ಅಭ್ಯಾಸ ಮಾಡಲು ಬಯಸಿತ್ತು. ಆದರೆ ಪಿಚ್‌ಗಳಲ್ಲಿ ನೀರಿದ್ದ ಕಾರಣ ಆಸೀಸ್ ಪಡೆ ಅಭ್ಯಾಸವನ್ನು ರದ್ದುಗೊಳಿಸಬೇಕಾಯಿತು. ಆದರೆ, ಸೋಮವಾರ ಎರಡೂ ತಂಡಗಳು ಅಭ್ಯಾಸ ನಡೆಸಲಿವೆ ಎಂದು ವಿಸಿಎ ಸಿಬ್ಬಂದಿ ತಿಳಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಫ್ಲಾಪ್ ಶೋ

ನಾಗ್ಪುರ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ತಂಡದ ಬ್ಯಾಟಿಂಗ್ ವಿಭಾಗ ಹೀನಾಯವಾಗಿ ವಿಫಲವಾಗಿತ್ತು. ತಂಡದ ಬ್ಯಾಟ್ಸ್‌ಮನ್‌ಗಳು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 177 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 91 ರನ್‌ಗಳಿಗೆ ಆಲೌಟ್ ಆದರು. ಎರಡನೇ ಇನ್ನಿಂಗ್ಸ್‌ನಲ್ಲಿ ಇಡೀ ತಂಡವು ಕೇವಲ ಒಂದು ಸೆಷನ್‌ನಲ್ಲಿಯೇ ತನ್ನೇಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ಇಷ್ಟು ಮಾತ್ರವಲ್ಲದೆ, ಪಂದ್ಯಕ್ಕೂ ಮುನ್ನವೇ ಆಸೀಸ್ ಮೀಡಿಯಾಗಳು ವಿದರ್ಭ ಮೈದಾನದ ಪಿಚ್‌ ಅನ್ನು ಭಾರತೀಯ ಸ್ಪಿನ್ನರ್​ಗಳಿಗೆ ನೆರವಾಗುವಂತೆ ಸಿದ್ದಪಡಿಸಿಲಾಗಿದೆ ಎಂದು ಆರೋಪ ಹೊರಿಸಿದ್ದವು.

ಆದರೆ ಇದೆಲ್ಲದರ ಹೊರತಾಗಿಯೂ ಟೀಂ ಇಂಡಿಯಾ 400 ರನ್ ಗಳಿಸುವುದನ್ನು ಆಸೀಸ್ ತಂಡಕ್ಕೆ ತಡೆಯಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಫೆಬ್ರವರಿ 17ರಿಂದ ದೆಹಲಿಯಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯನ್ ಪಾಳಯ ಬ್ಯಾಟಿಂಗ್ ಸುಧಾರಿಸಿಕೊಳ್ಳಲು ಹೆಚ್ಚುವರಿ ಅಭ್ಯಾಸ ನಡೆಸಲು ಬಯಸಿತ್ತು. ಆದರೆ ನಾಗ್ಪುರದಲ್ಲಿ ನಾಲ್ಕು ದಿನಗಳಲ್ಲಿ ಎರಡನೇ ಬಾರಿಗೆ ಆಸೀಸ್ ಪಡೆ ನಿರಾಸೆ ಅನುಭವಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Mon, 13 February 23