ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೊದಲ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಅನ್ನು ಆಯೋಜಿಸಲಿದೆ. ಈ ಲೀಗ್‌ನಲ್ಲಿ ಒಟ್ಟು ಐದು ತಂಡಗಳು ಆಡಲಿವೆ. ಇಂದು ಅಂದರೆ ಫೆಬ್ರವರಿ 13 ರಂದು ಈ ಲೀಗ್‌ನಲ್ಲಿ ಆಟಗಾರ್ತಿಯರ ಹರಾಜು ನಡೆಯಲಿದ್ದು, ಇದರಲ್ಲಿ ಒಟ್ಟು 409 ಆಟಗಾರ್ತಿಯರು ಬಿಡ್ ಆಗಲಿದ್ದಾರೆ. ಈ ಆಟಗಾರ್ತಿಯರ ಪಟ್ಟಿಯಲ್ಲಿ ಇತ್ತೀಚೆಗೆ ಅಂಡರ್-19 ಮಹಿಳಾ ವಿಶ್ವಕಪ್‌ನಲ್ಲಿ ಆಡಿದ ಆಟಗಾರ್ತಿಯರು ಸೇರಿದ್ದು, ಅವರಲ್ಲಿ ಅಧಿಕ ಬೆಲೆ ಪಡೆಯಬಹುದಾದ ಆಟಗಾರ್ತಿಯರ ಪಟ್ಟಿ ಇಲ್ಲಿದೆ.
ಈ ಪಟ್ಟಿಯಲ್ಲಿ ಮೊದಲ ಹೆಸರು ವಿಶ್ವ ಚಾಂಪಿಯನ್ ಭಾರತ ತಂಡದ ಅತ್ಯುತ್ತಮ ಬ್ಯಾಟರ್ ಶ್ವೇತಾ ಸೆಹ್ರಾವತ್. ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಶ್ವೇತಾ ಅತಿ ಹೆಚ್ಚು ರನ್ ಗಳಿಸಿದ್ದರು. ಅವರು ಒಟ್ಟು ಏಳು ಪಂದ್ಯಗಳಲ್ಲಿ 99 ರ ಸರಾಸರಿಯಲ್ಲಿ 297 ರನ್ ಗಳಿಸಿದರು, ಇದರಲ್ಲಿ ಮೂರು ಅರ್ಧ ಶತಕಗಳು ಸೇರಿದ್ದವು. ಶ್ವೇತಾ ಮೂಲ ಬೆಲೆ 10 ಲಕ್ಷ ರೂ. ಆಗಿದ್ದು, ಅವರಿಗಾಗಿ ತಂಡಗಳು ಮುಗಿಬೀಳಲಿವೆ.
ಅಂಡರ್-19 ವಿಶ್ವಕಪ್‌ನಲ್ಲಿ ಟೂರ್ನಮೆಂಟ್‌ನ ಆಟಗಾರ್ತಿಯಾಗಿದ್ದ ಇಂಗ್ಲೆಂಡ್ ನಾಯಕಿ ಗ್ರೇಸ್ ಸ್ಕ್ರಿವೆನ್ಸ್ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಈ ಆಲ್ರೌಂಡರ್ಗೆ ಹೆಚ್ಚಿನ ಬೇಡಿಕೆ ಇದೆ. ಅಂಡರ್-19 ವಿಶ್ವಕಪ್‌ನಲ್ಲಿ ಅವರು ಒಟ್ಟು ಏಳು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಪಡೆದರು. ಅಲ್ಲದೆ ಶ್ವೇತಾ ನಂತರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ್ತಿ ಕೂಡ. ಗ್ರೇಸ್ ಸ್ಕ್ರಿವೆನ್ಸ್ ಏಳು ಪಂದ್ಯಗಳಲ್ಲಿ ಮೂರು ಅರ್ಧ ಶತಕಗಳು ಸೇರಿದಂತೆ 293 ರನ್ ಗಳಿಸಿದರು.
ಈ ಪಟ್ಟಿಯಲ್ಲಿ ಭಾರತದ ಪಾರ್ಶ್ವಿ ಚೋಪ್ರಾ 3ನೇ ಸ್ಥಾನದಲ್ಲಿದ್ದಾರೆ. ಅಂಡರ್-19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಪಾರ್ಶ್ವಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಆರು ಪಂದ್ಯಗಳಲ್ಲಿ 11 ವಿಕೆಟ್ ಪಡೆದರು. ಈ ಲೆಗ್ ಸ್ಪಿನ್ನರ್ ಇಂಗ್ಲೆಂಡ್ ವಿರುದ್ಧ ಆಡಿದ ಫೈನಲ್‌ನಲ್ಲಿ ಎರಡು ವಿಕೆಟ್ ಪಡೆದಿದ್ದು, ತಂಡದ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು.
ಮಹಿಳಾ ಕ್ರಿಕೆಟ್‌ನಲ್ಲಿ ಸ್ಪಿನ್ನರ್‌ಗಳು ಹೆಚ್ಚು ಯಶಸ್ವಿಯಾಗಿರುವುದು ಕಂಡುಬಂದಿದೆ. ಅಲ್ಲದೆ ಸ್ಪಿನ್ನರ್‌ಗಳು ಭಾರತದ ಪಿಚ್‌ಗಳಲ್ಲಿ ಪರಿಣಾಮಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಎಡಗೈ ಸ್ಪಿನ್ನರ್ ಮನ್ನತ್ ಕಶ್ಯಪ್ಗೆ ಹೆಚ್ಚಿನ ಬೇಡಿಕೆ ಇದ್ದು, ಮನ್ನತ್ ಅಂಡರ್-19 ವಿಶ್ವಕಪ್‌ನಲ್ಲಿ ಆಡಿದ ಆರು ಪಂದ್ಯಗಳಲ್ಲಿ ಒಟ್ಟು 9 ವಿಕೆಟ್ ಪಡೆದರು.
ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ ಎರಡು ವಿಕೆಟ್ ಪಡೆದ ಭಾರತದ ಟೈಟಾಸ್ ಸಾಧು ಕೂಡ ಅಧಿಕ ಹಣ ಪಡೆಯುವವರ ಪಟ್ಟಿಯಲ್ಲಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಬಂಗಾಳದ ಪರವಾಗಿ ಆಡುವ ಅವರು ಅಂಡರ್-19 ವಿಶ್ವಕಪ್‌ನ ಆರು ಪಂದ್ಯಗಳಲ್ಲಿ ಆರು ವಿಕೆಟ್ಗಳನ್ನು ಪಡೆಯುವುದರೊಂದಿಗೆ ಪಂದ್ಯಾವಳಿಯಲ್ಲಿ ಭಾರತದ ಎರಡನೇ ಅತ್ಯಂತ ಎಕಾನಮಿಕಲ್ ಬೌಲರ್ ಆಗಿದ್ದರು.
Published On - 11:16 am, Mon, 13 February 23