IND vs AUS: ‘ಮೂರ್ಖ, ಶತಮೂರ್ಖ’; ಪಂತ್ ಬೇಜವಾಬ್ದಾರಿ ಆಟಕ್ಕೆ ಲೈವ್ ಮ್ಯಾಚ್‌ನಲ್ಲೇ ಗವಾಸ್ಕರ್ ಗರಂ

|

Updated on: Dec 28, 2024 | 5:22 PM

Sunil Gavaskar blasted Rishabh Pant: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಬ್ ಪಂತ್ ಇದುವರೆಗೆ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ 4ನೇ ಟೆಸ್ಟ್ ಪಂದ್ಯದಲ್ಲಿ ಬೇಡದ ಶಾಟ್ ಆಡಿ ವಿಕೆಟ್ ಕೈಚೆಲ್ಲಿದ ರಿಷಬ್ ಪಂತ್ ವಿರುದ್ಧ ವೀಕ್ಷಕ ವಿವರಣೆ ನೀಡತ್ತಿದ್ದ ಸುನಿಲ್ ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ.

IND vs AUS: ‘ಮೂರ್ಖ, ಶತಮೂರ್ಖ’; ಪಂತ್ ಬೇಜವಾಬ್ದಾರಿ ಆಟಕ್ಕೆ ಲೈವ್ ಮ್ಯಾಚ್‌ನಲ್ಲೇ ಗವಾಸ್ಕರ್ ಗರಂ
ಸುನಿಲ್ ಗವಾಸ್ಕರ್, ರಿಷಬ್ ಪಂತ್
Follow us on

ರಿಷಬ್ ಪಂತ್ ಎಂದ ಕೂಡಲೇ ನಮಗೆಲ್ಲ ನೆನಪಾಗುವುದು ಕಳೆದ ಬಾರಿಯ ಆಸ್ಟ್ರೇಲಿಯಾ ಪ್ರವಾಸದ ವೇಳೆ ಗಾಬಾ ಮೈದಾನದಲ್ಲಿ ಆತ ಆಡಿದ ಅದೊಂದು ಸ್ಮರಣೀಯ ಇನ್ನಿಂಗ್ಸ್. ಏಕಾಂಗಿಯಾಗಿ ನಿಂತು ಟೀಂ ಇಂಡಿಯಾಕ್ಕೆ ಗೆಲುವು ತಂದುಕೊಟ್ಟಿದ್ದ ರಿಷಬ್ ಪಂತ್ ಟೀಂ ಇಂಡಿಯಾ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಈ ಪ್ರವಾಸದಲ್ಲೂ ಪಂತ್ ಬ್ಯಾಟ್​ನಿಂದ ಅದೇ ರೀತಿಯ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ಇದುವರೆಗೆ ನಡೆದಿರುವ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಪಂತ್ ಕಡೆಯಿಂದ ಒಂದೇ ಒಂದು ಹೇಳಿಕೊಳ್ಳುವಂತಹ ಪ್ರದರ್ಶನ ಕಂಡುಬಂದಿಲ್ಲ. ಇಡೀ ಸರಣಿಯಲ್ಲಿ ಇದುವರೆಗೆ ಪಂತ್ ಹೆಸರಿಗೆ ಮಾತ್ರ ತಂಡದಲ್ಲಿ ಇದ್ದಾರೆ ಎನ್ನುವಂತಾಗಿದೆ. ಇದರ ಜೊತೆಗೆ ಆಡಿರುವ ಅಷ್ಟೂ ಇನ್ನಿಂಗ್ಸ್​ಗಳಲ್ಲಿ ಪಂತ್ ಬೇಡದ ಶಾಟ್ ಆಡಿಯೇ ವಿಕೆಟ್ ಒಪ್ಪಿಸುತ್ತಿದ್ದಾರೆ. ಇದೀಗ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲೂ ಪಂತ್ ಅದೇ ರೀತಿಯ ಬೇಜವಾಬ್ದಾರಿ ಶಾಟ್ ಆಡಿ ವಿಕೆಟ್ ಒಪ್ಪಿಸಿದ್ದು, ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದಲ್ಲದೆ ವೀಕ್ಷಕ ವಿವರಣೆ ನೀಡುತ್ತಿದ್ದ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರನ್ನು ಕೆರಳುವಂತೆ ಮಾಡಿದೆ.

ಪಂತ್​ಗೆ ಮಾತಿನ ಪಂಚ್ ಕೊಟ್ಟ ಗವಾಸ್ಕರ್

ಮೆಲ್ಬೋರ್ನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ 37 ಎಸೆತಗಳಲ್ಲಿ 28 ರನ್ ಗಳಿಸಲಷ್ಟೇ ಶಕ್ತರಾದರು. ಈ ವೇಳೆ ದೊಡ್ಡ ಹೊಡೆತಕ್ಕೆ ಕೈಹಾಕಿದ ಪಂತ್ ನಾಥನ್ ಲಿಯಾನ್‌ಗೆ ಕ್ಯಾಚ್ ನೀಡಿದರು. ವಾಸ್ತವವಾಗಿ, ರಿಷಬ್ ಪಂತ್ ವೇಗದ ಬೌಲರ್ ಸ್ಕಾಟ್ ಬೋಲ್ಯಾಂಡ್ ಅವರ ಓವರ್‌ನಲ್ಲಿ ಫೈನ್ ಲೆಗ್‌ ಮೇಲೆ ಪಿಕ್ ಅಪ್ ರಾಂಪ್ ಹೊಡೆತವನ್ನು ಆಡಲು ಪ್ರಯತ್ನಿಸಿದರು. ಆದರೆ ಆ ಪ್ರಯತ್ನದಲ್ಲಿ ಪಂತ್ ಯಶಸ್ವಿಯಾಗಲಿಲ್ಲ. ಮುಂದಿನ ಎಸೆತದಲ್ಲೂ ಇದೇ ಪ್ರಯತ್ನ ಮಾಡಿದ ಪಂತ್ ಮತ್ತೊಮ್ಮೆ ರಾಂಪ್ ಶಾಟ್ ಆಡಿದರು. ಆದರೆ ಚೆಂಡು ಅವರ ಬ್ಯಾಟ್‌ನ ಅಂಚನ್ನು ತಾಗಿ ಡೀಪ್ ಥರ್ಡ್ ಮ್ಯಾನ್​ನಲ್ಲಿ ನಿಂತಿದ್ದ ಲಿಯಾನ್‌ ಕೈಸೇರಿತು.

ರಿಷಬ್ ಪಂತ್ ಅವರ ಈ ಬೇಜವಾಬ್ದಾರಿ ಶಾಟ್ ನೋಡಿದ ಸುನಿಲ್ ಗವಾಸ್ಕರ್ ಲೈವ್ ಮ್ಯಾಚ್​ನಲ್ಲಿಯೇ ಪಂತ್​ರನ್ನು ತರಾಟೆಗೆ ತೆಗೆದುಕೊಂಡರು. ಪಂದ್ಯದಲ್ಲಿ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಪಂತ್ ಔಟಾಗುತ್ತಿದ್ದಂತೆ ಅವರನ್ನು ‘ಮೂರ್ಖ, ಮೂರ್ಖ, ಮೂರ್ಖ’ ಎಂದು ಮೂರು ಬಾರಿ ಹೇಳುವ ಮೂಲಕ ಪಂತ್ ಆಡಿದ ಶಾಟ್​ಗೆ ಅಸಮಾಧಾನ ಹೊರಹಾಕಿದರು.

ಮುಂದುವರೆದು ಮಾತನಾಡಿದ ಗವಾಸ್ಕರ್, ಡೀಪ್ ಥರ್ಡ್ ಮ್ಯಾನ್​ನಲ್ಲಿ ಇಬ್ಬರು ಫೀಲ್ಡರ್‌ಗಳು ನಿಂತಿರುವಾಗ ನೀವು ಅಂತಹ ಹೊಡೆತವನ್ನು ಆಡಲು ಹೋಗುತ್ತೀರಿ. ಕಳೆದ ಬಾಲ್​ನಲ್ಲೂ ಅದೇ ಪ್ರಯತ್ನಕ್ಕೆ ಕೈಹಾಕಿ ವಿಫಲರಾದಿರಿ. ಮತ್ತೊಮ್ಮೆ ಅದೇ ರೀತಿಯ ಶಾಟ್ ಆಡಿ ವಿಕೆಟ್ ಕೈಚೆಲ್ಲಿದ್ದೀರಿ. ಇದು ನಿಮ್ಮ ಸಹಜ ಆಟ ಎಂದು ಹೇಳಲು ಸಾಧ್ಯವಿಲ್ಲ. ಕ್ಷಮಿಸಿ. ಇದು ನಿಮ್ಮ ಸಹಜ ಆಟವಲ್ಲ. ಇದೊಂದು ಮೂರ್ಖತನದ ಪರಮಾವಧಿ. ಇದು ನಿಮ್ಮ ತಂಡವನ್ನು ಗಂಭೀರವಾಗಿ ದುರ್ಬಲಗೊಳಿಸುತ್ತಿದೆ. ನೀವು ಪರಿಸ್ಥಿತಿಯನ್ನು ಸಹ ಅರ್ಥಮಾಡಿಕೊಳ್ಳಬೇಕು ಎಂದು ಪಂತ್ ವಿರುದ್ಧ ಹರಿಹಾಯ್ದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ