ಅಭಿನವ್- ಮಯಾಂಕ್ ಆರ್ಭಟ; ಕರ್ನಾಟಕಕ್ಕೆ 10 ವಿಕೆಟ್ ಜಯ
Vijay Hazare Trophy: ಕರ್ನಾಟಕವು ವಿಜಯ್ ಹಜಾರೆ ಟ್ರೋಫಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಅರುಣಾಚಲ ಪ್ರದೇಶದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಅರುಣಾಚಲ ಪ್ರದೇಶ 166 ರನ್‌ಗಳಿಗೆ ಆಲೌಟ್ ಆಯಿತು. ಮಯಾಂಕ್ ಅಗರ್ವಾಲ್ ಮತ್ತು ಅಭಿನವ್ ಮನೋಹರ್ ಅವರ ಅಜೇಯ ಇನ್ನಿಂಗ್ಸ್‌ಗಳಿಂದ ಕರ್ನಾಟಕ ಸುಲಭ ಜಯ ಸಾಧಿಸಿತು.
ಭಾರತದಲ್ಲಿ ನಡೆಯುತ್ತಿರುವ ದೇಶೀ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಟೂರ್ನಿಯಲ್ಲಿ ಇದುವರೆಗೆ ಆಡಿರುವ ಸತತ 4 ಪಂದ್ಯಗಳಲ್ಲೂ ಮಯಾಂಕ್ ಅಗರ್ವಾಲ್ ಪಡೆ ಗೆಲುವು ಸಾಧಿಸಿದೆ. ಇಂದು ನಡೆದ ತನ್ನ ನಾಲ್ಕನೇ ಪಂದ್ಯದಲ್ಲಿ ಅರುಣಾಚಲ ಪ್ರದೇಶವನ್ನು ಎದುರಿಸಿದ್ದ ಕರ್ನಾಟಕ ತಂಡ 10 ವಿಕೆಟ್‌ಗಳ ಜಯ ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅರುಣಾಚಲ ಪ್ರದೇಶ ತಂಡ 166 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಜಯದ ನಗೆ ಬೀರಿತು.
ಅರುಣಾಚಲ ಪ್ರದೇಶದ ಪೆವಿಲಿಯನ್ ಪರೇಡ್
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಅರುಣಾಚಲ ಪ್ರದೇಶ ತಂಡಕ್ಕೆ ಮೊದಲ ವಿಕೆಟ್ಗೆ 22 ರನ್ಗಳ ಜೊತೆಯಾಟ ಸಿಕ್ಕಿತು. ಆದರೆ ಆ ಬಳಿಕ ತಂಡದ ಪೆವಿಲಿಯನ್ ಪರೇಡ್ ಶುರುವಾಯಿತು. ಕರ್ನಾಟಕದ ದಾಳಿಯ ಮುಂದೆ ಸಂಪೂರ್ಣವಾಗಿ ಶರಣಾದ ಅರುಣಾಚಲ ಪ್ರದೇಶದ ಆಟಗಾರರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ತಂಡದ ಪರ ಅಭಿನವ್ ಸಿಂಗ್ 71 ರನ್ಗಳ ಹೋರಾಟದ ಇನ್ನಿಂಗ್ಸ್ ಆಡಿದರೆ, ಹಾರ್ದಿಕ್ ಹಿಮಾಂಶು ವರ್ಮಾ 38 ರನ್ಗಳ ಕಾಣಿಕೆ ನೀಡಿದರು. ಆರಂಭಿಕನಾಗಿ ಕಣಕ್ಕಿಳಿದಿದ್ದ ರಾಜೇಂದ್ರ ಸಿಂಗ್ ಕೂಡ 30 ರನ್ಗಳ ಇನ್ನಿಂಗ್ಸ್ ಆಡಿದರು. ಈ ಮೂವರನ್ನು ಬಿಟ್ಟರೆ ಉಳಿದವರಿಂದ ಒಂದಂಕಿ ಮೊತ್ತ ದಾಟಲು ಸಾಧ್ಯವಾಗಲಿಲ್ಲ. ಇದರಲ್ಲಿ ತಂಡದ ಮೂವರು ಬ್ಯಾಟರ್ಗಳಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಇಡೀ ತಂಡ 43.2 ಓವರ್ಗಳಷ್ಟೇ ಬ್ಯಾಟಿಂಗ್ ಮಾಡಿ 166ರನ್‌ಗಳಿಗೆ ಆಲೌಟ್ ಆಯಿತು. ಇತ್ತ ಕರ್ನಾಟಕ ಪರ ಬೌಲಿಂಗ್‌ನಲ್ಲಿ ಮಿಂಚಿದ ಹಾರ್ದಿಕ್ ರಾಜ್ ಹಾಗೂ ಕೌಶಿಕ್ ತಲಾ 4 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ ಹಾಗೂ ನಾಯಕ ಮಯಾಂಕ್ ಅಗರ್ವಾಲ್ ತಲಾ 1 ವಿಕೆಟ್ ಪಡೆದರು.
ಕರ್ನಾಟಕಕ್ಕೆ 10 ವಿಕೆಟ್ ಜಯ
ಅರುಣಾಚಲ ಪ್ರದೇಶ ನೀಡಿದ 166 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕಕ್ಕೆ ಸ್ಫೋಟಕ ಆರಂಭ ಸಿಕ್ಕಿತು. ಇಂದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಭಿನವ್ ಮನೋಹರ್ ಹಾಗೂ ಮಯಾಂಕ್ ಅಗರ್ವಾಲ್ ಆರಂಭದಿಂದಲೇ ಹೊಡಿಬಡಿ ಆಟವನ್ನು ಆಡುವ ಮೂಲಕ ಅರುಣಾಚಲ ಪ್ರದೇಶ ತಂಡವನ್ನು ಆರಂಭದಲ್ಲೇ ಪಂದ್ಯದಿಂದ ಹೊರಹಾಕಿದರು. ಈ ಇಬ್ಬರು ಆಟಗಾರರು ಮುರಿಯದ ವಿಕೆಟ್ಗೆ 171ರನ್ಗಳ ಜೊತೆಯಾಟವನ್ನಾಡುವ ಮೂಲಕ ತಂಡಕ್ಕೆ 10 ವಿಕೆಟ್‌ಗಳ ಜಯ ತಂದುಕೊಟ್ಟರು.
ಈ ವೇಳೆ ಸತತ ಎರಡನೇ ಶತಕ ಸಿಡಿಸಿದ ನಾಯಕ ಮಯಾಂಕ್ ಅಗರ್ವಾಲ್ 45 ಎಸೆತಗಳಲ್ಲಿ 7 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಜೇಯ ಶತಕ ಸಿಡಿಸಿದರೆ, ಮಯಾಂಕ್ಗೆ ಸಾಥ್ ನೀಡಿದ ಅಭಿನವ್ ಮನೋಹರ್ ಕೂಡ 41 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 66 ರನ್ಗಳ ಇನ್ನಿಂಗ್ಸ್ ಆಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:35 pm, Sat, 28 December 24