IND vs AUS: ಕಾಲ್ಕೆರೆದು ಜಗಳಕ್ಕೆ ಬಂದ ಕೊನ್​ಸ್ಟಾಸ್; ವಿಕೆಟ್ ಉರುಳಿಸಿ ತಿರುಗೇಟು ಕೊಟ್ಟ ಬುಮ್ರಾ

|

Updated on: Jan 03, 2025 | 1:23 PM

IND vs AUS: ಭಾರತ ತಂಡವನ್ನು 185 ರನ್‌ಗಳಿಗೆ ಆಲೌಟ್ ಮಾಡಿರುವ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ ಪ್ರಾರಂಭಿಸಿದೆ. ಆದರೆ ಆರಂಭಿಕ ಉಸ್ಮಾನ್ ಖವಾಜಾ 2 ರನ್ ಗಳಿಸಿ ಬುಮ್ರಾ ಬೌಲಿಂಗ್‌ನಲ್ಲಿ ಔಟ್ ಆಗುವ ಮೂಲಕ ದಿನದಾಟ ಅಂತ್ಯಗೊಂಡಿದೆ. ಆದರೆ, ಖವಾಜಾ ಔಟ್ ಆಗುವ ಮೊದಲು, ಬುಮ್ರಾ ಮತ್ತು ಸ್ಯಾಮ್ ಕೊನ್‌ಸ್ಟಾನ್ಸ್ ನಡುವೆ ವಾಗ್ವಾದ ನಡೆದ ಪ್ರಸಂಗವೂ ನಡೆಯಿತು. ಕೊನ್‌ಸ್ಟಾನ್ಸ್ ಬುಮ್ರಾ ಜೊತೆ ಅನಗತ್ಯವಾಗಿ ಜಗಳಕ್ಕಿಳಿದರು. ಇದಕ್ಕೆ ಉತ್ತರವಾಗಿ ಬುಮ್ರಾ ಖವಾಜಾ ಅವರ ವಿಕೆಟ್ ಪಡೆಯುವ ಮೂಲಕ ಕೊನ್​ಸ್ಟಾಸ್​ಗೆ ತಿರುಗೇಟು ನೀಡಿದರು.

IND vs AUS: ಕಾಲ್ಕೆರೆದು ಜಗಳಕ್ಕೆ ಬಂದ ಕೊನ್​ಸ್ಟಾಸ್; ವಿಕೆಟ್ ಉರುಳಿಸಿ ತಿರುಗೇಟು ಕೊಟ್ಟ ಬುಮ್ರಾ
ಭಾರತ- ಆಸ್ಟ್ರೇಲಿಯಾ
Follow us on

ಸಿಡ್ನಿಯಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 185 ರನ್​ಗಳಿಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆತಿಥೇಯ ಆಸ್ಟ್ರೇಲಿಯಾ ಕೂಡ ಮೊದಲ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 9 ರನ್ ಕಲೆಹಾಕಿದೆ. ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಉಸ್ಮಾನ್ ಖವಾಜಾ ಕೇವಲ 2 ರನ್ ಕಲೆಹಾಕಲಷ್ಟೇ ಶಕ್ತರಾಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಸ್ಲಿಪ್​ನಲ್ಲಿ ನಿಂತಿದ್ದ ರಾಹುಲ್​ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಆದರೆ ಖವಾಜಾ ಅವರ ವಿಕೆಟ್ ಪತನಕ್ಕೂ ಮುನ್ನ ಮೈದಾನದಲ್ಲಿ ನಡೆದ ಅದೊಂದು ಘಟನೆ ಇಡೀ ದಿನದ ಹೈಲೆಟ್ ಆಗಿತ್ತು. ಸುಖಾಸುಮ್ಮನೆ ಬುಮ್ರಾ ಜೊತೆಗೆ ಕಾಲ್ಕೆರೆದು ಜಗಳಕ್ಕೆ ಹೋದ ಆಸೀಸ್ ಯುವ ಆಟಗಾರ ಸ್ಯಾಮ್ ಕೊನ್​ಸ್ಟಾಸ್​ಗೆ ಬುಮ್ರಾ ತಕ್ಕ ತಿರುಗೇಟು ನೀಡಿದ್ದಾರೆ. ಇದೀಗ ಅದರ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.

ಕೊನೆಯ ಓವರ್​ನಲ್ಲಿ ಘಟನೆ

ವಾಸ್ತವವಾಗಿ ಮೊದಲ ದಿನದಾಟ ಮುಗಿಯುವುದಕ್ಕೆ ಇನ್ನೊಂದು ಓವರ್ ಬಾಕಿ ಇರುವಾಗ ಕೊನೆಯ ಓವರ್ ಬೌಲ್ ಮಾಡುವ ಜವಬ್ದಾರಿಯನ್ನು ನಾಯಕ ಬುಮ್ರಾ ತೆಗೆದುಕೊಂಡರು. ಈ ವೇಳೆ ಓವರ್​ನ ಮೊದಲ ಮೂರು ಎಸೆತಗಳನ್ನು ಎದುರಿಸಿದ ಕೊನ್​ಸ್ಟಾಸ್ ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ನಾನ್​ ಸ್ಟ್ರೈಕ್​ಗೆ ಬಂದರು. 4ನೇ ಎಸೆತವನ್ನು ಎದುರಿಸಿದ ಖವಾಜಾಗೆ ಯಾವುದೇ ರನ್ ಕದಿಯಲು ಸಾಧ್ಯವಾಗಲಿಲ್ಲ. ಈ ವೇಳೆ ಐದನೇ ಎಸೆತವನ್ನು ಬೌಲ್ ಮಾಡಲು ಬುಮ್ರಾ ಮುಂದಾದರು. ಆದರೆ ಸ್ಟ್ರೈಕ್​ನಲ್ಲಿದ್ದ ಖವಾಜಾ ಇನ್ನು ಬ್ಯಾಟಿಂಗ್​ಗೆ ಸಿದ್ದರಿರಲಿಲ್ಲ.

ಸುಮ್ಮನೆ ಜಗಳ ತೆಗೆದ ಕೊನ್​ಸ್ಟಾಸ್

ಹೀಗಾಗಿ ಸ್ವಲ್ಪ ಸಮಯ ಕಾಯ್ದ ಬುಮ್ರಾ ಮತ್ತೆ ಬೌಲಿಂಗ್ ಮಾಡಲು ಮುಂದಾದರು. ಆಗಲೂ ಖವಾಜಾ ಸಿದ್ದರಿರಲಿಲ್ಲ. ಇದರಿಂದ ಕೋಪಗೊಂಡ ಬುಮ್ರಾ, ನೀನು ಸಿದ್ದನಾಗಲು ಎಷ್ಟು ಸಮಯ ಬೇಕಪ್ಪ ಎಂಬರ್ಥದಲ್ಲಿ ಸನ್ನೆ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದರು. ಈ ವೇಳೆ ನಾನ್ ಸ್ಟ್ರೈಕ್​ನಲ್ಲಿ ನಿಂತಿದ್ದ ಕೊನ್​ಸ್ಟಾನ್ ಸುಮ್ಮನೆ ತನ್ನ ಪಾಡಿಗೆ ತಾನು ಇರದೆ, ಬುಮ್ರಾ ಜೊತೆಗೆ ಜಗಳಕ್ಕೆ ಹೋದರು. ಇದನ್ನು ನೋಡಿದ ಬುಮ್ರಾ ಕೂಡ ಬೌಲಿಂಗ್ ಮಾಡುವುದನ್ನು ಬಿಟ್ಟು ಕೊನ್​ಸ್ಟಾನ್ ಬಳಿಗೆ ಬಂದು ಮಾತನಾಡಲಾರಂಭಿಸಿದರು. ಬುಮ್ರಾಗೆ ತಂಡದ ಇತರ ಆಟಗಾರರು ಸಾಥ್ ನೀಡಿದರು. ಅಷ್ಟರಲ್ಲಿ ಮಧ್ಯ ಪ್ರವೇಶಿಸಿದ ಅಂಪೈರ್​ಗಳು ವಾತಾವರಣನ್ನು ತಿಳಿಗೊಳಿಸಿ ಮತ್ತೆ ಆಟವನ್ನು ಆರಂಭಿಸಿದರು.

ಎದುರೇಟು ಕೊಟ್ಟ ಬುಮ್ರಾ

ಸ್ಟ್ರೈಕ್​ನಲ್ಲಿದ್ದ ಖವಾಜಾಗೆ ಬುಮ್ರಾ ಬೌಲ್ ಮಾಡಿದ ಐದನೇ ಎಸೆತದಲ್ಲಿ ಯಾವುದೇ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ಓವರ್​ನ ಕೊನೆಯ ಎಸೆತವನ್ನು ಎದುರಿಸಿ ಅಜೇಯನಾಗಿ ಡಗೌಟ್ ಸೇರಲು ಮುಂದಾಗಿದ್ದ ಖವಾಜಾಗೆ ಬುಮ್ರಾ ಆಘಾತ ನೀಡಿದರು. ತಾನು ಎಸೆದ ಓವರ್​ನ ಕೊನೆಯ ಎಸೆತದಲ್ಲಿ ಬುಮ್ರಾ, ಖವಾಜಾ ಅವರ ವಿಕೆಟ್ ಉರುಳಿಸಿದರು. ಒಂದೆಡೆ ವಿಕೆಟ್ ಒಪ್ಪಿಸಿದ ಬೇಸರದಲ್ಲಿ ಖವಾಜಾ ಪೆವಿಲಿಯನ್​ ಕಡೆಗೆ ಹೆಜ್ಜೆ ಹಾಕಿದರೆ, ಇನ್ನೊಂದೆಡೆ ತನಗೆ ಏನು ಸಂಬಂಧವಿಲ್ಲದ ವಿಚಾರದಲ್ಲಿ ತಲೆ ಹಾಕಿ ಟೀಂ ಇಂಡಿಯಾ ಆಟಗಾರರನ್ನು ಕೆಣಕ್ಕಿದ್ದ ಕೊನ್​ಸ್ಟಾಸ್​ಗೆ ಟೀಂ ಇಂಡಿಯಾ ಆಟಗಾರರ ಚಳಿ ಬಿಡಿಸಿದರು.

ಖವಾಜಾ ಅವರ ವಿಕೆಟ್ ಪಡೆಯುತ್ತಲೆ ಟೀಂ ಇಂಡಿಯಾ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತು. ಕೆಲವೇ ಎಸೆತಗಳ ಹಿಂದೆ ಟೀಂ ಇಂಡಿಯಾವನ್ನು ಕೆಣಕ್ಕಿದ ಕೊನ್​ಸ್ಟಾಸ್ ಬಳಿಕ ಓಡಿದ ತಂಡದ ಎಲ್ಲಾ ಆಟಗಾರರು ಅವರ ಮುಂದೆ ಆಕ್ರಮಣಕಾರಿಯಾಗಿ ಸಂಭ್ರಮಾಚರಣೆ ಮಾಡಿದರು. ಇದೇ ವೇಳೆ ಬುಮ್ರಾ ಕೂಡ ಕೊನ್​ಸ್ಟಾಸ್ ಕಡೆಗೆ ತಿರುಗಿ ನನ್ನ ಮುಂದೆ ನೀನು ಏನೇನೂ ಅಲ್ಲವೆಂಬಂತೆ ಸನ್ನೆ ಮಾಡಿ ಕೊನ್​ಸ್ಟಾಸ್​ಗೆ ಬೀಳ್ಕೊಟ್ಟರು. ಈ ಇಡೀ ಪ್ರಸಂಗ ಮೈದಾನದಲ್ಲಿ ನೆರೆದಿದ್ದವರನ್ನು ರೋಮಾಂಚನಗೊಳಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:20 pm, Fri, 3 January 25