
ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಿದ ಟೀಂ ಇಂಡಿಯಾ (India vs Australia) ಸರಣಿ ಸೋಲಿನೊಂದಿಗೆ ತನ್ನ ಪ್ರವಾಸ ಮುಗಿಸಿದೆ. ಇದೀಗ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಉಭಯ ತಂಡಗಳ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಅಕ್ಟೋಬರ್ 29 ರಿಂದ ನಡೆಯಲಿದೆ. ಸೂರ್ಯಕುಮಾರ್ ಯಾದವ್ ಈ ಟಿ20 ಸರಣಿಯಲ್ಲಿ ಭಾರತವನ್ನು ಮುನ್ನಡೆಸಿದರೆ, ಮಿಚೆಲ್ ಮಾರ್ಷ್ (Mitchell Marsh) ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಆದಾಗ್ಯೂ ಈ ಸರಣಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದಿಂದ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಅದೆನೆಂದರೆ ಈ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಅಕ್ಟೋಬರ್ 24 ರ ಶುಕ್ರವಾರ ಟಿ20 ತಂಡದಲ್ಲಿ ಬದಲಾವಣೆಗಳನ್ನು ಘೋಷಿಸಿದೆ. ಅನುಭವಿ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವೇಗದ ಬೌಲರ್ ಬೆನ್ ದ್ವಾರ್ಶುಯಿಸ್ ಟಿ20 ತಂಡಕ್ಕೆ ಮರಳಿದ್ದಾರೆ. ಒಟ್ಟಾರೆ ಟಿ20 ತಂಡದಲ್ಲಿ ನಾಲ್ವರು ಆಟಗಾರರಿಗೆ ಅವಕಾಶ ನೀಡಲಾಗಿದ್ದು, ಇಬ್ಬರು ಆಟಗಾರರನ್ನು ಟಿ20 ಸರಣಿಯಿಂದ ಕೈಬಿಡಲಾಗಿದೆ.
ಮೇಲೆ ಹೇಳಿದಂತೆ ಈ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ 4 ಬದಲಾವಣೆಗಳನ್ನು ಮಾಡಲಾಗಿದೆ. ಕೆಲವು ದಿನಗಳಿಂದ ಇಂಜುರಿಯಿಂದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಟಿ20 ತಂಡವನ್ನು ಕೂಡಿಕೊಂಡಿದ್ದಾರೆ. ಆದಾಗ್ಯೂ ಗ್ಲೆನ್ ಮ್ಯಾಕ್ಸ್‌ವೆಲ್ ಮೊದಲ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದು, ಉಳಿದು ಮೂರು ಪಂದ್ಯಗಳಲ್ಲಿ ಆಡಲಿದ್ದಾರೆ. ಬೆನ್ ದ್ವಾರ್ಶುಯಿಸ್ ಅವರನ್ನು ನಾಲ್ಕನೇ ಮತ್ತು ಐದನೇ ಟಿ20ಪಂದ್ಯಕ್ಕೆ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಇಪ್ಪತ್ತು ವರ್ಷದ ವೇಗದ ಬೌಲರ್ ಮಹ್ಲಿ ಬಿಯರ್ಡ್‌ಮನ್ ಅವರನ್ನು ಮೂರನೇ, ನಾಲ್ಕನೇ ಮತ್ತು ಐದನೇ ಟಿ20ಪಂದ್ಯಗಳಿಗೆ ಅಚ್ಚರಿಯ ಪ್ಯಾಕೇಜ್ ಆಗಿ ಆಯ್ಕೆ ಮಾಡಲಾಗಿದೆ.
ಇವರ ಜೊತೆಗೆ, ಜೋಶ್ ಫಿಲಿಪ್ ಎಲ್ಲಾ ಐದು ಟಿ20ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಹೀಗೆ ಟಿ20 ತಂಡಕ್ಕೆ ನಾಲ್ವರು ಆಟಗಾರರ ಆಗಮನವಾಗಿದ್ದರೆ, ಇಬ್ಬರು ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಮೊದಲ ಎರಡು ಟಿ20 ಪಂದ್ಯಗಳ ನಂತರ ಅನುಭವಿ ವೇಗಿ ಜೋಶ್ ಹೇಜಲ್‌ವುಡ್ ಅವರನ್ನು ಟಿ20 ತಂಡದಿಂದ ಹೊರಗಿಡಲಾಗಿದೆ. ಹಾಗೆಯೇ ಸೀನ್ ಅಬಾಟ್ ಅವರನ್ನು ಮೊದಲ ಮೂರು ಟಿ20 ಪಂದ್ಯಗಳ ನಂತರ ತಂಡದಿಂದ ಹೊರಗಿಡಲಾಗಿದೆ.
ಆಸ್ಟ್ರೇಲಿಯಾದ ಪರಿಷ್ಕೃತ ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಮಿಚೆಲ್ ಓವನ್, ಜೋಶ್ ಫಿಲಿಪ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ, ಮಹ್ಲಿ ಬಿಯರ್ಡ್‌ಮನ್ (ಕೊನೆಯ 3 ಪಂದ್ಯಗಳಿಗೆ), ಸೀನ್ ಅಬಾಟ್ (ಮೊದಲ 3 ಪಂದ್ಯಗಳಿಗೆ), ಬೆನ್ ದ್ವಾರಶುಯಿಸ್ (ಕೊನೆಯ 2 ಪಂದ್ಯಗಳಿಗೆ), ಜೋಶ್ ಹೇಜಲ್‌ವುಡ್ (ಮೊದಲ 2 ಪಂದ್ಯಗಳಿಗೆ) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (ಕೊನೆಯ 3 ಪಂದ್ಯಗಳಿಗೆ).
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ