Rohit Sharma: ‘ಕೊನೆಯ ವಿದಾಯ’..; ಸಿಡ್ನಿಯಿಂದ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರೋಹಿತ್
Rohit Sharma Australia farewell: ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ ಮುಗಿದಿದೆ. ಸರಣಿ ಸೋತರೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾವನಾತ್ಮಕವಾಗಿ ಆಸ್ಟ್ರೇಲಿಯಾಕ್ಕೆ ವಿದಾಯ ಹೇಳಿದ್ದಾರೆ. ರೋಹಿತ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಇದು ಕೊನೆಯ ಪ್ರವಾಸ ಇರಬಹುದು ಎಂದು ಸೂಚಿಸಿದ್ದಾರೆ. ಅಭಿಮಾನಿಗಳಲ್ಲಿ ಇದು ರೋಹಿತ್ ಅವರ ಏಕದಿನ ಕ್ರಿಕೆಟ್ ನಿವೃತ್ತಿಯ ಬಗ್ಗೆ ಊಹಾಪೋಹ ಹುಟ್ಟುಹಾಕಿದೆ. ರೋಹಿತ್ ಈ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯಗೊಂಡಿದೆ. ಭಾರತ ಸರಣಿಯನ್ನು 1-2 ಅಂತರದಿಂದ ಸೋತು ತನ್ನ ತವರಿಗೆ ವಾಪಸ್ಸಾಗುತ್ತಿದೆ. ಆದಾಗ್ಯೂ ಟೀಂ ಇಂಡಿಯಾದ ಇಬ್ಬರು ಅನುಭವಿ ಬ್ಯಾಟರ್ಗಳಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿಗೆ (Virat Kohli) ಇದು ಕೊನೆಯ ಆಸ್ಟ್ರೇಲಿಯಾ ಪ್ರವಾಸ ಆಗಿದ್ದ ಕಾರಣ ಈ ಸರಣಿ ಇವರಿಬ್ಬರಿಗೆ ಒಂದು ರೀತಿಯ ಭಾವನಾತ್ಮಕ ಕ್ಷಣವಾಗಿತ್ತು. ಸರಣಿ ಭಾರತದ ಕೈತಪ್ಪಿದರೂ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಇವರಿಬ್ಬರು ಇದು ತಮ್ಮ ಕೊನೆಯ ಆಸ್ಟ್ರೇಲಿಯಾ ಪ್ರವಾಸ ಎಂಬುದನ್ನು ಖಚಿತಪಡಿಸಿದ್ದರು. ಇದೀಗ ಆಸ್ಟ್ರೇಲಿಯಾದಿಂದ ಹೊರಡುವುದಕ್ಕೂ ಮುನ್ನ ರೋಹಿತ್ ಶರ್ಮಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ಆಸ್ಟ್ರೇಲಿಯಾಕ್ಕೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.
ಸರಣಿಶ್ರೇಷ್ಠ ಪ್ರಶಸ್ತಿ
ವಾಸ್ತವವಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಪ್ರದರ್ಶನ ಅದ್ಭುತವಾಗಿತ್ತು. ಮೊದಲ ಪಂದ್ಯದಲ್ಲಿ ರೋಹಿತ್ ವಿಫಲರಾದರೂ ಉಳಿದೆರಡು ಪಂದ್ಯಗಳಲ್ಲಿ ಗಮನಅರ್ಹ ಪ್ರದರ್ಶನ ನೀಡಿದರು. ಅದರಲ್ಲೂ ಸಿಡ್ನಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಒಂಬತ್ತು ವಿಕೆಟ್‌ಗಳ ಗೆಲುವಿನಲ್ಲಿ ರೋಹಿತ್ ಶರ್ಮಾ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ ರೋಹಿತ್, ಸರಣಿಯಲ್ಲಿ 202 ರನ್ ಗಳಿಸುವ ಮೂಲಕ ಪಂದ್ಯಶ್ರೇಷ್ಠ ಮಾತ್ರವಲ್ಲದೆ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಕೊನೆಯ ಬಾರಿಗೆ ಸಿಡ್ನಿಗೆ ವಿದಾಯ
ಆಸ್ಟ್ರೇಲಿಯಾದಿಂದ ಹೊರಡುವುದಕ್ಕೂ ಮುನ್ನ ರೋಹಿತ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋಗೆ ‘ಕೊನೆಯ ಬಾರಿಗೆ ಸಿಡ್ನಿಗೆ ವಿದಾಯ’ ಎಂಬ ಶೀರ್ಷಿಕೆ ಕೂಡ ನೀಡಿದ್ದಾರೆ. ರೋಹಿತ್ ಅವರ ಈ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದ್ದು, ಇದು ರೋಹಿತ್ ಅವರು ಏಕದಿನ ಕ್ರಿಕೆಟ್‌ನಿಂದ ನಿರ್ಗಮಿಸುವುದನ್ನು ಸೂಚಿಸುತ್ತಿದೆಯೇ ಅಥವಾ ಆಸ್ಟ್ರೇಲಿಯಾ ಪ್ರವಾಸದ ಹಳೆಯ ನೆನಪುಗಳನ್ನು ಮತ್ತೆ ಹುಟ್ಟುಹಾಕುತ್ತಿದೆಯೇ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.
One last time, signing off from Sydney 👊 pic.twitter.com/Tp4ILDfqJm
— Rohit Sharma (@ImRo45) October 26, 2025
ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ
ಕೊನೆಯ ಏಕದಿನ ಪಂದ್ಯ ಮುಗಿದ ಬಳಿಕ ಮಾತನಾಡಿದ ರೋಹಿತ್, ‘ನಾವು ಕ್ರಿಕೆಟಿಗರಾಗಿ ಮತ್ತೆ ಆಸ್ಟ್ರೇಲಿಯಾಕ್ಕೆ ಬರುತ್ತೇವೆಯೇ ಅಥವಾ ಇಲ್ಲವೇ ಎಂದು ನನಗೆ ತಿಳಿದಿಲ್ಲ, ಆದರೆ ನಾನು ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ’ ಎಂದರು. 2008 ರಲ್ಲಿ ತಮ್ಮ ಮೊದಲ ಆಸ್ಟ್ರೇಲಿಯಾ ಪ್ರವಾಸವನ್ನು ನೆನಪಿಸಿಕೊಂಡ ಅವರು, SCG ಯಾವಾಗಲೂ ತಮ್ಮ ವೃತ್ತಿಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತದೆ ಎಂದ ರೋಹಿತ್ ವಿರಾಟ್ ಕೊಹ್ಲಿಗೆ ಧನ್ಯವಾದ ಅರ್ಪಿಸಿದರು. ಕಳೆದ 15 ವರ್ಷಗಳಲ್ಲಿ ಏನಾಯಿತು ಎಂಬುದನ್ನು ಮರೆತುಬಿಡಿ, ನಾನು ಯಾವಾಗಲೂ ಇಲ್ಲಿ ಆಡಲು ಇಷ್ಟಪಡುತ್ತೇನೆ ಎಂದು ರೋಹಿತ್ ಹೇಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:46 pm, Sun, 26 October 25
