IND vs AUS: ಟೀಮ್ ಇಂಡಿಯಾದ ಐವರಿಗೆ ಇದು ಮೊದಲ ಪಿಂಕ್ ಬಾಲ್ ಟೆಸ್ಟ್
India vs Australia Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯವು ಡಿಸೆಂಬರ್ 6 ರಿಂದ ಶುರುವಾಗಲಿದೆ. ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಎಂಬುದು ವಿಶೇಷ. ಅಂದರೆ ಈ ಟೆಸ್ಟ್ ಪಂದ್ಯವನ್ನು ಹೊನಲು ಬೆಳಕಿನಲ್ಲಿ ಆಡಲಾಗುತ್ತದೆ.
ಬಾರ್ಡರ್-ಗವಾಸ್ಕರ್ ಸರಣಿಯ ಪಿಂಕ್ ಬಾಲ್ ಟೆಸ್ಟ್ಗೆ ವೇದಿಕೆ ಸಿದ್ಧವಾಗಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯವನ್ನು ಪಿಂಕ್ ಬಾಲ್ನಲ್ಲಿ ಆಡಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಮ್ಯಾಚ್ ಹೊನಲು-ಬೆಳಕಿನಲ್ಲಿ ನಡೆಯುತ್ತಿರುವುದು. ಡೇ-ನೈಟ್ನಲ್ಲಿ ನಡೆಯುವ ಟೆಸ್ಟ್ ಪಂದ್ಯಗಳನ್ನು ಪಿಂಕ್ ಬಾಲ್ನಲ್ಲಿ ಆಡಲಾಗುತ್ತದೆ.
ವಿಶೇಷ ಎಂದರೆ ಈ ಪಂದ್ಯದ ಮೂಲಕ ಟೀಮ್ ಇಂಡಿಯಾದ ಐವರು ಚೊಚ್ಚಲ ಬಾರಿ ಪಿಂಕ್ ಬಾಲ್ ಟೆಸ್ಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪರ್ತ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 295 ರನ್ಗಳ ಭರ್ಜರಿ ಜಯ ಸಾಧಿಸಿರುವ ಕಾರಣ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ. ಹೀಗಾಗಿ ಐವರು ಆಟಗಾರರಿಗೆ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಡುವ ಅವಕಾಶ ದೊರೆಯಬಹುದು.
ಅದರಂತೆ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್ ಮತ್ತು ಹರ್ಷಿತ್ ರಾಣಾ ಮೊದಲ ಬಾರಿಗೆ ಪಿಂಕ್ ಬಾಲ್ ಟೆಸ್ಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ದ್ವಿತೀಯ ಟೆಸ್ಟ್ನಲ್ಲಿ ಕಾಣಿಸಿಕೊಂಡರೆ ದೇವದತ್ ಪಡಿಕ್ಕಲ್ ತಂಡದಿಂದ ಹೊರಬೀಳಲಿದ್ದಾರೆ. ಹಾಗೆಯೇ ನಿತೀಶ್ ಕುಮಾರ್ ರೆಡ್ಡಿ ಅವಕಾಶ ವಂಚಿತರಾಗಬಹುದು.
ಪಿಂಕ್ ಬಾಲ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ದಾಖಲೆ ಹೇಗಿದೆ?
ಭಾರತ ತಂಡವು ಈವರೆಗೆ 4 ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಟೀಮ್ ಇಂಡಿಯಾ 3 ಪಂದ್ಯಗಳನ್ನು ಗೆದ್ದುಕೊಂಡಿದೆ. ಹಾಗೆಯೇ 1 ಪಂದ್ಯದಲ್ಲಿ ಸೋಲು ಅನುಭವಿಸಿದೆ. ಹೀಗೆ ಪಿಂಕ್ ಬಾಲ್ ಟೆಸ್ಟ್ನಲ್ಲಿ ಭಾರತ ತಂಡ ಸೋತಿರುವುದು ಆಸ್ಟ್ರೇಲಿಯಾ ವಿರುದ್ಧ ಮಾತ್ರ ಎಂಬುದು ಇಲ್ಲಿ ಉಲ್ಲೇಖಾರ್ಹ.
ಇದನ್ನೂ ಓದಿ: IPL 2025: ಪಂಜಾಬ್ ಕಿಂಗ್ಸ್ ಈಗ ಮಿನಿ ಆಸ್ಟ್ರೇಲಿಯಾ
ಹಾಗೆಯೇ ಟೀಮ್ ಇಂಡಿಯಾ ಗೆದ್ದಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳು ನಡೆದಿರುವುದು ಭಾರತದಲ್ಲಿ. ಅಂದರೆ ತವರಿನಲ್ಲಿ ಮಾತ್ರ ಟೀಮ್ ಇಂಡಿಯಾ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ಹೀಗಾಗಿ ಅಡಿಲೇಡ್ ಟೆಸ್ಟ್ ಪಂದ್ಯದ ಗೆಲುವು ಭಾರತದ ಮೊದಲ ವಿದೇಶಿ ಪಿಂಕ್ ಬಾಲ್ ಟೆಸ್ಟ್ ಗೆಲುವಾಗಲಿದೆ.
ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ:
2ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ (D/N) | ಶುಕ್ರವಾರ, 6 ಡಿಸೆಂಬರ್ 2024 | 9:30 AM | ಅಡಿಲೇಡ್ |
3ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶನಿವಾರ, 14 ಡಿಸೆಂಬರ್ 2024 | 5:50 AM | ಬ್ರಿಸ್ಬೇನ್ |
4ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಗುರುವಾರ, 26 ಡಿಸೆಂಬರ್ 2024 | 5 AM | ಮೆಲ್ಬೋರ್ನ್ |
5ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 3 ಜನವರಿ 2025 | 5 AM | ಸಿಡ್ನಿ |