ಫಾಲೋಆನ್​ ತಪ್ಪಿಸಿಕೊಂಡ ಟೀಮ್ ಇಂಡಿಯಾಗೆ ಗೆದ್ದಷ್ಟೇ ಖುಷಿ..!

ಫಾಲೋಆನ್​ ತಪ್ಪಿಸಿಕೊಂಡ ಟೀಮ್ ಇಂಡಿಯಾಗೆ ಗೆದ್ದಷ್ಟೇ ಖುಷಿ..!

ಝಾಹಿರ್ ಯೂಸುಫ್
|

Updated on:Dec 17, 2024 | 2:25 PM

IND vs AUS: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾ ಪರ ಜಸ್​ಪ್ರೀತ್ ಬುಮ್ರಾ ಹಾಗೂ ಆಕಾಶ್ ದೀಪ್ ಅತ್ಯಮೂಲ್ಯ 39 ರನ್​ಗಳ ಜೊತೆಯಾಟವಾಡಿದ್ದಾರೆ. ಈ ಮೂಲಕ ಭಾರತ ತಂಡವನ್ನು ಫಾಲೋಆನ್​ನಿಂದ ಪಾರು ಮಾಡಿದ್ದಾರೆ. ಈ ಮೂಲಕ ನಾಲ್ಕನೇ ದಿನದಾಟದಲ್ಲಿ ಆಲೌಟ್ ಆಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮಳೆ ಬಾಧಿತ ಈ ಪಂದ್ಯದಲ್ಲಿ 51 ರನ್​ಗಳೊಂದಿಗೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 213 ರನ್​​ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡಿತು.

ಅತ್ತ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​ನಲ್ಲಿ 445 ರನ್​​ಗಳಿಸಿದ್ದರಿಂದ ಟೀಮ್ ಇಂಡಿಯಾ ಫಾಲೋಆನ್ ತಪ್ಪಿಸಿಕೊಳ್ಳಲು 246 ರನ್ ಕಲೆಹಾಕುವುದು ಅನಿವಾರ್ಯವಾಗಿತ್ತು. ಒಂದು ವೇಳೆ ಭಾರತ ತಂಡವನ್ನು 246 ರನ್​​ಗಳ ಒಳಗೆ ಆಸ್ಟ್ರೇಲಿಯಾ ತಂಡ ಆಲೌಟ್ ಮಾಡಿದರೆ ಫಾಲೋಆನ್ ಹೇರುವ ಅವಕಾಶ ಹೊಂದಿತ್ತು.

ಒಂದು ವೇಳೆ ಫಾಲೋಆನ್ ಹೇರಿದರೆ ಭಾರತ ತಂಡವು ದ್ವಿತೀಯ ಇನಿಂಗ್ಸ್ ಆರಂಭಿಸಬೇಕಿತ್ತು. ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾವನ್ನು ಆಲೌಟ್ ಮಾಡಿದರೆ ಆಸ್ಟ್ರೇಲಿಯಾ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲು ಉತ್ತಮ ಅವಕಾಶ ಲಭಿಸುತ್ತಿತ್ತು.

ಆದರೆ ಕೊನೆಯ ವಿಕೆಟ್​ಗೆ ಜೊತೆಯಾದ ಜಸ್​ಪ್ರೀತ್ ಬುಮ್ರಾ ಹಾಗೂ ಆಕಾಶ್ ದೀಪ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಅತ್ತ ಆಸ್ಟ್ರೇಲಿಯನ್ನರು ಕೊನೆಯ ವಿಕೆಟ್​ಗಾಗಿ ಹರಸಾಹಸ ಪಟ್ಟರೆ, ಇತ್ತ ಟೀಮ್ ಇಂಡಿಯಾ ಫಾಲೋಆನ್ ತಪ್ಪಿಸಲು 33 ರನ್​ಗಳ ಲೆಕ್ಕಾಚಾರಕ್ಕೆ ಇಳಿದಿತ್ತು.

ಈ ಲೆಕ್ಕಾಚಾರದೊಂದಿಗೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸಹಾಯಕ ಕೋಚ್ ಅಭಿಷೇಕ್ ನಾಯರ್ ಡ್ರೆಸ್ಸಿಂಗ್​ ರೂಮ್​ನಲ್ಲಿ ಕೂತು ಗಂಭೀರವಾಗಿ ಪಂದ್ಯ ವೀಕ್ಷಿಸುತ್ತಿದ್ದರು.

ಅದರಂತೆ ಪ್ಯಾಟ್ ಕಮಿನ್ಸ್​ ಎಸೆದ 75ನೇ ಓವರ್​ನ 2ನೇ ಎಸೆತದಲ್ಲಿ ಆಕಾಶ್ ದೀಪ್ ಫೋರ್​ ಬಾರಿಸುತ್ತಿದ್ದಂತೆ ಟೀಮ್ ಇಂಡಿಯಾದ ಮೊತ್ತವು 246 ಕ್ಕೆ ತಲುಪಿದೆ. ಇತ್ತ ಭಾರತ ತಂಡವು ಫಾಲೋಆನ್ ತಪ್ಪಿಸಿಕೊಳ್ಳುತ್ತಿದ್ದಂತೆ ಡ್ರೆಸ್ಸಿಂಗ್​ ರೂಮ್​ನಲ್ಲಿ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿತು.

ಭಾರತ ತಂಡದ ಮೊತ್ತ 246 ಕ್ಕೇರುತ್ತಿದ್ದಂತೆ ವಿರಾಟ್ ಕೊಹ್ಲಿ ಎದ್ದು ಗೌತಮ್ ಗಂಭೀರ್, ರೋಹಿತ್ ಶರ್ಮಾ ಹಾಗೂ ಅಭಿಷೇಕ್ ನಾಯರ್ ಅವರೊಂದಿಗೆ ಹೈಫೈ ಮಾಡುವ ಮೂಲಕ ಸಂಭ್ರಮಿಸಿದರು. ಇದೀಗ ಟೀಮ್ ಇಂಡಿಯಾದ ಈ ಸಂಭ್ರಮದ ವಿಡಿಯೋ ಭಾರೀ ವೈರಲ್ ಆಗಿದೆ.

ಇನ್ನು ನಾಲ್ಕನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 9 ವಿಕೆಟ್ ಕಳೆದುಕೊಂಡು 252 ರನ್ ಕಲೆಹಾಕಿದೆ. ಐದನೇ ದಿನದಾಟದಲ್ಲಿ ಭಾರತ ತಂಡವು ಬ್ಯಾಟಿಂಗ್ ಮುಂದುವರೆಸಲಿದ್ದು, ಇದಾದ ಬಳಿಕವಷ್ಟೇ ಆಸ್ಟ್ರೇಲಿಯಾ ತಂಡ ದ್ವಿತೀಯ ಇನಿಂಗ್ಸ್ ಆರಂಭಿಸಲಿದೆ. ಹೀಗಾಗಿ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚು.

 

Published on: Dec 17, 2024 02:25 PM