Ishan Kishan: 24 ಬೌಂಡರಿ, 10 ಸಿಕ್ಸರ್! 131 ಎಸೆತಗಳಲ್ಲಿ 210 ರನ್ ಸಿಡಿಸಿ ವಿಶ್ವದಾಖಲೆ ಬರೆದ ಕಿಶನ್..!

| Updated By: ಪೃಥ್ವಿಶಂಕರ

Updated on: Dec 10, 2022 | 3:14 PM

IND vs BAN: ಈ ಪಂದ್ಯದಲ್ಲಿ 126 ಎಸೆತಗಳನ್ನು ಎದುರಿಸಿದ ಕಿಶನ್ ತಮ್ಮ ದ್ವಿಶತಕ ಪೂರ್ಣಗೊಳಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೂ ಕಿಶನ್ ಪಾತ್ರರಾದರು.

Ishan Kishan: 24 ಬೌಂಡರಿ, 10 ಸಿಕ್ಸರ್! 131 ಎಸೆತಗಳಲ್ಲಿ 210 ರನ್ ಸಿಡಿಸಿ ವಿಶ್ವದಾಖಲೆ ಬರೆದ ಕಿಶನ್..!
Ishan Kishan
Follow us on

ಬಾಂಗ್ಲಾದೇಶ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ (India vs Bangladesh) ಆರಂಭಿಕ ಆಟಗಾರ ಇಶಾನ್ ಕಿಶನ್ (Ishan Kishan) ದಾಖಲೆಯ ದ್ವಿಶತಕ ಸಿಡಿಸಿದ್ದಾರೆ. ಅಲ್ಲದೆ ಬಾಂಗ್ಲಾದೇಶ ವಿರುದ್ಧ ಅತಿವೇಗದ ದ್ವಿಶತಕ ಬಾರಿಸಿ ವಿಶ್ವದಾಖಲೆ ಕೂಡ ಬರೆದಿದ್ದಾರೆ. ಈ ಪಂದ್ಯದಲ್ಲಿ 126 ಎಸೆತಗಳನ್ನು ಎದುರಿಸಿದ ಕಿಶನ್ ತಮ್ಮ ದ್ವಿಶತಕ ಪೂರ್ಣಗೊಳಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೂ ಕಿಶನ್ ಪಾತ್ರರಾದರು. ಒಂದು ಹಂತದಲ್ಲಿ ರೋಹಿತ್ ಅವರ 264 ರನ್​ಗಳ ದಾಖಲೆಯನ್ನು ಮುರಿಯುವಂತೆ ಕಾಣುತ್ತಿದ್ದ ಕಿಶನ್ 210 ರನ್ ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.

ಇದರೊಂದಿಗೆ ಏಕದಿನ ಸರಣಿ ಸೋಲಿನಿಂದ ನಿರಾಸೆಗೊಂಡಿದ್ದ ಟೀಂ ಇಂಡಿಯಾ ಅಭಿಮಾನಿಗಳಿಗೆ ಇಶಾನ್ ಕಿಶನ್ ಅವರ ಸ್ಫೋಟಕ ದ್ವಿಶತಕ ಕೊಂಚ ನಿರಾಳ ತಂದಿದೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಕಿಶನ್ ಕೇವಲ 85 ಎಸೆತಗಳಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಶತಕವನ್ನು ಪೂರೈಸಿದರೆ, ಅದನ್ನು ಬೇಗನೆ ದ್ವಿಶತಕವಾಗಿ ಪರಿವರ್ತಿಸಿದರು. ಬಾಂಗ್ಲಾ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕಿಶನ್, ಮೈದಾನದ ಅಷ್ಟ ದಿಕ್ಕುಗಳಿಗೆ ಚೆಂಡಿನ ದರ್ಶನ ಮಾಡಿಸಿದರು.

24 ಬೌಂಡರಿ ಹಾಗೂ 10 ಸಿಕ್ಸರ್

ಕಳೆದ ಎರಡು ಏಕದಿನ ಪಂದ್ಯಗಳಲ್ಲಿ ಭಾರತಕ್ಕೆ ತೊಂದರೆ ನೀಡಿದ ಮೆಹದಿ ಹಸನ್ ಮಿರಾಜ್, ಎಬಾದತ್ ಹೊಸೈನ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕಿಶನ್ ಕೇವಲ 131 ಎಸೆತಗಳಲ್ಲಿ 24 ಬೌಂಡರಿ ಹಾಗೂ 10 ಸಿಕ್ಸರ್​ಗಳ ಸಹಿತ 210 ರನ್ ಚಚ್ಚಿದರು. ಗಾಯದ ಕಾರಣ ಖಾಯಂ ನಾಯಕ ರೋಹಿತ್ ಶರ್ಮಾ ಬದಲಿಗೆ ಶಿಖರ್ ಧವನ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಕಿಶನ್, ಭಾರತ ಬೃಹತ್ ಟಾರ್ಗೆಟ್ ಸೆಟ್​ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.

IND vs BAN: 15 ಬೌಂಡರಿ, 3 ಸಿಕ್ಸರ್; ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿದ ಇಶಾನ್ ಕಿಶನ್..!

ಶತಕದ ಬಳಿಕ ಗೇರ್ ಬದಲಿಸಿದ ಕಿಶನ್

ಅನುಭವಿ ಆರಂಭಿಕ ಆಟಗಾರ ಧವನ್ ಔಟಾದ ನಂತರ ಇನ್ನೊಂದು ತುದಿಯಿಂದ ಕೊಹ್ಲಿಯ ಬೆಂಬಲ ಪಡೆದ ಕಿಶನ್ ಶತಕದ ಬಳಿಕ ತಮ್ಮ ವೇಗ ಹೆಚ್ಚಿಸಿದರು. ಮೊದಲು ಶತಕ ಪೂರೈಸಲು 85 ಎಸೆತಗಳನ್ನು ಎದುರಿಸಿದ ಕಿಶನ್ ಈ ಹಂತದಲ್ಲಿ 15 ಬೌಂಡರಿ ಹಾಗೂ 3 ಸಿಕ್ಸರ್ ಅಷ್ಟೇ ಬಾರಿಸಿದ್ದರು. ಆ ನಂತರ ರೌದ್ರಾವತಾರ ತಾಳಿದ ಕಿಶನ್ ಕೇವಲ 103 ಎಸೆತಗಳಲ್ಲಿ 150 ರನ್ ಪೂರೈಸಿ ಇತಿಹಾಸ ನಿರ್ಮಿಸಿದರು. ಇದರೊಂದಿಗೆ ಏಕದಿನದಲ್ಲಿ ಅತಿ ವೇಗವಾಗಿ 150 ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ತಂಡಕ್ಕೆ ಗ್ರ್ಯಾಂಡ್ ರೀಎಂಟ್ರಿ

ಟೀಂ ಇಂಡಿಯಾ ಪರ ಕೊನೆಯದಾಗಿ ಇದೇ ವರ್ಷ ಅಕ್ಟೋಬರ್ 11 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯವನ್ನಾಡಿದ ಕಿಶನ್​​ಗೆ ನಂತರ ಅವಕಾಶಗಳು ಸಿಕ್ಕಿರಲಿಲ್ಲ. ಅಲ್ಲದೆ ಕಳಪೆ ಫಾರ್ಮ್‌ನಿಂದಾಗಿ ಬಳಲುತ್ತಿದ್ದ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಈಗ ಭರ್ಜರಿ ಫಾರ್ಮ್​ನೊಂದಿಗೆ ತಂಡಕ್ಕೆ ಮರಳಿರುವ ಕಿಶನ್, ಆರಂಭಿಕ ಸ್ಥಾನಕ್ಕೆ ನಾನೂ ಕೂಡ ಪ್ರಬಲ ಸ್ಪರ್ಧಿ ಎಂಬ ಸಿಗ್ನಲ್ ನೀಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Sat, 10 December 22