IND vs BAN: ನಂಗ್ಯಾಕೆ ಹೊಡೀತಿಯಾ… ಪಂತ್-ದಾಸ್ ನಡುವೆ ವಾಕ್ಸಮರ
India vs Bangladesh, 1st Test: ಭಾರತದ ವಿರುದ್ಧದ ಮೊದಲ ಟೆಸ್ಟ್ನ ಫಸ್ಟ್ ಸೆಷನ್ನಲ್ಲಿ ಯುವ ವೇಗಿ ಹಸನ್ ಮಹಮೂದ್ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದಾರೆ. ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿಯ ವಿಕೆಟ್ ಕಬಳಿಸಿರುವ ಹಸನ್ ಬಾಂಗ್ಲಾ ತಂಡಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟಿದ್ದಾರೆ. ಆದರೆ ಬಳಿಕ ಟೀಮ್ ಇಂಡಿಯಾ ಪರ ರಿಷಭ್ ಪಂತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ಸೆಷನ್ನಲ್ಲೇ ವಾಕ್ಸಮರ ಶುರುವಾಗಿದೆ. ಅದು ಸಹ ಇಬ್ಬರು ವಿಕೆಟ್ ಕೀಪರ್ಗಳ ನಡುವೆ ಎಂಬುದೇ ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ.
ನಾಯಕ ರೋಹಿತ್ ಶರ್ಮಾ 6 ರನ್ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭ್ಮನ್ ಗಿಲ್ ಸೊನ್ನೆ ಸುತ್ತಿದರು. ಇನ್ನು ವಿರಾಟ್ ಕೊಹ್ಲಿ (6) ಕೂಡ ಬಂದ ವೇಗದದಲ್ಲೇ ಪೆವಿಲಿಯನ್ಗೆ ಹಿಂತಿರುಗಿದರು.
ಈ ಹಂತದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ತಂಡದ ಆರಂಭಿಕ ಆಘಾತವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಆತ್ಮ ವಿಶ್ವಾಸದಿಂದಲೇ ಬ್ಯಾಟ್ ಬೀಸಿದ ಪಂತ್ ಆಕರ್ಷಕ ಹೊಡೆತಗಳ ಮೂಲಕ ಬಾಂಗ್ಲಾ ಬೌಲರ್ಗಳ ಬೆಂಡೆತ್ತಿದ್ದರು.
ಇತ್ತ ರಿಷಭ್ ಪಂತ್ ಅಬ್ಬರಿಸುತ್ತಿರುವುದನ್ನು ಗಮನಿಸಿದ ಬಾಂಗ್ಲಾದೇಶ್ ತಂಡದ ವಿಕೆಟ್ ಕೀಪರ್ ಲಿಟ್ಟನ್ ದಾಸ್ ಸುಖಾಸುಮ್ಮನೆ ಕೆಣಕಲು ಮುಂದಾಗಿದ್ದಾರೆ. ಇದಕ್ಕಾಗಿ ಪಂತ್ ಅನ್ನು ಗುರಿಯಾಗಿಸಿ ಚೆಂಡನ್ನು ಎಸೆದಿದ್ದಾರೆ. ಹೀಗೆ ಕ್ರೀಸ್ನಲ್ಲಿರುವ ತನ್ನನ್ನು ಗುರಿಯಾಗಿಸಿ ಚೆಂಡೆಸೆಯುತ್ತಿರುವುದನ್ನು ಗಮನಿಸಿದ ರಿಷಭ್, ಲಿಟ್ಟನ್ ದಾಸ್ ಅವರನ್ನು ಪ್ರಶ್ನಿಸಿದ್ದಾರೆ.
- ಅವನನ್ನು ನೋಡಿ ಚೆಂಡೆಸಿ… ನಂಗ್ಯಾಕೆ ಚೆಂಡನ್ನು ಎಸೆಯುತ್ತಿದ್ದೀಯಾ ಎಂದು ರಿಷಭ್ ಪಂತ್ ಕೇಳಿದ್ದಾರೆ.
- ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಲಿಟ್ಟನ್ ದಾಸ್… ವಿಕೆಟ್ ಮುಂದಿದೆ… ಅದಕ್ಕೆ ಎಸೀತಿದ್ದೀನಿ ಎಂಬ ಉತ್ತರ ನೀಡಿದ್ದಾರೆ.
ಇದೀಗ ಲಿಟ್ಟನ್ ದಾಸ್ ಹಾಗೂ ರಿಷಭ್ ಪಂತ್ ನಡುವಣ ಈ ವಿಡಿಯೋ ವೈರಲ್ ಆಗಿದೆ. ಇತ್ತ ಪಂತ್ ಕೂಡ ವಿಕೆಟ್ ಕೀಪರ್ ಆಗಿರುವುದರಿಂದ ಲಿಟ್ಟನ್ ದಾಸ್ ಬ್ಯಾಟಿಂಗ್ಗೆ ಬಂದಾಗ ಈ ವಾಕ್ಸಮರ ಮುಂದರೆಯುವ ಸಾಧ್ಯತೆಯಿದೆ.
ರಿಷಭ್ ಪಂತ್-ಲಿಟ್ಟನ್ ದಾಸ್ ವಿಡಿಯೋ:
😭🤣 usse feko mujhe kyu maar rhe ho?#RishabhPant being his true self 🤣🤣#ViratKohli #RohitSharma #INDvBAN #IndVsBan #INDvsBANTEST
— 𝐂𝐇𝐈𝐑𝐀𝐆 🃏 (@Chirag2410_) September 19, 2024
ಉತ್ತಮ ಸ್ಥಿತಿಯಲ್ಲಿ ಟೀಮ್ ಇಂಡಿಯಾ:
ಆರಂಭಿಕ ಆಘಾತದ ಹೊರತಾಗಿಯೂ ಟೀಮ್ ಇಂಡಿಯಾ ಭೋಜನಾ ವಿರಾಮದ ವೇಳೆಗೆ ಉತ್ತಮ ಸ್ಥಿತಿಗೆ ತಲುಪಿದೆ. 4ನೇ ವಿಕೆಟ್ಗೆ ಜೊತೆಯಾದ ಯಶಸ್ವಿ ಜೈಸ್ವಾಲ್ (37) ಹಾಗೂ ರಿಷಭ್ ಪಂತ್ (33) 54 ರನ್ಗಳ ಜೊತೆಯಾಟವಾಡಿದ್ದು, ಈ ಮೂಲಕ ಭಾರತ ತಂಡವು ಮೊದಲ ಸೆಷನ್ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 88 ರನ್ ಕಲೆಹಾಕಿದೆ.