ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ 16 ಸದಸ್ಯರ ಟೀಂ ಇಂಡಿಯಾವನ್ನು ಇಂದು ಪ್ರಕಟಿಸಲಾಗಿದೆ. ಎಂದಿನಂತೆ ಟೆಸ್ಟ್ ತಂಡವನ್ನು ರೋಹಿತ್ ಶರ್ಮಾ ಅವರು ಮುನ್ನಡೆಸಲಿದ್ದು, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ವಿಕೆಟ್‌ಕೀಪರ್ ರಿಷಬ್ ಪಂತ್ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಮೊದಲ ಟೆಸ್ಟ್ಗೆ ತಂಡದಲ್ಲಿದ್ದಾರೆ. ಅಲ್ಲದೆ ಕನ್ನಡಿಗ ಕೆಎಲ್ ರಾಹುಲ್ ಕೂಡ ತಂಡಕ್ಕೆ ವಾಪಸಾಗಿದ್ದು, ಎಡಗೈ ವೇಗದ ಬೌಲರ್ ಯಶ್ ದಯಾಳ್ ಅವರಿಗೆ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಸಿಕ್ಕಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯವು ಸೆಪ್ಟೆಂಬರ್ 19 ರಿಂದ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
ವಾಸ್ತವವಾಗಿ ಕಳೆದ ಮಾರ್ಚ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನಾಡಿದ್ದ ಭಾರತ, ಆ ಬಳಿಕ ಇದೇ ಮೊದಲ ಬಾರಿಗೆ ಬಿಳಿ ಜರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ. ಇನ್ನು ಈ ಸರಣಿಯೊಂದಿಗೆ ಹಲವು ಸ್ಟಾರ್ ಕ್ರಿಕೆಟಿಗರು ಟೆಸ್ಟ್ ತಂಡಕ್ಕೆ ಮರಳುತ್ತಿದ್ದಾರೆ. ಅದರಲ್ಲಿ ಪ್ರಮುಖರು ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್. ವಿರಾಟ್ ಕೊಹ್ಲಿ ಈ ಹಿಂದೆ ನಡೆದಿದ್ದ ಅಂದರೆ ಇಂಗ್ಲೆಂಡ್ ವಿರುದ್ದ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಆಡಿರಲಿಲ್ಲ. ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ವಿರಾಟ್, ಕುಟುಂಬದೊಂದಿಗೆ ಸಮಯ ಕಳೆಯುವ ಸಲುವಾಗಿ ಈ ಸರಣಿಯಿಂದ ಹೊರಗುಳಿದಿದ್ದರು.
ಅದೇ ಸಮಯದಲ್ಲಿ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಬರೋಬ್ಬರಿ 21 ತಿಂಗಳ ನಂತರ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಮಗೆಲ್ಲರಿಗೂ ತಿಳಿದಿರುವ ಹಾಗೆ 2022 ರ ಡಿಸೆಂಬರ್ನಲ್ಲಿ ಕಾರು ಅಪಘಾತಕ್ಕೊಳಗಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಪಂತ್, ಕಳೆದ ಐಪಿಎಲ್ನಿಂದ ಮತ್ತೊಮ್ಮೆ ಕ್ರಿಕೆಟ್ ಅಖಾಡಕ್ಕೆ ಇಳಿದಿದ್ದಾರೆ. ಆ ಬಳಿಕ ಟಿ20 ವಿಶ್ವಕಪ್ನಲ್ಲಿ ಆಡಿದ್ದ ಪಂತ್ ಇದೀಗ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಚ್ಚರಿಯೆಂದರೆ ಪಂತ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 21 ತಿಂಗಳ ಹಿಂದೆ ಇದೇ ಬಾಂಗ್ಲಾದೇಶದ ವಿರುದ್ಧ ಆಡಿದ್ದರು.
🚨 NEWS 🚨- Team India’s squad for the 1st Test of the IDFC FIRST Bank Test series against Bangladesh announced.
Rohit Sharma (C), Yashasvi Jaiswal, Shubman Gill, Virat Kohli, KL Rahul, Sarfaraz Khan, Rishabh Pant (WK), Dhruv Jurel (WK), R Ashwin, R Jadeja, Axar Patel, Kuldeep… pic.twitter.com/pQn7Ll7k3X
— BCCI (@BCCI) September 8, 2024
ವಾಸ್ತವವಾಗಿ ಟಿ20 ವಿಶ್ವಕಪ್ ಮುಗಿದ ಬಳಿಕ ಟೀಂ ಇಂಡಿಯಾದಿಂದ ಹೊರಗುಳಿದಿರುವ ವೇಗಿ ಜಸ್ಪ್ರೀತ್ ಬುಮ್ರಾ ಈ ಸರಣಿಯಿಂದಲೂ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಅಲ್ಲದೆ ನ್ಯೂಜಿಲೆಂಡ್ ವಿರುದ್ಧದ 3 ಟೆಸ್ಟ್ ಮತ್ತು ಆ ನಂತರದ ಆಸ್ಟ್ರೇಲಿಯಾ ಪ್ರವಾಸ ದೃಷ್ಟಿಯಿಂದ ಬುಮ್ರಾಗೆ ವಿಶ್ರಾಂತಿ ನೀಡಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಈ ಟೆಸ್ಟ್ ಸರಣಿಯ ಮಹತ್ವವನ್ನು ಪರಿಗಣಿಸಿರುವ ಬಿಸಿಸಿಐ, ಬುಮ್ರಾರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಆದಾಗ್ಯೂ, ಬುಮ್ರಾ ಅವರ ಕೆಲಸದ ಹೊರೆಯನ್ನು ನಿರ್ವಹಿಸಲಾಗುವುದು ಎಂದು ಆಯ್ಕೆ ಸಮಿತಿ ಮತ್ತು ತಂಡದ ಆಡಳಿತವು ಈಗಾಗಲೇ ಸ್ಪಷ್ಟಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಎರಡನೇ ಟೆಸ್ಟ್‌ನಿಂದ ಬುಮ್ರಾಗೆ ವಿಶ್ರಾಂತಿ ನೀಡಲಾಗುವುದು ಎಂದು ತಿಳಿದುಬಂದಿದೆ. ಆದರೆ, ಟಿ20 ವಿಶ್ವಕಪ್ ಗೆಲುವಿನ ಬಳಿಕ ಬುಮ್ರಾ ಎರಡೂವರೆ ತಿಂಗಳ ನಂತರ ಮೊದಲ ಬಾರಿಗೆ ಕ್ರಿಕೆಟ್‌ಗೆ ಕಾಲಿಡಲಿದ್ದಾರೆ.
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಆರ್. ಅಶ್ವಿನ್, ಜಸ್ಪ್ರೀತ್ ಬುಮ್ರಾ , ಆಕಾಶ್ ದೀಪ್ ಮತ್ತು ಯಶ್ ದಯಾಳ್.
Published On - 9:54 pm, Sun, 8 September 24