IND vs BAN: ಕಾನ್ಪುರ್ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
India vs Bangladesh: ಚೆನ್ನೈನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿತ್ತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇದೀಗ ಉಭಯ ತಂಡಗಳು ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಸಜ್ಜಾಗುತ್ತಿದ್ದು, ಈ ಪಂದ್ಯವು ಸೆಪ್ಟೆಂಬರ್ 27 ರಿಂದ ಶುರುವಾಗಲಿದೆ.
ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡವು ಕಾನ್ಪುರ್ಗೆ ಬಂದಿಳಿದಿದೆ. ಸೆಪ್ಟೆಂಬರ್ 27 ರಿಂದ ಶುರುವಾಗಲಿರುವ ಈ ಪಂದ್ಯವು ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ. ಚೆನ್ನೈನಿಂದ ವಿಮಾನದ ಮೂಲಕ ಆಗಮಿಸಿದ ಟೀಮ್ ಇಂಡಿಯಾದ ವಿಡಿಯೋವನ್ನು ಬಿಸಿಸಿಐ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಹಾಸ್ಯಮಯ ಸನ್ನಿವೇಶಗಳನ್ನು ಒಳಗೊಂಡಿರುವ ಈ ವಿಡಿಯೋದಲ್ಲಿ ಭಾರತೀಯ ಆಟಗಾರರು ಪರಸ್ಪರ ಕಾಲೆಳೆಯುವುದನ್ನು ಕಾಣಬಹುದು.
ಇನ್ನು ಚೆನ್ನೈನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 280 ರನ್ಗಳ ಅಮೋಘ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, 2ನೇ ಪಂದ್ಯದಲ್ಲಿ ಗೆದ್ದರೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳಬಹುದು. ಅತ್ತ ಸರಣಿಯನ್ನು ಡ್ರಾ ನಲ್ಲಿ ಕೊನೆಗೊಳಿಸಬೇಕಿದ್ದರೆ ಬಾಂಗ್ಲಾದೇಶ್ ತಂಡವು ಕಾನ್ಪುರ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕು. ಹೀಗಾಗಿ ಒಂದಾರ್ಥದಲ್ಲಿ ಈ ಪಂದ್ಯವು ಬಾಂಗ್ಲಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಪಂದ್ಯದ ಬಳಿಕ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯನ್ನು ಸಹ ಆಡಲಿದೆ. ಈ ಸರಣಿಯು ಅಕ್ಟೋಬರ್ 7 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯವು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆಯಲಿದೆ. ಇನ್ನು ಅಕ್ಟೋಬರ್ 10 ರಂದು ಜರುಗಲಿರುವ 2ನೇ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಹಾಗೆಯೇ ಈ ಸರಣಿಯ ಮೂರನೇ ಪಂದ್ಯವು ಅಕ್ಟೋಬರ್ 13 ರಂದು ಹೈದರಾಬಾದ್ನಲ್ಲಿ ನಡೆಯಲಿದೆ.
ಈ ಪಂದ್ಯಗಳ ಮುಕ್ತಾಯದೊಂದಿಗೆ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಸರಣಿ ಮುಗಿಯಲಿದೆ. ಇದಾದ ಬಳಿಕ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ಈ ಸರಣಿಯು ಅಕ್ಟೋಬರ್ 16 ರಿಂದ ಶುರುವಾಗಲಿದೆ.