
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುತ್ತಾ? ಈ ಪ್ರಶ್ನೆಗೆ ನಾಲ್ಕನೇ ದಿನದಾಟದಂದು ಸ್ಪಷ್ಟ ಉತ್ತರ ಸಿಗಲಿದೆ. ಏಕೆಂದರೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವು ನಾಲ್ಕನೇ ದಿನದಾಟಕ್ಕೆ ಕಾಲಿಟ್ಟಿದೆ. ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್ ಆಡಲಿದ್ದು, ಈ ಇನಿಂಗ್ಸ್ ಉಭಯ ತಂಡಗಳ ಪಾಲಿಗೆ ನಿರ್ಣಾಯಕ.
ಏಕೆಂದರೆ ನಾಲ್ಕನೇ ದಿನದಾಟದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ನೊಂದಿಗೆ ಬೃಹತ್ ಮೊತ್ತ ಪೇರಿಸಿದರೆ ಮಾತ್ರ ಈ ಪಂದ್ಯದಲ್ಲಿ ಇಂಗ್ಲೆಂಡ್ಗೆ ಗೆಲ್ಲುವ ಚಾನ್ಸ್ ಸಿಗಲಿದೆ. ಅಂದರೆ ಇಂದು ಸಂಪೂರ್ಣ ಬ್ಯಾಟ್ ಮಾಡಿ ಕನಿಷ್ಠ 380+ ಸ್ಕೋರ್ಗಳಿಸಿದರೆ ಇಂಗ್ಲೆಂಡ್ ಐದನೇ ದಿನದಾಟದಲ್ಲಿ ಭಾರತ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಬಹುದು.
ಅತ್ತ ಭಾರತ ತಂಡವು ಇಂಗ್ಲೆಂಡ್ ತಂಡವನ್ನು 350 ರನ್ಗಳ ಒಳಗೆ ಇಂದು ಆಲೌಟ್ ಮಾಡಿದರೆ, ಕೊನೆಯ ದಿನದಾಟದ ಮೂಲಕ ಪಂದ್ಯ ಗೆಲ್ಲುವ ಅವಕಾಶ ಟೀಮ್ ಇಂಡಿಯಾ ಮುಂದಿರಲಿದೆ. ಏಕೆಂದರೆ ಲಾರ್ಡ್ಸ್ ಮೈದಾನದಲ್ಲಿ ಈ ಹಿಂದೆ 344 ರನ್ಗಳನ್ನು ಚೇಸ್ ಮಾಡಿ ಗೆದ್ದ ಇತಿಹಾಸವಿದೆ. ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು 350 ರನ್ಗಳ ಒಳಗೆ ಕಟ್ಟಿಹಾಕಿದರೆ, ಭಾರತ ತಂಡವು ಗೆಲುವನ್ನು ನಿರೀಕ್ಷಿಸಬಹುದು.
ಒಂದು ವೇಳೆ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಲ್ಲಿ 350 ರನ್ಗಳಿಸಿ ಆಲೌಟ್ ಆದರೆ, ಟೀಮ್ ಇಂಡಿಯಾಗೆ ಕೊನೆಯ ಇನಿಂಗ್ಸ್ನಲ್ಲಿ 90 ಓವರ್ಗಳಲ್ಲಿ 351 ರನ್ಗಳ ಗುರಿ ಒದಗಲಿದೆ. ಇಂತಹದೊಂದು ಸವಾಲನ್ನು ಬೆನ್ನತ್ತುವುದು ಕಷ್ಟವೇನಲ್ಲ. ಏಕೆಂದರೆ ಅಂತಿಮ ದಿನದಾಟದಲ್ಲಿ ಟೀಮ್ ಇಂಡಿಯಾ ಪ್ರತಿ ಓವರ್ನಲ್ಲಿ 3.88ರ ಸರಾಸರಿಯಲ್ಲಿ ರನ್ಗಳಿಸಿದರೆ ಸುಲಭವಾಗಿ ಗೆಲುವನ್ನು ದಕ್ಕಿಸಿಕೊಳ್ಳಬಹುದು.
ಟೀಮ್ ಇಂಡಿಯಾ ಬ್ಯಾಟರ್ಗಳಿಂದ ಇದು ಸಾಧ್ಯನಾ ಎಂಬ ಪ್ರಶ್ನೆ ಮುಂದಿಟ್ಟರೆ, ಎಡ್ಜ್ಬಾಸ್ಟನ್ ಟೆಸ್ಟ್ನಲ್ಲಿನ ದ್ವಿತೀಯ ಇನಿಂಗ್ಸ್ ಸ್ಪಷ್ಟ ಉತ್ತರ. ಅಂದರೆ ಬರ್ಮಿಂಗ್ಹ್ಯಾಮ್ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಭಾರತೀಯ ಬ್ಯಾಟರ್ಗಳು 427 ರನ್ ಕಲೆಹಾಕಿದ್ದರು. ಅದು ಕೂಡ ಕೇವಲ 83 ಓವರ್ಗಳಲ್ಲಿ ಎಂಬುದು ವಿಶೇಷ.
ಅಂದರೆ ಎಡ್ಜ್ಬಾಸ್ಟನ್ನಲ್ಲಿ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ ಪ್ರತಿ ಓವರ್ಗೆ 5.14 ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದರು. ಈ ವೇಳೆ ಶುಭ್ಮನ್ ಗಿಲ್ 162 ಎಸೆತಗಳಲ್ಲಿ 161 ರನ್ ಬಾರಿಸಿದರೆ, ರಿಷಭ್ ಪಂತ್ 58 ಎಸೆತಗಳಲ್ಲಿ 65 ರನ್ ಚಚ್ಚಿದ್ದರು. ಹಾಗೆಯೇ ಕೆಎಲ್ ರಾಹುಲ್ 84 ಎಸೆತಗಳಲ್ಲಿ 55 ರನ್ ಬಾರಿಸಿದ್ದರು.
ಇದೇ ರಣತಂತ್ರದೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿದರೆ, ಲಾರ್ಡ್ಸ್ ಮೈದಾನದಲ್ಲಿ 350 ರನ್ಗಳನ್ನು ಸುಲಭವಾಗಿ ಚೇಸ್ ಮಾಡಬಹುದು. ಹೀಗಾಗಿ ಭಾರತ ತಂಡವು ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲಬೇಕಿದ್ದರೆ ಮೊದಲು ಇಂಗ್ಲೆಂಡ್ ತಂಡವನ್ನು 350 ರನ್ಗಳ ಒಳಗೆ ಆಲೌಟ್ ಮಾಡುವುದು ಅನಿವಾರ್ಯ. ಈ ಮೂಲಕ ಕೊನೆಯ ದಿನದಾಟದಲ್ಲಿ ಗುರಿ ಬೆನ್ನತ್ತಬಹುದು.
ಲಾರ್ಡ್ಸ್ ಮೈದಾನದಲ್ಲಿ ನಾಲ್ಕನೇ ಇನಿಂಗ್ಸ್ನಲ್ಲಿ ಅತೀ ಹೆಚ್ಚು ರನ್ ಚೇಸ್ ಮಾಡಿದ ದಾಖಲೆ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲಿದೆ. 1984 ರಲ್ಲಿ ಇಂಗ್ಲೆಂಡ್ ನೀಡಿದ 344 ರನ್ಗಳ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ 1 ವಿಕೆಟ್ನ ರೋಚಕ ಜಯ ಸಾಧಿಸಿತ್ತು. ಇನ್ನು 2004 ರಲ್ಲಿ ಇದೇ ಮೈದಾನದಲ್ಲಿ ನ್ಯೂಝಿಲೆಂಡ್ ನೀಡಿದ 282 ರನ್ಗಳ ಗುರಿಯನ್ನು ಚೇಸ್ ಮಾಡುವಲ್ಲಿ ಇಂಗ್ಲೆಂಡ್ ತಂಡ ಯಶಸ್ವಿಯಾಗಿತ್ತು.
ಇನ್ನು ಇತ್ತೀಚೆಗೆ ಮುಗಿದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲೂ ಸೌತ್ ಆಫ್ರಿಕಾ ತಂಡ ಚೇಸಿಂಗ್ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಆಸ್ಟ್ರೇಲಿಯಾ ನೀಡಿದ 282 ರನ್ಗಳ ಗುರಿಯನ್ನು ಬೆನ್ನತ್ತಿ ಸೌತ್ ಆಫ್ರಿಕಾ ತಂಡ 5 ವಿಕೆಟ್ಗಳ ಗೆಲುವು ದಾಖಲಿಸಿದ್ದರು.
ಇದನ್ನೂ ಓದಿ: ಒಂದು ಸೆಂಚುರಿಯೊಂದಿಗೆ 6 ಭರ್ಜರಿ ದಾಖಲೆ ಬರೆದ ಕೆಎಲ್ ರಾಹುಲ್
ಹೀಗಾಗಿ ಲಾರ್ಡ್ಸ್ ಮೈದಾನದಲ್ಲಿ 300 ರಿಂದ 350 ರನ್ಗಳ ಚೇಸಿಂಗ್ ಎಂಬುದು ಕಷ್ಟಕರವೇನಲ್ಲ. ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡವನ್ನು 350 ರನ್ಗಳ ಒಳಗೆ ಆಲೌಟ್ ಮಾಡಿದರೆ ಭಾರತ ತಂಡವು ಕೊನೆಯ ದಿನದಾಟದ ಮೂಲಕ ಬೃಹತ್ ಮೊತ್ತ ಚೇಸ್ ಮಾಡಿ ಹೊಸ ಇತಿಹಾಸ ನಿರ್ಮಿಸಬಹುದು.