IND vs ENG 4th Test: ಪದಾರ್ಪಣೆ ಪಂದ್ಯದಲ್ಲಿ ಆಕಾಶ್ ದೀಪ್ ಬೆಂಕಿ ಬೌಲಿಂಗ್: ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 112-5
Akash Deep, India vs England 4th Test: ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಪದಾರ್ಪಣೆ ಪಂದ್ಯದಲ್ಲಿ ಆಕಾಶ್ ದೀಪ್ ಮಿಂಚಿದ್ದಾರೆ. ಇಂಗ್ಲೆಂಡ್ ಭೋಜನ ವಿರಾಮದ ವೇಳೆಗೆ 112 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಮೊದಲ ದಿನದ ಮೊದಲ ಸೆಷನ್ ಭಾರತದ ಪಾಲಾಗಿದೆ.

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರಂಭದ ನಾಲ್ಕು ವಿಕೆಟ್ಗಳು ಪತನಗೊಂಡಿವೆ. ಆಕಾಶ್ ದೀಪ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಆಂಗ್ಲ ಬ್ಯಾಟರ್ಗಳ ಹುಟ್ಟಡಗಿಸಿ 3 ವಿಕೆಟ್ ಕಿತ್ತಿದ್ದಾರೆ. ಸದ್ಯ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 24.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 112 ರನ್ ಕಲೆಹಾಕಿದೆ. ಜೋ ರೂಟ್ ಕ್ರೀಸ್ನಲ್ಲಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಆರಂಭ ಉತ್ತಮವಾಗಿರಲಿಲ್ಲ. ಆಕಾಶ್ ದೀಪ್ ಒಂದರ ಹಿಂದೆ ಒಂದರಂತೆ ಆಘಾತ ನೀಡಿದರು. ಭರ್ಜರಿ ಫಾರ್ಮ್ನಲ್ಲಿದ್ದ ಬೆನ್ ಡಕೆಟ್ 11 ರನ್ ಗಳಿಸಿದ್ದಾಗ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾದರೆ, ಬಂದ ಬೆನ್ನಲ್ಲೇ ಒಲೀ ಪೋಪ್ ಅವರು ಆಕಾಶ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಸಿಲುಕಿದರು. ಅತ್ತ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಝಾಕ್ ಕ್ರಾಲಿ ಅವರನ್ನು ದೀಪ್ ಕ್ಲೀನ್ ಬೌಲ್ಡ್ ಮಾಡಿದರು. ಕ್ರಾಲಿ 42 ಎಸೆತಗಳಲ್ಲಿ 42 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ರಿಷಭ್ ಪಂತ್ ಫ್ಯಾನ್ಸ್ಗೆ ಬಂಪರ್ ಸುದ್ದಿ: ಡೆಲ್ಲಿ ಕಡೆಯಿಂದ ಬಂತು ಖಚಿತ ಮಾಹಿತಿ
ಆಕಾಶ್ ದೀಪ್ ವಿಕೆಟ್ ಪಡೆದುಕೊಂಡ ವಿಡಿಯೋ:
AKASH DEEP ON FIRE. 🔥🤯
– One of the finest debut ever in Tests by an Indian fast bowler…!!!!pic.twitter.com/WeKIUWxlyL
— Johns. (@CricCrazyJohns) February 23, 2024
ಬಳಿಕ ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ಆದರೆ, ಈ ಸಂದರ್ಭ ರವಿಚಂದ್ರನ್ ಅಶ್ವಿನ್ ಸ್ಪಿನ್ ಮೋಡಿಗೆ 38 ರನ್ ಗಳಿಸಿದ್ದ ಬೈರ್‌ಸ್ಟೋವ್ ಬಲಿಯಾದರು. ನಾಯಕ ಬೆನ್ ಸ್ಟೋಕ್ಸ್ ಕೂಡ 3 ರನ್ಗೆ ನಿರ್ಗಮಿಸಿದರು. ಸದ್ಯ ಇಂಗ್ಲೆಂಡ್ ಭೋಜನ ವಿರಾಮದ ವೇಳೆಗೆ 112 ರನ್ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಮೊದಲ ದಿನದ ಮೊದಲ ಸೆಷನ್ ಭಾರತದ ಪಾಲಾಗಿದೆ. ಆಕಾಶ್ ದೀಪ್ 3 ಹಾಗೂ, ಜಡೇಜಾ- ಆರ್. ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ಗೆ ಇಂದು ಚಾಲನೆ: ಮೊದಲ ಪಂದ್ಯದಲ್ಲಿ ಮುಂಬೈ-ಡೆಲ್ಲಿ ಸೆಣೆಸಾಟ
ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದೆ. ಸದ್ಯ ಐದು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಮುನ್ನಡೆ ಸಾಧಿಸಿದೆ. ಹೀಗಾಗಿ ಈ ಟೆಸ್ಟ್ ಪಂದ್ಯವನ್ನು ಗೆದ್ದರೆ, ಭಾರತವು ಸರಣಿಯನ್ನು ವಶಪಡಿಸಿಕೊಳ್ಳಲಿದೆ. ಅತ್ತ ಇಂಗ್ಲೆಂಡ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಜಸ್ಪ್ರಿತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇವರ ಬದಲು ಯುವ ವೇಗಿ ಆಕಾಶ್ ದೀಪ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಇತ್ತ ಇಂಗ್ಲೆಂಡ್ ನಾಲ್ಕನೇ ಟೆಸ್ಟ್‌ಗೆ ಆಡುವ ಹನ್ನೊಂದರ ಬಳಗವನ್ನು ಗುರುವಾರವೇ ಘೋಷಿಸಿದೆ. ಆಂಗ್ಲರ ಪ್ಲೇಯಿಂಗ್ ಇಲೆವೆನ್ನಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಮಾರ್ಕ್ ವುಡ್ ಮತ್ತು ರೆಹಾನ್ ಅಹ್ಮದ್ ಇಬ್ಬರಿಗೂ ಕೊಕ್ ನೀಡಲಾಗಿದೆ. ಒಲಿ ರಾಬಿನ್ಸನ್ ಮತ್ತು ಶೋಯೆಬ್ ಬಶೀರ್ ಅವರಿಗೆ ಸ್ಥಾನ ನೀಡಲಾಗಿದೆ. ಈ ಎರಡು ಬದಲಾವಣೆಯ ಹೊರತಾಗಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಲೈನಪ್ನಲ್ಲಿ ಯಾವುದೇ ಚೇಂಜ್ ಮಾಡಲಾಗಿಲ್ಲ.
ಭಾರತ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.
ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಒಲೀ ರಾಬಿನ್ಸನ್, ಜೇಮ್ಸ್ ಅ್ಯಂಡರ್ಸನ್, ಶೋಯೆಬ್ ಬಶೀರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
