IND vs ENG: ಟೀಂ ಇಂಡಿಯಾಕ್ಕೆ ವರವಾಯ್ತು ಜಡೇಜಾ ಮಾಡಿದ ನೋ ಬಾಲ್..! ಹೇಗೆ ಗೊತ್ತಾ?
India vs England: ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಆಟಗಾರರಲ್ಲಿ ಶಿಸ್ತಿನ ಕೊರತೆ, ಕ್ಯಾಚ್ ಡ್ರಾಪ್, ನೋ-ಬಾಲ್‌ಗಳು ಮುಂತಾದ ತಪ್ಪುಗಳು ಭಾರತದ ಹಿನ್ನಡೆಗೆ ಕಾರಣ ಎನ್ನಬಹುದು. ಆದರೆ, ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಜಡೇಜಾ ಮಾಡಿದ ನೋ-ಬಾಲ್‌ನಿಂದಾಗಿ ಒಂದು ವಿಕೆಟ್ ಲಭಿಸಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ (Team India) ಉತ್ತಮ ಪ್ರದರ್ಶನ ನೀಡಿದ್ದರೂ, ಸರಣಿಯಲ್ಲಿ ಆತಿಥೇಯ ತಂಡದ ಎದುರು ಹಿನ್ನಡೆ ಅನುಭವಿಸಿದೆ. ಇದಕ್ಕೆ ಪ್ರಮುಖ ಕಾರಣ ತಂಡದಲ್ಲಿ ಶಿಸ್ತಿನ ಕೊರತೆ, ಅದು ಫೀಲ್ಡಿಂಗ್ ಆಗಿರಲಿ ಅಥವಾ ಬೌಲಿಂಗ್ ಆಗಿರಲಿ ಮತ್ತು ಕೆಲವು ಸಂದರ್ಭಗಳಲ್ಲಿ ಬ್ಯಾಟಿಂಗ್ ಆಗಿರಲಿ. ಕ್ಯಾಚ್‌ಗಳನ್ನು ಬಿಡುವುದು, ನೋ-ಬಾಲ್‌ಗಳನ್ನು ಎಸೆಯುವುದು ಮತ್ತು ರನೌಟ್‌ಗಳಂತಹ ತಪ್ಪುಗಳು ಟೀಂ ಇಂಡಿಯಾಕ್ಕೆ ಭಾರಿ ನಷ್ಟವನ್ನುಂಟುಮಾಡಿವೆ. ಆದರೆ ಮ್ಯಾಂಚೆಸ್ಟರ್‌ನಲ್ಲಿ (Manchester) ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು, ಅಂತಹ ಒಂದು ತಪ್ಪು ಟೀಂ ಇಂಡಿಯಾಕ್ಕೆ ಪ್ರಯೋಜನಕಾರಿಯಾಯಿತು ಎಂಬುದು ಅಚ್ಚರಿಯ ಸಂಗತಿ.
ಜುಲೈ 24, ಗುರುವಾರ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 358 ರನ್‌ಗಳಿಗೆ ಆಲೌಟ್ ಆಯಿತು. ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಆರಂಭಿಕರು ಟೀಂ ಇಂಡಿಯಾವನ್ನು ವಿಕೆಟ್‌ಗಳಿಗಾಗಿ ಹಾತೊರೆಯುವಂತೆ ಮಾಡಿದರು. ಜ್ಯಾಕ್ ಕ್ರೌಲಿ ಮತ್ತು ಬೆನ್ ಡಕೆಟ್ ಜೋಡಿ ಮೊದಲ 30 ಓವರ್‌ಗಳಲ್ಲಿ 150 ಕ್ಕೂ ಹೆಚ್ಚು ರನ್ ಕಲೆಹಾಕಿತು. ಅಲ್ಲದೆ ಈ ಇಬ್ಬರೂ ತಲಾ ಅರ್ಧಶತಕವನ್ನು ಬಾರಿಸಿದರು.
ನೋ ಬಾಲ್ ಮಾಡಿ ವಿಕೆಟ್ ಪಡೆದ ಜಡೇಜಾ
ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದುಲ್ ಠಾಕೂರ್ ಜೊತೆಗೆ, ಹೊಸ ಬೌಲರ್ ಅನ್ಶುಲ್ ಕಾಂಬೋಜ್ ಕೂಡ ವಿಕೆಟ್ಗಾಗಿ ಹುಡುಕಾಟ ಮಾಡಬೇಕಾಯಿತು. ಇತ್ತ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ ಆರಂಭದಲ್ಲಿ ಪರಿಣಾಮಕಾರಿಯಾಗಲಿಲ್ಲ. ಆದರೆ ಇನ್ನಿಂಗ್ಸ್ನ 32 ನೇ ಓವರ್ ಬೌಲ್ ಮಾಡಿದ ಜಡೇಜಾ ಜೊತೆಯಾಟ ಮುರಿಯುವಲ್ಲಿ ಯಶಸ್ವಿಯಾದರು. ವಾಸ್ತವವಾಗಿ ಈ ಓವರ್ನ ಕೊನೆಯ ಎಸೆತವನ್ನು ಜ್ಯಾಕ್ ಕ್ರೌಲಿ ಬೌಂಡರಿಗಟ್ಟಿದರು. ಆದರೆ ಆ ಚೆಂಡು ನೋ-ಬಾಲ್ ಆಗಿತ್ತು. ಹೀಗಾಗಿ ಮತ್ತೆ ಬೌಲಿಂಗ್ ಮುಂದುವರೆಸಿದ ಜಡೇಜಾ, ಕ್ರೌಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಕೊನೆಯ ಎಸೆತ ನೋ ಬಾಲ್ ಆಗಿದ್ದರಿಂದ ಮತ್ತೊಂದು ಎಸೆತವನ್ನು ಜಡೇಜಾ ಬೌಲ್ ಮಾಡಬೇಕಾಯಿತು. ಅಚ್ಚರಿ ಎಂಬಂತೆ ಈ ಎಸೆತದಲ್ಲಿ ಭಾರತಕ್ಕೆ ಕ್ರೌಲಿ ಅವರ ವಿಕೆಟ್ ಸಿಕ್ಕಿತು.
Sir Ravindra Jadeja to the rescue 💫#SonySportsNetwork #GroundTumharaJeetHamari #ENGvIND #NayaIndia #DhaakadIndia #TeamIndia #ExtraaaInnings pic.twitter.com/f87TAYkt0Q
— Sony Sports Network (@SonySportsNetwk) July 24, 2025
ಪುಟಿದೇಳುತ್ತಾ ಟೀಂ ಇಂಡಿಯಾ?
ಈ ಜೊತೆಯಾಟವನ್ನು ಮೂರಿದ ಬೆನ್ನಲ್ಲೇ ಟೀಂ ಇಂಡಿಯಾಕ್ಕೆ ಎರಡನೇ ವಿಕೆಟ್ ಕೂಡ ಸಿಕ್ಕಿತು. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಅನ್ಶುಲ್ ಕಾಂಬೋಜ್, ಶತಕದ ಸನಿಹದಲ್ಲಿದ್ದ ಬೆನ್ ಡಕೆಟ್ ಅವರ ವಿಕೆಟ್ ಉರುಳಿಸಿದರು. ದಿನದಾಟದಂತ್ಯದ ವೇಳೆಗೆ ಬಿದ್ದ ಈ ಎರಡು ವಿಕೆಟ್‌ಗಳು ಟೀಂ ಇಂಡಿಯಾ ಪಂದ್ಯಕ್ಕೆ ಮರಳುವ ಭರವಸೆಯನ್ನು ನೀಡಿವೆ. ಆದಾಗ್ಯೂ, ಇಂಗ್ಲೆಂಡ್ 2 ವಿಕೆಟ್‌ಗಳನ್ನು ಕಳೆದುಕೊಂಡು 225 ರನ್ ಗಳಿಸಿದ್ದು, ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Fri, 25 July 25
