IND vs ENG: ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ನಲ್ಲಿ 10 ಬ್ಯಾಟರ್ಗಳು..!
India vs England Test: ಅ್ಯಂಡರ್ಸನ್-ತೆಂಡೂಲ್ಕರ್ ಸರಣಿಯ ಮೊದಲ ಮ್ಯಾಚ್ನಲ್ಲಿ ಇಂಗ್ಲೆಂಡ್ ತಂಡ 5 ವಿಕೆಟ್ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ 336 ರನ್ಗಳಿಂದ ಟೀಮ್ ಇಂಡಿಯಾ ಗೆಲುವು ದಾಖಲಿಸಿತ್ತು. ಮೂರನೇ ಮ್ಯಾಚ್ನಲ್ಲಿ 22 ರನ್ಗಳ ಜಯ ಸಾಧಿಸುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿತ್ತು. ಹಾಗೆಯೇ ನಾಲ್ಕನೇ ಪಂದ್ಯವನ್ನು ಟೀಮ್ ಇಂಡಿಯಾ ಡ್ರಾನಲ್ಲಿ ಕೊನೆಗೊಳಿಸಿದೆ. ಇದೀಗ ಐದನೇ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿ ನಿರ್ಣಾಯಕ ಟೆಸ್ಟ್ ಪಂದ್ಯವು ಇಂದಿನಿಂದ (ಜುಲೈ 31) ಶುರುವಾಗಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತನ್ನ ಪ್ಲೇಯಿಂಗ್ ಇಲೆವೆನ್ ಅನ್ನು ಪ್ರಕಟಿಸಿದೆ. ವಿಶೇಷ ಎಂದರೆ ಈ ಆಡುವ ಬಳಗದಲ್ಲಿ 10 ಬ್ಯಾಟರ್ಗಳು ಕಾಣಿಸಿಕೊಂಡಿದ್ದಾರೆ. ಅಂದರೆ ಪ್ಲೇಯಿಂಗ್ ಇಲೆವೆನ್ನಲ್ಲಿ ಆರು ಪರಿಪೂರ್ಣ ಬ್ಯಾಟರ್ಗಳಿದ್ದರೆ, ನಾಲ್ವರು ಆಲ್ರೌಂಡರ್ಗಳು ಸ್ಥಾನ ಪಡೆದಿದ್ದಾರೆ. ಈ ಮೂಲಕ ಕೊನೆಯ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಬಲಿಷ್ಠ ಪಡೆಯನ್ನೇ ರೂಪಿಸಿದೆ.
ಇಂಗ್ಲೆಂಡ್ ತಂಡದಲ್ಲಿರುವ ಪರಿಪೂರ್ಣ ಬ್ಯಾಟರ್ಗಳು ಯಾರೆಲ್ಲಾ ಎಂದು ನೋಡುವುದಾದರೆ… ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್, ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್.
ಇನ್ನು ಆಲ್ರೌಂಡರ್ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವವರು ಯಾರೆಂದರೆ… ಜೇಕಬ್ ಬೆಥೆಲ್, ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್. ಹಾಗೆಯೇ ಬೌಲರ್ ಆಗಿ ಸ್ಥಾನ ಪಡೆದಿರುವುದು ಜೋಶ್ ಟಂಗ್.
4+1 ಸೂತ್ರ:
ಭಾರತದ ವಿರುದ್ಧ ಐದನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡವು ನಾಲ್ವರು ಆಲ್ರೌಂಡರ್ಗಳನ್ನು ಕಣಕ್ಕಿಳಿಸಿದ್ದಾರೆ. ಇಲ್ಲಿ ವೇಗದ ಬೌಲಿಂಗ್ ಆಲ್ರೌಂಡರ್ಗಳಾಗಿ ಗಸ್ ಅಟ್ಕಿನ್ಸನ್, ಕ್ರಿಸ್ ವೋಕ್ಸ್ ಹಾಗೂ ಜೇಮಿ ಓವರ್ಟನ್ ಇದ್ದರೆ, ಸ್ಪಿನ್ ಆಲ್ರೌಂಡರ್ ಆಗಿ ಜೇಕಬ್ ಬೆಥೆಲ್ ಸ್ಥಾನ ಪಡೆದಿದ್ದಾರೆ. ಅತ್ತ ಜೋಶ್ ಟಂಗ್ ವೇಗಿಯಾಗಿರುವ ಕಾರಣ ಇಂಗ್ಲೆಂಡ್ ನಾಲ್ವರು ವೇಗದ ಬೌಲರ್ ಹಾಗೂ ಓರ್ವ ಸ್ಪಿನ್ನರ್ನೊಂದಿಗೆ ಟೀಮ್ ಇಂಡಿಯಾವನ್ನು ಎದುರಿಸಲಿದೆ.
ಆಲ್ರೌಂಡರ್ಗಳ ಬ್ಯಾಟಿಂಗ್ ಪ್ರದರ್ಶನ:
- ಗಸ್ ಅಟ್ಕಿನ್ಸನ್: ಇಂಗ್ಲೆಂಡ್ ತಂಡದ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಗಸ್ ಅಟ್ಕಿನ್ಸನ್ ಈಗಾಗಲೇ ಟೆಸ್ಟ್ ಕ್ರಿಕೆಟ್ನಲ್ಲಿ ಒಂದು ಶತಕ ಸಿಡಿಸಿದ್ದಾರೆ. ಅಷ್ಟೇ ಅಲ್ಲದೆ 12 ಟೆಸ್ಟ್ ಪಂದ್ಯಗಳಲ್ಲಿ 79ರ ಸ್ಟ್ರೈಕ್ ರೇಟ್ನಲ್ಲಿ ಒಟ್ಟು 352 ರನ್ ಕಲೆಹಾಕಿದ್ದಾರೆ.
- ಜೇಮಿ ಓವರ್ಟನ್: ಇಂಗ್ಲೆಂಡ್ ಪರ ಜೇಮಿ ಓರ್ವಟನ್ ಈವರೆಗೆ ಆಡಿರುವುದು ಕೇವಲ ಒಂದು ಟೆಸ್ಟ್ ಪಂದ್ಯ ಮಾತ್ರ. ಆದರೆ ಅತ್ತ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಓವರ್ಟನ್ 1 ಶತಕ ಹಾಗೂ 13 ಅರ್ಧಶತಕಗಳೊಂದಿಗೆ ಒಟ್ಟು 2401 ರನ್ ಕಲೆಹಾಕಿದ್ದಾರೆ.
- ಕ್ರಿಸ್ ವೋಕ್ಸ್: ಇಂಗ್ಲೆಂಡ್ ತಂಡದ ಅನುಭವಿ ಆಲ್ರೌಂಡರ್ ಆಗಿರುವ ಕ್ರಿಸ್ ವೋಕ್ಸ್ 98 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಒಂದು ಶತಕ ಹಾಗೂ 13 ಅರ್ಧಶತಕಗಳೊಂದಿಗೆ ಒಟ್ಟು 2034 ರನ್ ಕಲೆಹಾಕಿದ್ದಾರೆ.
- ಜೇಕಬ್ ಬೆಥೆಲ್: ಇಂಗ್ಲೆಂಡ್ ತಂಡದ ಯುವ ಆಲ್ರೌಂಡರ್ ಜೇಕಬ್ ಬೆಥೆಲ್ ಈವರೆಗೆ ಆಡಿರುವುದು ಕೇವಲ 3 ಟೆಸ್ಟ್ ಪಂದ್ಯ ಮಾತ್ರ. ಬ್ಯಾಟಿಂಗ್ ಆಲ್ರೌಂಡರ್ ಆಗಿರುವ ಬೆಥೆಲ್ 6 ಇನಿಂಗ್ಸ್ಗಳಲ್ಲಿ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಒಟ್ಟು 260 ರನ್ ಕಲೆಹಾಕಿದ್ದಾರೆ.
ಯಾರು ಔಟ್ ಯಾರು ಇನ್:
- ಭುಜದ ನೋವಿನ ಕಾರಣ 5ನೇ ಟೆಸ್ಟ್ ಪಂದ್ಯದಿಂದ ನಾಯಕ ಬೆನ್ ಸ್ಟೋಕ್ಸ್ ಹೊರಗುಳಿದಿದ್ದಾರೆ. ಅವರ ಬದಲಿಗೆ ಸ್ಥಾನ ಪಡೆದಿರುವುದು ಯುವ ಆಲ್ರೌಂಡರ್ ಜೇಕಬ್ ಬೆಥೆಲ್.
- ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಕೂಡ ಐದನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಯಾಗಿ ಜೋಶ್ ಟಂಗ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿದ್ದಾರೆ.
- ಕಳೆದ ನಾಲ್ಕು ಮ್ಯಾಚ್ಗಳಲ್ಲಿ ಕಣಕ್ಕಿಳಿದಿದ್ದ ಬ್ರೈಡನ್ ಕಾರ್ಸ್ ಅಂತಿಮ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಸ್ಥಾನದಲ್ಲಿ ಜೇಮಿ ಓವರ್ಟನ್ ಸ್ಥಾನ ಆಡುವ ಬಳಗದಲ್ಲಿದ್ದಾರೆ.
ಇದನ್ನೂ ಓದಿ: ಹಿಸ್ಟರಿ… ಹಿಸ್ಟರಿ… ಹಿಸ್ಟರಿ… ಹೊಸ ಇತಿಹಾಸ ನಿರ್ಮಿಸಿದ ಪಾಕಿಸ್ತಾನ್ ಚಾಂಪಿಯನ್ಸ್
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್ (ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜೇಕಬ್ ಬೆಥೆಲ್, ಜೇಮಿ ಸ್ಮಿತ್, ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್, ಜೋಶ್ ಟಂಗ್.
Published On - 10:11 am, Thu, 31 July 25
