
ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಮ್ಯಾಚ್ ನಾಳೆಯಿಂದ (ಜುಲೈ 31) ಶುರುವಾಗಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ 4 ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಈ ಪಂದ್ಯದಿಂದ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಹೊರಗುಳಿದಿದ್ದಾರೆ. ಗಾಯದ ಕಾರಣ ಈ ಪಂದ್ಯಕ್ಕೆ ಪಂತ್ ಅಲಭ್ಯರಾಗಿದ್ದಾರೆ. ಮತ್ತೊಂದೆಡೆ ಕಳೆದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಜಸ್ಪ್ರೀತ್ ಬುಮ್ರಾಗೆ ಕೊನೆಯ ಮ್ಯಾಚ್ ವೇಳೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಅದರಂತೆ ಭಾರತ ತಂಡದ ಆಡುವ ಬಳಗದಲ್ಲಿ 2 ಬದಲಾವಣೆ ಕಂಡು ಬರುವುದು ಖಚಿತ.
ಇನ್ನು ತೊಡೆಸಂದು ಗಾಯದ ಸಮಸ್ಯೆಯ ಕಾರಣ 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಆಕಾಶ್ ದೀಪ್ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಹೀಗಾಗಿ ಅವರು ಸಹ ಐದನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಬಹುದು.
ಹಾಗೆಯೇ ಕಳೆದ 4 ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಕೊನೆಯ ಮ್ಯಾಚ್ನಲ್ಲಿ ಕಣಕ್ಕಿಳಿಸಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಕುಲ್ದೀಪ್ ಸಹ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ 4 ಬದಲಾವಣೆ ಕಂಡು ಬರುವ ಸಾಧ್ಯತೆಯಿದೆ.
ಅಂತಿಮ ಟೆಸ್ಟ್ ಪಂದ್ಯವು ಟೀಮ್ ಇಂಡಿಯಾ ಪಾಲಿನ ನಿರ್ಣಾಯಕ ಪಂದ್ಯ. ಏಕೆಂದರೆ 5 ಪಂದ್ಯಗಳ ಸರಣಿಯ ಮೊದಲ ಮ್ಯಾಚ್ನಲ್ಲಿ ಇಂಗ್ಲೆಂಡ್ ತಂಡ ಗೆದ್ದರೆ, ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಇನ್ನು ಮೂರನೇ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ. ನಾಲ್ಕನೇ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಂಡರೂ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಿಂದ ಮುನ್ನಡೆ ಹೊಂದಿದೆ.
ಇದನ್ನೂ ಓದಿ: ಜಯ ಜಯ ಜಯ ಜಯ ಜಯಯೇ… ಆಸ್ಟ್ರೇಲಿಯಾ ದಾಖಲೆಯ ಜಯಭೇರಿ
ಇತ್ತ ಸರಣಿ ಸೋಲನ್ನು ತಪ್ಪಿಸಲು ಟೀಮ್ ಇಂಡಿಯಾ ಕೊನೆಯ ಮ್ಯಾಚ್ನಲ್ಲಿ ಗೆಲ್ಲಲೇಬೇಕು. ಅದರಂತೆ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಜರುಗಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯನ್ನು 2-2 ಅಂತರದಿಂದ ಡ್ರಾ ಮಾಡಿಕೊಳ್ಳಬಹುದು. ಹೀಗಾಗಿ ಕೊನೆಯ ಟೆಸ್ಟ್ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ ಪಂದ್ಯವಾಗಿದೆ.