ಆಸ್ಟ್ರೇಲಿಯಾ ವಿರುದ್ಧ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಸೋತಿರುವ ಟೀಂ ಇಂಡಿಯಾಕ್ಕೆ ಮತ್ತೊಂದು ಆಘಾತಕ್ಕಾರಿ ಸುದ್ದಿಯೊಂದು ಎದುರಾಗಿದೆ. ಸಿಡ್ನಿ ಟೆಸ್ಟ್ನ ಎರಡನೇ ದಿನದಾಟದ ವೇಳೆ ಬೆನ್ನು ನೋವಿಗೆ ತುತ್ತಾಗಿದ್ದ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾರನ್ನು ಸ್ಕ್ಯಾನಿಂಗ್ಗಾಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆ ಬಳಿಕ ತಂಡವನ್ನು ಕೂಡಿಕೊಂಡಿದ್ದ ಬುಮ್ರಾ ಮೂರನೇ ದಿನದಾಟದಲ್ಲಿ ತಂಡದ ಪರ ಕಣಕ್ಕಿಳಿದಿರಲಿಲ್ಲ. ಇತ್ತ ಬೌಲಿಂಗ್ ಸಹ ಮಾಡಿರಲಿಲ್ಲ. ಇದರರ್ಥ ಬುಮ್ರಾ ಅವರ ಇಂಜುರಿ ಕೊಂಚ ಗಂಭೀರವಾಗಿರುವ ಸಾಧ್ಯತೆಗಳಿವೆ. ಈ ನಡುವೆ ಮತ್ತೊಂದು ಆಘಾತಕ್ಕಾರಿ ಸುದ್ದಿ ಹರಿದಾಡುತ್ತಿದ್ದು, ಇದೇ ಜನವರಿ 22 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ತವರು ಸರಣಿಯಲ್ಲಿ ಬುಮ್ರಾ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಮೇಲೆ ಹೇಳಿದಂತೆ ಬಾರ್ಡರ್ ಗವಾಸ್ಕರ್ ಟ್ರೋಫಿ ನಂತರ ಇದೀಗ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿಗಳನ್ನು ಆಡಬೇಕಿದೆ. ಈ ಎರಡು ಸರಣಿಗಳಿಗೆ ಟೀಂ ಇಂಡಿಯಾ ಇನ್ನೂ ಪ್ರಕಟವಾಗಿಲ್ಲ. ಆದರೆ ಅದಕ್ಕೂ ಮೊದಲು ಬುಮ್ರಾ ಅವರ ಫಿಟ್ನೆಸ್ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಸರಣಿ ವೇಳೆಗೆ ಬುಮ್ರಾ ಗುಣಮುಖರಾಗಿ ತಂಡದ ಪರ ಕಣಕ್ಕಿಳಿಯುತ್ತಾರಾ ಎಂಬುದು ಅಭಿಮಾನಿಗಳಲ್ಲಿ ಮೂಡಿರುವ ಪ್ರಶ್ನೆಯಾಗಿದೆ.
ಒಂದು ವೇಳೆ ಸರಣಿ ಆರಂಭಕ್ಕೂ ಮುನ್ನ ಬುಮ್ರಾ ಸಂಪೂರ್ಣವಾಗಿ ಚೇತರಿಸಿಕೊಂಡರೆ ಟೀಂ ಇಂಡಿಯಾ ಕೊಂಚ ನಿರಾಳವಾಗಲಿದೆ. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಮೊದಲು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ. ಆ ಬಳಿಕ ಏಕದಿನ ಸರಣಿ ಆರಂಭವಾಗಲಿದೆ. ಒಂದು ವೇಳೆ ಬುಮ್ರಾ ಟಿ20 ಸರಣಿ ಆಡದಿದ್ದರೂ ಆಡಳಿತ ಮಂಡಳಿಗೆ ಯಾವುದೇ ಸಮಸ್ಯೆ ಇಲ್ಲ.
ಆದರೆ ಏಕದಿನ ಸರಣಿ ವೇಳೆಗೆ ಬುಮ್ರಾ ಗುಣಮುಖರಾಗಲೇಬೇಕು. ಏಕೆಂದರೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಬಳಿಕ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಏಕದಿನ ಮಾದರಿಯಲ್ಲಿ ನಡೆಯುವುದರಿಂದ, ಈ ಟೂರ್ನಿಗೂ ಮುನ್ನ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಟೀಂ ಇಂಡಿಯಾದ ತಯಾರಿಗೆ ಸಹಕಾರಿಯಾಗಲಿದೆ. ಹೀಗಾಗಿ ಈ ಸರಣಿಯಲ್ಲಿ ಬುಮ್ರಾ ಆಡುವುದು ಅನಿವಾರ್ಯವಾಗಿದೆ. ಹೀಗಾಗಿ ಏಕದಿನ ಸರಣಿ ವೇಳೆಗೆ ಬುಮ್ರಾ ಸಂಪೂರ್ಣವಾಗಿ ಫಿಟ್ ಆಗಿ ಮೈದಾನಕ್ಕೆ ಮರಳಬೇಕೆಂಬುದು ಅಭಿಮಾನಿಗಳ ಪ್ರಾರ್ಥನೆಯಾಗಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ ನೀಡಿದರು. ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿರುವ ಬುಮ್ರಾ, ಸರಣಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಅತ್ಯಧಿಕ 32 ವಿಕೆಟ್ಗಳನ್ನು ಪಡೆದರು. ಇದಕ್ಕಾಗಿ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತ್ತು. ಈ ಸರಣಿಯಲ್ಲಿ ಬುಮ್ರಾ ಮೂರು ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದರ ಜೊತೆಗೆ 76 ರನ್‌ಗಳಿಗೆ 6 ವಿಕೆಟ್ ಕಬಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದಲ್ಲದೇ ಬುಮ್ರಾ 2 ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಯಕತ್ವವನ್ನೂ ವಹಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Mon, 6 January 25