ದಿವ್ಯಾಂಗರ ಚಾಂಪಿಯನ್ಸ್ ಟ್ರೋಫಿ: 17 ಸದಸ್ಯರ ಭಾರತ ತಂಡ ಪ್ರಕಟ
Physical Disabled Champions Trophy: ಭಾರತದ ದಿವ್ಯಾಂಗ ಕ್ರಿಕೆಟ್ ತಂಡವು ಶ್ರೀಲಂಕಾದಲ್ಲಿ ಜನವರಿ 12 ರಿಂದ ಪ್ರಾರಂಭವಾಗುವ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗಿದೆ. ಇದೀಗ ವಿಕ್ರಾಂತ್ ರವೀಂದ್ರ ಕೇಣಿ ನಾಯಕತ್ವದ 17 ಸದಸ್ಯರ ತಂಡವನ್ನು ಈ ಟೂರ್ನಿಗೆ ಆಯ್ಕೆ ಮಾಡಲಾಗಿದೆ. ವೇಳಾಪಟ್ಟಿಯ ಪ್ರಕಾರ ಈ ಟೂರ್ನಿಯಲ್ಲಿ ಭಾರತ ತಂಡ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಫೆಬ್ರವರಿ ತಿಂಗಳಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯವಹಿಸುತ್ತಿವೆ. ಹೈಬ್ರಿಡ್ ಮಾದರಿಯಲ್ಲಿ ನಡೆಯಲ್ಲಿರುವ ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದು, ಉಳಿದ ಎಲ್ಲಾ ಪಂದ್ಯಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. 8 ವರ್ಷಗಳ ನಂತರ ನಡೆಯುತ್ತಿರುವ ಈ ಪಂದ್ಯಾವಳಿ ಫೆಬ್ರವರಿ 19 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 9 ರವರೆಗೆ ನಡೆಯಲಿದೆ. ಇದಕ್ಕೂ ಮುನ್ನ ಶ್ರೀಲಂಕಾದಲ್ಲಿ ದಿವ್ಯಾಂಗರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದ್ದು, ಈ ಪಂದ್ಯಾವಳಿ ಜನವರಿ 12ರಿಂದ ಆರಂಭವಾಗಲಿದೆ. ಈ ಟೂರ್ನಿಗೆ ಇದೀಗ 17 ಸದಸ್ಯರ ಭಾರತ ದಿವ್ಯಾಂಗ ತಂಡವನ್ನು ಪ್ರಕಟಿಸಲಾಗಿದೆ.
ದಿವ್ಯಾಂಗರ ಚಾಂಪಿಯನ್ಸ್ ಟ್ರೋಫಿ
ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿಯನ್ನು 2019 ರ ನಂತರ ಮೊದಲ ಬಾರಿಗೆ ಆಡಲಾಗುತ್ತಿದೆ. ಇದಕ್ಕಾಗಿ ಮುಖ್ಯ ಕೋಚ್ ರೋಹಿತ್ ಜಲಾನಿ ನೇತೃತ್ವದಲ್ಲಿ ಜೈಪುರದಲ್ಲಿ ತರಬೇತಿ ಶಿಬಿರದ ನಂತರ ಭಾರತೀಯ ಅಂಗವಿಕಲರ ಕ್ರಿಕೆಟ್ ಕೌನ್ಸಿಲ್ (ಡಿಸಿಸಿಐ) ರಾಷ್ಟ್ರೀಯ ಆಯ್ಕೆ ಸಮಿತಿಯು ತಂಡವನ್ನು ಆಯ್ಕೆ ಮಾಡಿದೆ. 17 ಸದಸ್ಯರ ಭಾರತ ತಂಡಕ್ಕೆ ವಿಕ್ರಾಂತ್ ರವೀಂದ್ರ ಕೇಣಿ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ರವೀಂದ್ರ ಗೋಪಿನಾಥ್ ಸಂತೆ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಇದು ಸಮತೋಲಿತ ತಂಡವಾಗಿದ್ದು, ಯಾವುದೇ ಎದುರಾಳಿಯನ್ನು ಎದುರಿಸಲು ಸಿದ್ಧವಾಗಿದೆ ಎಂದು ಮುಖ್ಯ ಕೋಚ್ ರೋಹಿತ್ ಜಲಾನಿ ಹೇಳಿದ್ದಾರೆ.
🚨 Team India Official Squad Announcement for Champions Trophy 2025 🚨
The moment we’ve all been waiting for is here! Team India is ready to light up the Physical Disability Champions Trophy in Colombo, Sri Lanka! #DumHaiTeamMai #BleedBlue @ICC @BCCI @JayShah pic.twitter.com/CflGjwTujc
— Differently Abled Cricket Council of India (@dcciofficial) January 5, 2025
ಭಾರತದ ವೇಳಾಪಟ್ಟಿ
ಈ ಟೂರ್ನಿಯಲ್ಲಿ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಈ ಪಂದ್ಯ ಜನವರಿ 12 ರಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಇದಾದ ಬಳಿಕ ಭಾರತ ತಂಡ ಜನವರಿ 13ರಂದು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಹಾಗೆಯೇ ಟೀಂ ಇಂಡಿಯಾ ತನ್ನ ಮೂರನೇ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದ್ದು, ಈ ಪಂದ್ಯ ಜನವರಿ 15 ರಂದು ನಡೆಯಲಿದೆ. ಇದಾದ ಬಳಿಕ ಭಾರತ ತಂಡ ಜನವರಿ 16ರಂದು ಮತ್ತೆ ಪಾಕಿಸ್ತಾನವನ್ನು ಎದುರಿಸಲಿದೆ. ಜನವರಿ 18 ರಂದು ಇಂಗ್ಲೆಂಡ್ ಮತ್ತು ಜನವರಿ 19 ರಂದು ಶ್ರೀಲಂಕಾ ವಿರುದ್ಧವೂ ಪಂದ್ಯಗಳು ನಡೆಯಲಿವೆ. ಅಂತಿಮವಾಗಿ ಜನವರಿ 21 ರಂದು ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.
ಭಾರತ ತಂಡ: ವಿಕ್ರಾಂತ್ ರವೀಂದ್ರ ಕೆನ್ನಿ (ನಾಯಕ), ರವೀಂದ್ರ ಗೋಪಿನಾಥ್ ಸಂತೆ (ಉಪನಾಯಕ), ಯೋಗೇಂದರ್ ಸಿಂಗ್ (ವಿಕೆಟ್ ಕೀಪರ್), ಅಖಿಲ್ ರೆಡ್ಡಿ, ರಾಧಿಕಾ ಪ್ರಸಾದ್, ದೇವೇಂದ್ರ ಸಿಂಗ್ (ವಿಕೆಟ್ ಕೀಪರ್), ಆಕಾಶ್ ಅನಿಲ್ ಪಾಟೀಲ್, ಸನ್ನಿ ಗೋಯತ್, ಪವನ್ ಕುಮಾರ್, ಜಿತೇಂದ್ರ, ನರೇಂದ್ರ, ರಾಜೇಶ್ ನಿಖಿಲ್ ಮನ್ಹಾಸ್, ಅಮೀರ್ ಹಾಸನ್, ಮಜಿದ್ ಮಗರೆ, ಕುನಾಲ್ ದತ್ತಾತ್ರೇಯ ಫಣಸಾಯ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ