R Ashwin: 100ನೇ ಪಂದ್ಯದಲ್ಲಿ ಕಣಕ್ಕಿಳಿದು ವಿಶೇಷ ದಾಖಲೆ ಬರೆದ ಅಶ್ವಿನ್

| Updated By: ಝಾಹಿರ್ ಯೂಸುಫ್

Updated on: Mar 07, 2024 | 9:28 AM

India vs England 5th Test: ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯ ಇಂದಿನಿಂದ ಶುರುವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. ಅದರಂತೆ ಭಾರತ ತಂಡ ಮೊದಲು ಬೌಲಿಂಗ್ ಮಾಡಲಿದೆ. ಇನ್ನು ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್ 100 ಟೆಸ್ಟ್ ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಬರೆದಿದ್ದಾರೆ.

R Ashwin: 100ನೇ ಪಂದ್ಯದಲ್ಲಿ ಕಣಕ್ಕಿಳಿದು ವಿಶೇಷ ದಾಖಲೆ ಬರೆದ ಅಶ್ವಿನ್
Ashwin
Follow us on

ಧರ್ಮಶಾಲಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರವಿಚಂದ್ರನ್ ಅಶ್ವಿನ್ (R Ashwin) 100 ಟೆಸ್ಟ್​ ಪಂದ್ಯಗಳನ್ನಾಡಿದ ವಿಶೇಷ ದಾಖಲೆ ಬರೆದಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ 14ನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಸೇರಿದಂತೆ 13 ಆಟಗಾರರು ಈ ವಿಶೇಷ ಸಾಧನೆ ಮಾಡಿದ್ದರು.

ಭಾರತದ ಪರ 100+ ಟೆಸ್ಟ್ ಪಂದ್ಯಗಳನ್ನಾಡಿರುವ ಆಟಗಾರರು:

  1. ಸಚಿನ್ ತೆಂಡೂಲ್ಕರ್
  2. ರಾಹುಲ್ ದ್ರಾವಿಡ್
  3. ವಿವಿಎಸ್ ಲಕ್ಷ್ಮಣ್
  4. ಅನಿಲ್ ಕುಂಬ್ಳೆ
  5. ಕಪಿಲ್ ದೇವ್
  6. ಸುನಿಲ್ ಗವಾಸ್ಕರ್
  7. ದಿಲೀಪ್ ವೆಂಗ್​ಸರ್ಕಾರ್
  8. ಸೌರವ್ ಗಂಗೂಲಿ
  9. ವಿರಾಟ್ ಕೊಹ್ಲಿ
  10. ಇಶಾಂತ್ ಶರ್ಮಾ
  11. ಹರ್ಭಜನ್ ಸಿಂಗ್
  12. ವೀರೇಂದ್ರ ಸೆಹ್ವಾಗ್
  13. ಚೇತೇಶ್ವರ ಪೂಜಾರ.

ಇದೀಗ ನೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 14ನೇ ಆಟಗಾರನಾಗಿ ಈ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ರವಿಚಂದ್ರನ್ ಅಶ್ವಿನ್ ವೃತ್ತಿಜೀವನ:

2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್​ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಆಶ್ವಿನ್ ಇದುವರೆಗೆ 100 ಟೆಸ್ಟ್ ಪಂದ್ಯಗಳಲ್ಲಿ 187 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಒಟ್ಟು 507 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಹಾಗೆಯೇ 35 ಬಾರಿ 5 ವಿಕೆಟ್ ಪಡೆದಿದ್ದಾರೆ.

ಇನ್ನು ಬ್ಯಾಟಿಂಗ್​ನಲ್ಲಿ 3309 ರನ್​ ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ 500+ ವಿಕೆಟ್ ಹಾಗೂ 3 ಸಾವಿರ ರನ್ ಕಲೆಹಾಕಿದ ಏಕೈಕ ಆಟಗಾರನಾಗಿ ಗುರುತಿಸಿಕೊಂಡಿಸಿದ್ದಾರೆ.

ಅಶ್ವಿನ್ ಪಾಲಿಗೆ ವಿಶೇಷ ಪಂದ್ಯ:

ಧರ್ಮಶಾಲಾದಲ್ಲಿ ನಡೆಯುತ್ತಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ಔಪಚಾರಿಕ ಪಂದ್ಯವಾಗಿದ್ದರೂ ಅಶ್ವಿನ್​ಗೆ ವಿಶೇಷ ಮ್ಯಾಚ್. ಮೇಲೆ ಹೇಳಿದಂತೆ ಈ ಪಂದ್ಯದ ಮೂಲಕ ಅಶ್ವಿನ್ 100 ಟೆಸ್ಟ್ ಪಂದ್ಯಗಳ ವಿಶೇಷ ಮೈಲುಗಲ್ಲನ್ನು ತಲುಪಿದ್ದಾರೆ. ಹೀಗಾಗಿ ಈ ಮ್ಯಾಚ್​ನಲ್ಲಿ ಗೆಲ್ಲುವ ಮೂಲಕ ಅಶ್ವಿನ್​ಗೆ ಸ್ಮರಣೀಯ ಗೆಲುವಿನ ಉಡುಗೊರೆ ನೀಡಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಿದೆ.

ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ

ಸರಣಿ ಗೆದ್ದಿರುವ ಟೀಮ್ ಇಂಡಿಯಾ:

5ನೇ ಟೆಸ್ಟ್ ಪಂದ್ಯದ ಫಲಿತಾಂಶವು ಸರಣಿ ಗೆಲುವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂದರೆ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಟೀಮ್ ಇಂಡಿಯಾ 3-1 ಅಂತರದಿಂದ ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಜಯ ಸಾಧಿಸಿದ್ದರೆ, ಉಳಿದ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿದೆ. ಈ ಮೂಲಕ 3-1 ಅಂತರದಿಂದ ಭಾರತ ತಂಡ ಸರಣಿ ವಶಪಡಿಸಿಕೊಂಡಿದೆ.