IND vs ENG: ಸಂಯೋಜಿತ ಪ್ಲೇಯಿಂಗ್ ಇಲೆವೆನ್: ಶುಭ್​ಮನ್ ಗಿಲ್​ಗೆ ಇಲ್ಲ ಸ್ಥಾನ..!

India vs England: 5 ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಇಂಗ್ಲೆಂಡ್ 5 ವಿಕೆಟ್​ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ 336 ರನ್​ಗಳ ಅಮೋಘ ಗೆಲುವು ದಾಖಲಿಸಿತ್ತು. ಮೂರನೇ ಮ್ಯಾಚ್​ನಲ್ಲಿ ಇಂಗ್ಲೆಂಡ್ ತಂಡ 22 ರನ್​ಗಳ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ನಾಲ್ಕನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಇನ್ನು ಐದನೇ ಮ್ಯಾಚ್​ನಲ್ಲಿ 6 ರನ್​ಗಳ ಐತಿಹಾಸಿಕ ವಿಜಯ ಸಾಧಿಸಿ ಟೀಮ್ ಇಂಡಿಯಾ ಸರಣಿಯನ್ನು 2-2 ಅಂತರದಿಂದ ಡ್ರಾಗೊಳಿಸಿದ್ದರು.

IND vs ENG: ಸಂಯೋಜಿತ ಪ್ಲೇಯಿಂಗ್ ಇಲೆವೆನ್: ಶುಭ್​ಮನ್ ಗಿಲ್​ಗೆ ಇಲ್ಲ ಸ್ಥಾನ..!
Stuart Broad

Updated on: Aug 06, 2025 | 9:56 AM

ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಮುಗಿದಿದೆ. ಈ ಸರಣಿಯ ಮುಕ್ತಾಯದ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಮಾಜಿ ವೇಗಿ, ಸ್ಕೈ ಸ್ಪೋರ್ಟ್ಸ್​ನ ಕಾಮೆಂಟೇಟರ್ ಸ್ಟುವರ್ಟ್ ಬ್ರಾಡ್ ಸಂಯೋಜಿತ ಪ್ಲೇಯಿಂಗ್ ಇಲೆವೆನ್ ಹೆಸರಿಸಿದ್ದಾರೆ. ಈ ಪ್ಲೇಯಿಂಗ್ ಇಲೆವೆನ್​ನಲ್ಲಿ ಟೀಮ್ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಹಾಗೂ ಆಲ್​ರೌಂಡರ್ ರವೀಂದ್ರ ಜಡೇಜಾಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ.

ಬ್ರಾಡ್ ಅವರ ಸಂಯೋಜಿತ ಪ್ಲೇಯಿಂಗ್ ಇಲೆವೆನ್​ನಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಕಾಣಿಸಿಕೊಂಡಿದ್ದಾರೆ. ಇನ್ನು ಮೂರನೇ ಕ್ರಮಾಂಕಕ್ಕೆ ಇಂಗ್ಲೆಂಡ್​ನ ಒಲೀ ಪೋಪ್ ಅವರನ್ನು ಹೆಸರಿಸಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕಕ್ಕೆ ಜೋ ರೂಟ್ ಅವರನ್ನು ಆಯ್ಕೆ ಮಾಡಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯಲ್ಲಿ 4ನೇ ಕ್ರಮಾಂಕದಲ್ಲಿ ಅತ್ಯಧಿಕ ರನ್ ಕಲೆಹಾಕಿದ್ದು ಶುಭ್​ಮನ್ ಗಿಲ್. 10 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದ ಗಿಲ್ ಒಟ್ಟು 754 ರನ್​ ಕಲೆಹಾಕಿದ್ದಾರೆ. ಅತ್ತ ಜೋ ರೂಟ್ ಗಳಿಸಿರುವುದು 532 ರನ್​ಗಳು. ಇದಾಗ್ಯೂ ಬ್ರಾಡ್ ಶುಭ್​ಮನ್ ಗಿಲ್ ಅವರನ್ನು ಕೈ ಬಿಟ್ಟಿರುವುದು ಅಚ್ಚರಿಯೇ ಸರಿ.

ಇನ್ನು ಐದನೇ ಕ್ರಮಾಂಕಕ್ಕೆ ಹೊಡಿಬಡಿ ದಾಂಡಿಗ ಹ್ಯಾರಿ ಬ್ರೂಕ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗೆಯೇ ನಾಯಕನಾಗಿ ಆಯ್ಕೆಯಾಗಿರುವುದು ಬೆನ್ ಸ್ಟೋಕ್ಸ್. ಇಲ್ಲಿ ನಾಯಕತ್ವದೊಂದಿಗೆ ಸ್ಟೋಕ್ಸ್ ಅವರನ್ನು ಆಲ್​ರೌಂಡರ್ ರೂಪದಲ್ಲಿ ಪರಿಗಣಿಸಲಾಗಿದೆ.

ಇನ್ನುಳಿದಂತೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ರಿಷಭ್ ಪಂತ್​​ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸ್ಪಿನ್ ಆಲ್​ರೌಂಡರ್ ಸ್ಥಾನದಲ್ಲಿ ರವೀಂದ್ರ ಜಡೇಜಾ ಬದಲಿಗೆ ವಾಷಿಂಗ್ಟನ್ ಸುಂದರ್​ಗೆ ಸ್ಥಾನ ನೀಡಲಾಗಿದೆ. ವೇಗಿಗಳಾಗಿ ಜೋಫ್ರಾ ಆರ್ಚರ್, ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಬ್ರಾಡ್ ಆಯ್ಕೆ ಮಾಡಿಕೊಂಡಿದ್ದಾರೆ.

ಇತ್ತ ಈ ಪ್ಲೇಯಿಂಗ್ ಇಲೆವೆನ್​ನಲ್ಲಿ ಶುಭ್​ಮನ್ ಗಿಲ್ ಹಾಗೂ ರವೀಂದ್ರ ಜಡೇಜಾಗೆ ಯಾಕೆ ಸ್ಥಾನ ನೀಡಲಾಗಿಲ್ಲ ಎಂಬುದನ್ನು ಬ್ರಾಡ್ ವಿವರಿಸಿಲ್ಲ. ಇದಾಗ್ಯೂ ಸರಣಿಯಲ್ಲಿನ ಪ್ರದರ್ಶನದ ದೃಷ್ಟಿಕೋನದಿಂದ ನೋಡಿದರೆ ಬ್ರಾಡ್ ಆಯ್ಕೆ ಮಾಡಿದ ತಂಡವು ಗ್ರಹಿಕೆಗೆ ಮೀರಿದ್ದು ಎಂದು ಹೇಳಬಹುದು.

ಇದನ್ನೂ ಓದಿ: Mohammed Siraj: ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು ಭಯ್ಯಾ..!

ಸ್ಟುವರ್ಟ್ ಬ್ರಾಡ್ ಸಂಯೋಜಿತ ಪ್ಲೇಯಿಂಗ್ 11:

  1. ಯಶಸ್ವಿ ಜೈಸ್ವಾಲ್
  2.  ಕೆಎಲ್ ರಾಹುಲ್
  3. ಒಲೀ ಪೋಪ್
  4. ಜೋ ರೂಟ್
  5.  ಹ್ಯಾರಿ ಬ್ರೂಕ್
  6. ಬೆನ್ ಸ್ಟೋಕ್ಸ್ (ನಾಯಕ)
  7. ರಿಷಭ್ ಪಂತ್
  8.  ವಾಷಿಂಗ್ಟನ್ ಸುಂದರ್
  9.  ಜೋಫ್ರಾ ಆರ್ಚರ್
  10.  ಜಸ್ಪ್ರೀತ್ ಬುಮ್ರಾ
  11.  ಮೊಹಮ್ಮದ್ ಸಿರಾಜ್