Mohammed Siraj: ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು ಭಯ್ಯಾ..!
India vs England: ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಢಿಯಾ ಮೊದಲ ಇನಿಂಗ್ಸ್ನಲ್ಲಿ 224 ರನ್ ಕಲೆಹಾಕಿದರೆ, ಇಂಗ್ಲೆಂಡ್ 247 ರನ್ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ 396 ರನ್ಗಳಿಸಿತು. ಮೊದಲ ಇನಿಂಗ್ಸ್ನಲ್ಲಿನ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 374 ರನ್ಗಳ ಗುರಿ ಪಡೆದ ಇಂಗ್ಲೆಂಡ್ 367 ರನ್ಗಳಿಸಿ ಆಲೌಟ್ ಆಗಿದೆ. ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ 5 ವಿಕೆಟ್ ಕಬಳಿಸಿ ರೋಚಕ ಗೆಲುವಿನ ರೂವಾರಿ ಎನಿಸಿಕೊಂಡರು.

ಓವಲ್ ಮೈದಾನದಲ್ಲಿ ನಡೆದ 5ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 6 ರನ್ಗಳಿಂದ ಸೋಲಿಸಿ ಭಾರತ ತಂಡ ಅದ್ಭುತ ಗೆಲುವು ಸಾಧಿಸಿದೆ. ಈ ಗೆಲುವಿನ ರೂವಾರಿಗಳಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. ಇತ್ತ ಟೀಮ್ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಕೊನೆಯ ದಿನದಂದು ಭಾರತಕ್ಕೆ ಗೆಲ್ಲಲು 4 ವಿಕೆಟ್‌ಗಳು ಬೇಕಾಗಿದ್ದವು. ಅತ್ತ ಇಂಗ್ಲೆಂಡ್ ತಂಡಕ್ಕೆ 35 ರನ್‌ಗಳು ಬೇಕಿತ್ತು. ಆದರೆ ಐದನೇ ದಿನದಾಟದಲ್ಲಿ ಮಿಂಚಿನ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ ಮೂರು ವಿಕೆಟ್ ಉರುಳಿಸುವ ಮೂಲಕ ಭಾರತ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಈ ಗೆಲುವನ್ನು ಶ್ಲಾಘಿಸಿದ ಕೊಹ್ಲಿ, ಟೀಮ್ ಇಂಡಿಯಾದ ಅದ್ಭುತ ಗೆಲುವು. ಸಿರಾಜ್ ಮತ್ತು ಪ್ರಸಿದ್ಧ್ ಅವರ ದೃಢಸಂಕಲ್ಪ ನಮಗೆ ಈ ಅದ್ಭುತ ಗೆಲುವನ್ನು ತಂದುಕೊಟ್ಟಿದೆ. ತಂಡಕ್ಕಾಗಿ ಎಲ್ಲವನ್ನೂ ಪಣಕ್ಕಿಡುವ ಸಿರಾಜ್ ಅವರಿಗೆ ವಿಶೇಷ ಗೌರವ. ಸಿರಾಜ್ ಅವರ ಪ್ರದರ್ಶನ ನೋಡಿ ತುಂಬಾ ಸಂತೋಷಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅತ್ತ ಗುರುವಿನ ಅಭಿನಂದನೆಗೆ ಪ್ರತಿಕ್ರಿಯಿಸಿರುವ ಮೊಹಮ್ಮದ್ ಸಿರಾಜ್, ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು ಭಯ್ಯಾ ಎಂದು ತಿಳಿಸಿದ್ದಾರೆ. ಈ ಮೂಲಕ ತನ್ನ ಕೆರಿಯರ್ನ ಉದ್ದಕ್ಕೂ ಬೆಂಬಲಿಸುತ್ತಾ ಬಂದಿದ್ದ ವಿರಾಟ್ ಕೊಹ್ಲಿಗೆ ಟೀಮ್ ಇಂಡಿಯಾ ವೇಗಿ ಸಂತೋಷದ ಸಮಯದಲ್ಲೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಮೊಹಮ್ಮದ್ ಸಿರಾಜ್ ಟೆಸ್ಟ್ ಕೆರಿಯರ್ ಆರಂಭಿಸಿದ್ದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ. ಅದರಲ್ಲೂ ಕಿಂಗ್ ಕೊಹ್ಲಿ ಗರಡಿಯಲ್ಲಿ ಪಳಗಿದ್ದ ಸಿರಾಜ್ ಅತ್ಯುತ್ತಮ ಬೌಲರ್ ಆಗಿ ರೂಪುಗೊಂಡಿದ್ದರು. ಹೀಗೆ ಸಿರಾಜ್ನನ್ನು ಮುಂದಿಟ್ಟು ಕೊಹ್ಲಿ ರೂಪಿಸುತ್ತಿದ್ದ ತಂತ್ರಗಳು ಟೀಮ್ ಇಂಡಿಯಾಗೆ ಫಲ ನೀಡುತ್ತಿತ್ತು. ಈ ಯಶಸ್ವಿ ಪ್ರದರ್ಶನದಿಂದಾಗಿ ಮೊಹಮ್ಮದ್ ಸಿರಾಜ್ ಭಾರತ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದರು.
