
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಮೂವರು ಯುವ ದಾಂಡಿಗರು ಶತಕ ಬಾರಿಸಿದ್ದಾರೆ. ಈ ಶತಕದ ಹೊರತಾಗಿಯೂ ಭಾರತ ತಂಡ ಕಳಪೆ ದಾಖಲೆಯೊಂದಕ್ಕೆ ಕೊರೊಳೊಡ್ಡಿದೆ. ಇದಕ್ಕೆ ಮುಖ್ಯ ಕಾರಣ ಉಳಿದ ಬ್ಯಾಟರ್ಗಳ ಅತ್ಯಂತ ಕಳಪೆ ಪ್ರದರ್ಶನ.

ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 101 ರನ್ ಬಾರಿಸಿದ್ದರು. ಆ ಬಳಿಕ ಬಂದ ಶುಭ್ಮನ್ ಗಿಲ್ 147 ರನ್ಗಳ ಭರ್ಜರಿ ಇನಿಂಗ್ಸ್ ಆಡಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ 134 ರನ್ಗಳ ಇನಿಂಗ್ಸ್ನೊಂದಿಗೆ ಅಬ್ಬರಿಸಿದರು.

ಈ ಮೂರು ಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ ಕಲೆಹಾಕಿದ್ದು ಕೇವಲ 471 ರನ್ಗಳು ಮಾತ್ರ. ಅಂದರೆ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಹಾಗೂ ರಿಷಭ್ ಪಂತ್ ಜೊತೆಗೂಡಿ 382 ರನ್ ಪೇರಿಸಿದರೆ, ಉಳಿದ 7 ಬ್ಯಾಟರ್ಗಳು ಕಲೆಹಾಕಿರುವುದು ಕೇವಲ 89 ರನ್ಗಳು ಮಾತ್ರ.

ಇದರಿಂದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೂವರು ಶತಕ ಸಿಡಿಸಿ ಅತೀ ಕಡಿಮೆ ಮೊತ್ತ ಪೇರಿಸಿದ ಹೀನಾಯ ದಾಖಲೆಯೊಂದು ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ ಮೂವರು ಶತಕ ಸಿಡಿಸಿದ ಬಳಿಕ ಅತೀ ಕಡಿಮೆ ಮೊತ್ತ ಕಲೆಹಾಕಿದ ಹೀನಾಯ ದಾಖಲೆ ಸೌತ್ ಆಫ್ರಿಕಾ ತಂಡದ ಹೆಸರಿನಲ್ಲಿತ್ತು.

2016 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಪರ ಸ್ಟೀಫನ್ ಕುಕ್ (115), ಹಾಶಿಮ್ ಆಮ್ಲ (109) ಹಾಗೂ ಕ್ವಿಂಟನ್ ಡಿಕಾಕ್ (129) ಶತಕ ಸಿಡಿಸಿದ್ದರು. ಇದಾಗ್ಯೂ ಸೌತ್ ಆಫ್ರಿಕಾ ತಂಡವು ಪ್ರಥಮ ಇನಿಂಗ್ಸ್ನಲ್ಲಿ ಕಲೆಹಾಕಿದ್ದು 475 ರನ್ಗಳು ಮಾತ್ರ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನ ಇನಿಂಗ್ಸ್ವೊಂದರಲ್ಲಿ ಮೂರು ಶತಕ ಮೂಡಿಬಂದು, ಅತೀ ಮೊತ್ತ ಕಲೆಹಾಕಿದ ಕಳಪೆ ದಾಖಲೆಯೊಂದು ಸೌತ್ ಆಫ್ರಿಕಾ ತಂಡದ ಪಾಲಾಗಿತ್ತು.

ಇದೀಗ ಈ ದಾಖಲೆಯನ್ನು ಟೀಮ್ ಇಂಡಿಯಾ ಅಳಿಸಿ ಹಾಕಿದೆ. ಅಲ್ಲದೆ ಮೂರು ಶತಕಗಳೊಂದಿಗೆ ಕೇವಲ 471 ರನ್ಗಳಿಗೆ ಆಲೌಟ್ ಆಗುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂವರು ದಾಂಡಿಗರ ಸೆಂಚುರಿಗಳ ಹೊರತಾಗಿಯೂ ಅತೀ ಕಡಿಮೆ ಸ್ಕೋರ್ಗಳಿಸಿದ ಹೀನಾಯ ದಾಖಲೆಯನ್ನು ತಮ್ಮದಾಗಿಸಿಕೊಂಡಿದೆ.