ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ – ಬೌಲಿಂಗ್ನಲ್ಲಿ ವೈಫಲ್ಯ ಅನುಭವಿಸಿ ಸೋಲುಂಡ ಭಾರತ (India vs New Zealand) ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಇಂದು ಲಕ್ನೋದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ. ಪ್ರಥಮ ಟಿ20 ಯಲ್ಲಿ ಟೀಮ್ ಇಂಡಿಯಾ ಆರಂಭದಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿತಾದರೂ ಡೆತ್ ಓವರ್ನಲ್ಲಿ ಸುರಿದ ರನ್ ಮಳೆ ತಂಡಕ್ಕೆ ಹಿನ್ನಡೆಯಾಯಿತು. ಚೇಸಿಂಗ್ನಲ್ಲಿ ಸೂರ್ಯಕುಮಾರ್, ವಾಷಿಂಗ್ಟನ್ ಸುಂದರ್ (Washington Sunder) ಹೋರಾಟಕ್ಕೂ ಫಲ ಸಿಗಲಿಲ್ಲ. ಇದೀಗ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 0-1 ಅಂತರದ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾಕ್ಕೆ (Team India) ಇಂದಿನದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಮೊದಲ ಟಿ20ಯಲ್ಲಿ ಸೋತ ಪರಿಣಾಮ ದ್ವಿತೀಯ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಖಚಿತ ಎಂದೇ ಹೇಳಬಹುದು. 4 ಓವರ್ಗೆ ಬರೋಬ್ಬರಿ 51 ರನ್ ನೀಡಿ ಬೌಲಿಂಗ್ ಸಾಕಷ್ಟು ದುಬಾರಿ ಆಗಿದ್ದ ಅರ್ಶ್ದೀಪ್ ಸಿಂಗ್ ಪ್ಲೇಯಿಂಗ್ ಇಲೆವೆನ್ನಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಇವರ ಜಾಗಕ್ಕೆ ಹೊಸ ಮುಖ ಮುಖೇಶ್ ಕುಮಾರ್ಗೆ ಮಣೆ ಹಾಕಬಹುದು. ಅಂತೆಯೆ ರಾಹುಲ್ ತ್ರಿಪಾಠಿ ಜಾಗಕ್ಕೆ ಪೃಥ್ವಿ ಶಾ ಬಂದರೆ ಅಚ್ಚರಿ ಪಡಬೇಕಿಲ್ಲ. ಹೀಗಾದಲ್ಲಿ 18 ತಿಂಗಳ ಬಳಿಕ ಶಾ ಟಿ20 ಯಲ್ಲಿ ಕಣಕ್ಕಿಳಿಯಲಿದ್ದಾರೆ. ಕುಲ್ದೀಪ್ ಯಾದವ್ 4 ಓವರ್ಗೆ ಕೇವಲ 20 ರನ್ ನೀಡಿ 1 ವಿಕೆಟ್ ಪಡೆದ ಕಾರಣ ಯುಜ್ವೇಂದ್ರ ಚಹಲ್ ಮತ್ತೊಮ್ಮೆ ಬೆಂಚ್ ಕಾಯಬೇಕಿದೆ. ಉಳಿದಂತೆ ಭಾರತ ತಂಡದಲ್ಲಿ ಏನು ಬದಲಾವಣೆ ಆಗುತ್ತೆ ನೋಡಬೇಕಿದೆ.
ಇತ್ತ ನ್ಯೂಜಿಲೆಂಡ್ ತಂಡ ಏಕದಿನ ಸರಣಿಯ ಸೇಡು ತೀರಿಸಿಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಎಲ್ಲ ಆಟಗಾರರು ಭರ್ಜರಿ ಫಿಟ್ ಆಗಿದ್ದು ಫಾರ್ಮ್ಗೆ ಕೂಡ ಬಂದಿದ್ದಾರೆ. ಅದರಲ್ಲೂ ಡೇರಿಲ್ ಮಿಚೆಲ್, ಡೆವೊನ್ ಕಾನ್ವೇ ಹಾಗೂ ಫಿನ್ ಅಲೆನ್ ಭಾರತಕ್ಕೆ ಕಂಟಕವಾಗಿ ಪರಿಣಮಿಸಿದ್ದಾರೆ. ಉಳಿದ ಬ್ಯಾಟರ್ಗಳು ಇವರಿಗೆ ಸಾಥ್ ನೀಡಿದರೆ ಕಿವೀಸ್ ಪಡೆಗೆ ಮತ್ತೊಂದು ಜಯ ಖಚಿತ. ನ್ಯೂಜಿಲೆಂಡ್ ಬೌಲಿಂಗ್ ಕೂಡ ಸಂಘಟಿತವಾಗಿದೆ. ಬ್ರೆಸ್ವೆಲ್, ನಾಯಕ ಸ್ಯಾಂಟನರ್ ಹಾಗೂ ಫರ್ಗುಸನ್ ಕಳೆದ ಪಂದ್ಯದಲ್ಲಿ ತಂಡಕ್ಕೆ ಜಯ ತಂದುಕೊಡುವಲ್ಲಿ ಮುಖ್ಯ ಪಾತ್ರವಹಿಸಿದ್ದರು.
ICC Rankings: ಐಸಿಸಿ ರ್ಯಾಂಕಿಂಗ್ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್ಗಳು ಇವರೇ
ಭಾರತ ಹಾಗೂ ನ್ಯೂಜಿಲೆಂಡ್ ಎರಡನೇ ಟಿ20 ಪಂದ್ಯವು ಸಂಜೆ 07:00 ಗಂಟೆಗೆ ಪ್ರಾರಂಭವಾಗುತ್ತದೆ. 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಬಹುತೇಕ ಚಾನೆಲ್‌ಗಳಲ್ಲಿ ಭಾರತ-ನ್ಯೂಜಿಲೆಂಡ್ ದ್ವಿತೀಯ ಟಿ20 ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು. ಇನ್ನು ಡಿಸ್ನಿ ಹಾಟ್ಸ್ಟಾರ್ ಆ್ಯಪ್ನಲ್ಲೂ ಲೈವ್ ಸ್ಟ್ರೀಮ್ ಇರಲಿದೆ.
ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅರ್ಶ್ದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಡೇನ್ ಕ್ಲೀವರ್, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಬೆಂಜಮಿನ್ ಲಿಸ್ಟರ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ರಿಪ್ಪನ್, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:32 am, Sun, 29 January 23