Hardik Pandya: ತಂಡದ ಸೋಲಿಗೆ ಅಚ್ಚರಿಯ ಕಾರಣ ತಿಳಿಸಿದ ಹಾರ್ದಿಕ್ ಪಾಂಡ್ಯ: ಏನಂದ್ರು ನೋಡಿ
India vs New Zealand 1st T20I: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಮುಗಿದ ಬಳಿಕ ತಂಡದ ಸೋಲಿಗೆ ಕಾರಣ ತಿಳಿಸಿರುವ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಏನು ಹೇಳಿದ್ದಾರೆ ಕೇಳಿ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಕ್ಲೀನ್ಸ್ವೀಪ್ ಸಾಧನೆ ಗೈದಿದ್ದ ಭಾರತ (India vs New Zealand) ಇದೀಗ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ. ರಾಂಚಿಯ ಜೆಎಸ್ಸಿಎ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ಗಳ ಕಳಪೆ ಪ್ರದರ್ಶನ ಮತ್ತು ಸ್ಟಾರ್ ಬ್ಯಾಟರ್ಗಳ ವೈಫಲ್ಯ ತಂಡದ ಸೋಲಿಗೆ ಮುಖ್ಯ ಕಾರಣವಾಯಿತು. ವಾಷಿಂಗ್ಟನ್ ಸುಂದರ್ (Washington Sunder) ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರೂ ಯಾವುದೆ ಫಲ ಸಿಗಲಿಲ್ಲ. ಕಿವೀಸ್ ಪಡೆ 21 ರನ್ಗಳ ಗೆಲುವು ಸಾಧಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಪಂದ್ಯ ಮುಗಿದ ಬಳಿಕ ತಂಡದ ಸೋಲಿಗೆ ಕಾರಣ ತಿಳಿಸಿರುವ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಏನು ಹೇಳಿದ್ದಾರೆ ಕೇಳಿ.
”ಪಂದ್ಯದಲ್ಲಿ ಚೆಂಡು ಇಷ್ಟು ದೊಡ್ಡ ಮಟ್ಟದಲ್ಲಿ ಟರ್ನ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಎರಡೂ ತಂಡಗಳಿಗೆ ಇದು ಅಚ್ಚರಿ ಮೂಡಿಸಿದ್ದು ನಿಜ. ಹೀಗಿದ್ದರೂ ನ್ಯೂಜಿಲೆಂಡ್ ತಂಡದ ಆಟಗಾರರು ಅತ್ಯುತ್ತಮ ಪದರ್ಶನ ತೋರಿದರು. ಅವರದ್ದು ಅಧಿಕಾರಯುತ ಗೆಲುವು. ಹಳೆ ಚೆಂಡಿಗೆ ಹೋಲಿಸಿದರೆ ಹೊಸ ಚೆಂಡು ತುಂಬಾ ಟರ್ನ್ ಆಗುತ್ತಿತ್ತು. ಇದರ ಜೊತೆ ಹೆಚ್ಚು ಬೌನ್ಸ್ ಕೂಡ ಹೆಚ್ಚಿತ್ತು. ನಾವು ಸರಿಯಾಗಿ ಪಿಚ್ ಬಗ್ಗೆ ಅರಿತು ಕೊಂಡಿರಲಿಲ್ಲ. ಬೌಲಿಂಗ್ ಕೂಡ ಕೆಟ್ಟದಾಗಿತ್ತು. ಕೊನೆಯಲ್ಲಿ 20-25 ರನ್ಗಳನ್ನು ಹೆಚ್ಚು ಬಿಟ್ಟುಕೊಟ್ಟೆವು,” ಎಂದು ಹೇಳಿ ತಂಡದ ಸೋಲಿಗೆ ಕಾರಣ ತಿಳಿಸಿದ್ದಾರೆ.
ಇದೇವೇಳೆ ಕೇವಲ 28 ಎಸೆತಗಳಲ್ಲಿ 50 ರನ್ ಚಚ್ಚಿ ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದ ವಾಷಿಂಗ್ಟನ್ ಸುಂದರ್ ಅವರನ್ನು ಹಾರ್ದಿಕ್ ಹಾಡಿ ಹೊಗಳಿದ್ದಾರೆ. ”ಈ ಪಂದ್ಯದಲ್ಲಿ ಸುಂದರ್ ಅವರ ಕಡೆಯಿಂದ ಅದ್ಭುತ ಆಲ್‌ರೌಂಡರ್ ಪ್ರದರ್ಶನ ಮೂಡಿಬಂತು. ಇದು ನ್ಯೂಜಿಲೆಂಡ್ vs ಭಾರತ ನಡುವಣ ಪಂದ್ಯ ಅನ್ನುವುದಕ್ಕಿಂತ, ವಾಷಿಂಗ್ಟನ್ ಸುಂದರ್ vs ನ್ಯೂಜಿಲೆಂಡ್ ಪಂದ್ಯ ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ವಾಷಿಂಗ್ಟನ್ ಸುಂದರ್ ತಮ್ಮ ಆಲ್‌ರೌಂಡರ್ ಪ್ರದರ್ಶನದಿಂದ ಗಮನ ಸೆಳೆಯುತ್ತಿದ್ದಾರೆ. ಇದೇ ರೀತಿಯ ಪ್ರದರ್ಶನ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಬೆಳವಣಿಗೆಗೆ ತುಂಬಾ ಸಹಕಾರಿ ಆಗುತ್ತದೆ,” ಎಂದು ಹಾರ್ದಿಕ್ ಹೇಳಿದ್ದಾರೆ.
U19 Womens T20 World Cup 2023: ನ್ಯೂಜಿಲೆಂಡ್ಗೆ ಸೋಲುಣಿಸಿ ಫೈನಲ್ಗೆ ಎಂಟ್ರಿ ಕೊಟ್ಟ ಭಾರತ
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನ್ಯೂಜಿಲೆಂಡ್ ಡೆವೊನ್ ಕಾನ್ವೆ (52) ಹಾಗೂ ಡೆರಲ್ ಮಿಚೆಲ್(59) ಅವರ ಅರ್ಧಶತಕಗಳ ನೆರವಿನಿಂದ 176 ರನ್ ಪೇರಿಸಿತು. ಫಿನ್ ಅಲೆನ್ 35, ಗ್ಲೇನ್ ಫಿಲ್ಲಿಪ್ಸ್ 17 ರನ್ಗಳ ಕೊಡುಗೆ ನೀಡಿದರು. ಭಾರತ ಪರ ವಾಷಿಂಗ್ಟನ್ ಸುಂದರ್ 2 ವಿಕೆಟ್ ಕಬಳಿಸಿದರೆ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಶಿವಂ ತಲಾ ಒಂದು ವಿಕೆಟ್ ಪಡೆದರು. 177 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. ಗಿಲ್ 7 ರನ್, ಇಶಾನ್ ಕಿಶನ್ 4, ರಾಹುಲ್ ತ್ರಿಪಾಠಿ ಶೂನ್ಯಕ್ಕೆ ಔಟಾಗುವ ಮೂಲಕ ಭಾರತ ತಂಡ 15 ರನ್ಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.
ಈ ಸಂದರ್ಭ ನಾಯಕ ಹಾರ್ದಿಕ್ ಪಾಂಡ್ಯ (21) ಹಾಗೂ ಸೂರ್ಯಕುಮಾರ್ ಯಾದವ್(47) ಜೊತೆಯಾಟದ ಮೂಲಕ ಭರವಸೆ ಮೂಡಿಸಿದರೂ ಗೆಲುವಿನ ಹತ್ತಿರಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 28 ಎಸೆತಗಳಲ್ಲಿ 50 ರನ್ ಬಾರಿಸಿದರೂ ಸಹ ಇತರೆ ಬ್ಯಾಟರ್ಗಳು ಸಾಥ್ ನೀಡಲಿಲ್ಲ. ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 9 ವಿಕೆಟ್ಗೆ 155 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲು ಕಂಡಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:25 am, Sat, 28 January 23