India vs New Zealand 1st T20: ಟೀಮ್ ಇಂಡಿಯಾಗೆ ಸೋಲುಣಿಸಿದ ನ್ಯೂಜಿಲೆಂಡ್
India vs New Zealand 1st T20: ಒಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಡೆವೊನ್ ಕಾನ್ವೆ 35 ಎಸೆತಗಳಲ್ಲಿ 52 ರನ್ ಬಾರಿಸಿದರು. ಮತ್ತೊಂದೆಡೆ ಡೇರಿಲ್ ಮಿಚೆಲ್ ಬಿರುಸಿನ ಇನಿಂಗ್ಸ್ ಆಡಿದರು.
India vs New Zealand 1st T20: ರಾಂಚಿಯಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಡೆವೊನ್ ಕಾನ್ವೆ ಹಾಗೂ ಫಿನ್ ಅಲೆನ್ ಸ್ಪೋಟಕ ಆರಂಭ ಒದಗಿಸಿದ್ದರು. ಕೇವಲ 4 ಓವರ್ಗಳಲ್ಲಿ 40 ರನ್ ಚಚ್ಚಿದ ನ್ಯೂಜಿಲೆಂಡ್ ಆರಂಭಿಕರು ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದ್ದರು. ಆದರೆ ಈ ವೇಳೆ ಟೀಮ್ ಇಂಡಿಯಾ ನಾಯಕ ಮಾಡಿದ ಬೌಲಿಂಗ್ ಬದಲಾವಣೆ ಫಲ ನೀಡಿತು. 5ನೇ ಓವರ್ ಎಸೆದ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಭರ್ಜರಿ ಹೊಡೆತ ಬಾರಿಸಲು ಯತ್ನಿಸಿದ ಫಿನ್ ಅಲೆನ್ (35) ಸೂರ್ಯಕುಮಾರ್ ಯಾದವ್ಗೆ ಕ್ಯಾಚ್ ನೀಡಿದರು.
ಆ ಬಳಿಕ ಬಂದ ಮಾರ್ಕ್ ಚಾಪ್ಮನ್ರನ್ನು ಇಕ್ಕಟಿಗೆ ಸಿಲುಕಿಸುವಲ್ಲಿ ವಾಷಿಂಗ್ಟನ್ ಸುಂದರ್ ಯಶಸ್ವಿಯಾಗಿದ್ದರು. ಅದರಂತೆ ಸುಂದರ್ 5ನೇ ಓವರ್ನ ಕೊನೆಯ ಎಸೆತವನ್ನು ವಿಕೆಟ್ನತ್ತ ಒಳ ನುಗ್ಗುವಂತೆ ಎಸೆದಿದ್ದರು. ಇದನ್ನು ಚಾಪ್ಮನ್ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದ್ದರು. ಆದರೆ ಚೆಂಡು ಬೌಲರ್ನ ಬಲ ಭಾಗದತ್ತ ಚಿಮ್ಮಿತು. ಕ್ಷಣಾರ್ಧದಲ್ಲೇ ಅತ್ಯಾಧ್ಭುತ ಡೈವ್ ಮಾಡುವ ಮೂಲಕ ವಾಷಿಂಗ್ಟನ್ ಸುಂದರ್ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದರು.
ಇದಾಗ್ಯೂ ಒಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಡೆವೊನ್ ಕಾನ್ವೆ 35 ಎಸೆತಗಳಲ್ಲಿ 52 ರನ್ ಬಾರಿಸಿದರು. ಮತ್ತೊಂದೆಡೆ ಡೇರಿಲ್ ಮಿಚೆಲ್ ಬಿರುಸಿನ ಇನಿಂಗ್ಸ್ ಆಡಿದರು. ಅದರಲ್ಲೂ 20ನೇ ಓವರ್ನಲ್ಲಿ ಅರ್ಷದೀಪ್ಗೆ ಹ್ಯಾಟ್ರಿಕ್ ಸಿಕ್ಸ್ ಸಿಡಿಸುವ ಮೂಲಕ ಮಿಚೆಲ್ 27 ರನ್ ಚಚ್ಚಿದರು. ಅಲ್ಲದೆ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ನ್ಯೂಜಿಲೆಂಡ್ ತಂಡದ ಮೊತ್ತ 6 ವಿಕೆಟ್ ನಷ್ಟಕ್ಕೆ 176 ಕ್ಕೆ ಬಂದು ನಿಂತಿತು.
177 ರನ್ಗಳ ಕಠಿಣ ಗುರಿ ಪಡೆದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 15 ಆಗುವಷ್ಟರಲ್ಲಿ ಇಶಾನ್ ಕಿಶನ್ (4), ರಾಹುಲ್ ತ್ರಿಪಾಠಿ (0) ಹಾಗೂ ಶುಭ್ಮನ್ ಗಿಲ್ (7) ಪೆವಿಲಿಯನ್ಗೆ ಮರಳಿದ್ದರು. ಈ ಹಂತದಲ್ಲಿ ಜೊತೆಯಾದ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧಶತಕದ ಜೊತೆಯಾಟವಾಡಿದರು.
ಅದರಲ್ಲೂ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಸೂರ್ಯಕುಮಾರ್ ಯಾದವ್ 34 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ನೊಂದಿಗೆ 47 ರನ್ ಬಾರಿಸಿ ಸೋಧಿಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ (21) ರನ್ನು ಔಟ್ ಮಾಡುವಲ್ಲಿ ಬ್ರೇಸ್ವೆಲ್ ಯಶಸ್ವಿಯಾದರು. ಈ ಮೂಲಕ ನ್ಯೂಜಿಲೆಂಡ್ ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಪರಿಣಾಮ 15ನೇ ಓವರ್ನಲ್ಲಿ ಟೀಮ್ ಇಂಡಿಯಾ 100 ರನ್ ಪೂರೈಸಿತು.
ಇನ್ನು ಕೊನೆಯ 30 ಎಸೆತಗಳಲ್ಲಿ ಟೀಮ್ ಇಂಡಿಯಾಗೆ 67 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ದೀಪಕ್ ಹೂಡಾ (10) ಸ್ಟಂಪ್ ಔಟ್ ಆಗಿ ಹೊರನಡೆದರು. ಇದರ ಬೆನ್ನಲ್ಲೇ ಶಿವಂ ಮಾವಿ (2) ರನೌಟ್ ಆದರು. ಪರಿಣಾಮ ಕೊನೆಯ 3 ಓವರ್ಗಳಲ್ಲಿ ಟೀಮ್ ಇಂಡಿಯಾ 50 ರನ್ಗಳಿಸಬೇಕಿತ್ತು. ಈ ವೇಳೆ ಕುಲ್ದೀಪ್ ಯಾದವ್ (0) ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ಆದರೆ ಮತ್ತೊಂದೆಡೆ ವಾಷಿಂಗ್ಟನ್ ಸುಂದರ್ ಏಕಾಂಗಿ ಹೋರಾಟ ಮುಂದುವರೆಸಿದ್ದರು. 18ನೇ ಓವರ್ನ ಮೊದಲ ಮೂರು ಎಸೆತಗಳಲ್ಲಿ ಸಿಕ್ಸ್ ಹಾಗೂ 2 ಫೋರ್ ಬಾರಿಸುವ ಮೂಲಕ ಸುಂದರ್ ಅಬ್ಬರಿಸಿದರು.
ಇದನ್ನೂ ಓದಿ: ICC Test Team: ಐಸಿಸಿ ಟೆಸ್ಟ್ ತಂಡ ಪ್ರಕಟ: ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ
ಪರಿಣಾಮ ಕೊನೆಯ ಓವರ್ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 33 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ವಾಷಿಂಗ್ಟನ್ ಸುಂದರ್ 25 ಎಸೆತಗಳಲ್ಲಿ ಚೊಚ್ಚಲ ಟಿ20 ಅರ್ಧಶತಕ ಪೂರೈಸಿದರು. ಇದರ ಬೆನ್ನಲ್ಲೇ ಕ್ಯಾಚ್ ನೀಡಿ ಔಟಾದರು. ಅಂತಿಮವಾಗಿ ಟೀಮ್ ಇಂಡಿಯಾ 9 ವಿಕೆಟ್ ನಷ್ಟಕ್ಕೆ 155 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ನ್ಯೂಜಿಲೆಂಡ್ ತಂಡವು 21 ರನ್ಗಳ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವು 1-0 ಮುನ್ನಡೆ ಪಡೆದುಕೊಂಡಿದೆ. 2ನೇ ಪಂದ್ಯವು ಭಾನುವಾರ ಲಕ್ನೋದಲ್ಲಿ ನಡೆಯಲಿದೆ.
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ಶುಭ್ಮನ್ ಗಿಲ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ, ಕುಲ್ದೀಪ್ ಯಾದವ್
ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್: ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್(ನಾಯಕ), ಮೈಕೆಲ್ ಬ್ರೇಸ್ವೆಲ್, ಜಾಕೋಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.
Published On - 10:31 pm, Fri, 27 January 23