IND vs NZ 2nd T20I: ಭಾರತ- ನ್ಯೂಜಿಲೆಂಡ್ ಎರಡನೇ ಟಿ20 ಪಂದ್ಯ ಯಾವಾಗ?, ಎಲ್ಲಿ ನಡೆಯಲಿದೆ?
India vs New Zealand 2nd T20I: ಇದೀಗ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 0-1 ಅಂತರದ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾಕ್ಕೆ ಮುಂದಿನ ಎರಡೂ ಪಂದ್ಯ ಬಹುಮುಖ್ಯವಾಗಿದೆ. ಸರಣಿಯನ್ನು ವಶಪಡಿಸಿಕೊಳ್ಳಬೇಕಾದರೆ ಎರಡೂ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಭಾರತ ಭರ್ಜರಿ ಪ್ರದರ್ಶನ ತೋರಿ ಮೂರೂ ಪಂದ್ಯಗಳನ್ನು ಗೆದ್ದು ಸರಣಿ ಕ್ಲೀನ್ಸ್ವೀಪ್ ಮಾಡಿಕೊಂಡಿತ್ತು. ಆದರೀಗ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ ಸೋಲು ಕಂಡಿದೆ. ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಬೌಲರ್ಗಳು ಕಳಪೆ ಪ್ರದರ್ಶನ ತೋರಿದರೆ, ಬ್ಯಾಟರ್ಗಳು ಕೂಡ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ರೋಹಿತ್, ಕೊಹ್ಲಿ, ರಾಹುಲ್ ಅನುಭವಿ ಆಟಗಾರರ ಅನುಪಸ್ಥಿತಿ ಎದ್ದು ಕಂಡಿತು. ಇದೀಗ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 0-1 ಅಂತರದ ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾಕ್ಕೆ (Team India) ಮುಂದಿನ ಎರಡೂ ಪಂದ್ಯ ಬಹುಮುಖ್ಯವಾಗಿದೆ.
ಟಿ20 ಸರಣಿಯನ್ನು ವಶಪಡಿಸಿಕೊಳ್ಳಬೇಕಾದರೆ ಬಾಕಿ ಉಳಿದಿರುವ ಎರಡೂ ಪಂದ್ಯದಲ್ಲಿ ಭಾರತ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ದ್ವಿತೀಯ ಟಿ20 ಪಂದ್ಯ ಜನವರಿ 29 ಭಾನುವಾರದಂದು ಲಕ್ನೋದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಶುರುವಾಗಲಿದೆ. ಅಂತೆಯೆ ಅಂತಿಮ ಮೂರನೇ ಪಂದ್ಯ ಫೆಬ್ರವರಿ 1 ಬುಧವಾರದಂದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಈ ಮ್ಯಾಚ್ ಕೂಡ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ.
ದ್ವಿತೀಯ ಟಿ20ಗೆ ಬದಲಾವಣೆ?:
ಮೊದಲ ಟಿ20ಯಲ್ಲಿ ಸೋತ ಪರಿಣಾಮ ದ್ವಿತೀಯ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಖಚಿತ ಎಂದೇ ಹೇಳಬಹುದು. 4 ಓವರ್ಗೆ ಬರೋಬ್ಬರಿ 51 ರನ್ ನೀಡಿ ಬೌಲಿಂಗ್ ಸಾಕಷ್ಟು ದುಬಾರಿ ಆಗಿದ್ದ ಅರ್ಶ್ದೀಪ್ ಸಿಂಗ್ ಪ್ಲೇಯಿಂಗ್ ಇಲೆವೆನ್ನಿಂದ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಇವರ ಜಾಗಕ್ಕೆ ಹೊಸ ಮುಖ ಮುಖೇಶ್ ಕುಮಾರ್ಗೆ ಮಣೆ ಹಾಕಬಹುದು. ಅಂತೆಯೆ ರಾಹುಲ್ ತ್ರಿಪಾಠಿ ಜಾಗಕ್ಕೆ ಪೃಥ್ವಿ ಶಾ ಬಂದರೆ ಅಚ್ಚರಿ ಪಡಬೇಕಿಲ್ಲ. ಕುಲ್ದೀಪ್ ಯಾದವ್ 4 ಓವರ್ಗೆ ಕೇವಲ 20 ರನ್ ನೀಡಿ 1 ವಿಕೆಟ್ ಪಡೆದ ಕಾರಣ ಯುಜ್ವೇಂದ್ರ ಚಹಲ್ ಮತ್ತೊಮ್ಮೆ ಬೆಂಚ್ ಕಾಯಬೇಕಿದೆ.
VIDEO: ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ದಂಗಾಗಿಸಿದ ವಾಷಿಂಗ್ಟನ್ ಸುಂದರ್
ಮೊದಲ ಟಿ20 ಹೇಗಿತ್ತು?:
ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ಡೆವೊನ್ ಕಾನ್ವೆ (52) ಹಾಗೂ ಡೆರಲ್ ಮಿಚೆಲ್(59) ಅವರ ಅರ್ಧಶತಕಗಳ ನೆರವಿನಿಂದ 176 ರನ್ ಪೇರಿಸಿತು. ಫಿನ್ ಅಲೆನ್ 35, ಗ್ಲೇನ್ ಫಿಲ್ಲಿಪ್ಸ್ 17 ರನ್ಗಳ ಕೊಡುಗೆ ನೀಡಿದರು. ಭಾರತ ಪರ ವಾಷಿಂಗ್ಟನ್ ಸುಂದರ್ 2 ವಿಕೆಟ್ ಕಬಳಿಸಿದರು. ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು. 15 ರನ್ಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಬಳಿಕ ನಾಯಕ ಹಾರ್ದಿಕ್ ಪಾಂಡ್ಯ (21) ಹಾಗೂ ಸೂರ್ಯಕುಮಾರ್ ಯಾದವ್(47) ಜೊತೆಯಾಟದ ಮೂಲಕ ಭರವಸೆ ಮೂಡಿಸಿದರೂ ಗೆಲುವಿನ ಹತ್ತಿರಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ 28 ಎಸೆತಗಳಲ್ಲಿ 50 ರನ್ ಬಾರಿಸಿದರೂ ಸಹ ಇತರೆ ಬ್ಯಾಟರ್ಗಳು ಸಾಥ್ ನೀಡಲಿಲ್ಲ. ಭಾರತ 20 ಓವರ್ಗಳಲ್ಲಿ 9 ವಿಕೆಟ್ಗೆ 155 ರನ್ಗಳನ್ನಷ್ಟೆ ಗಳಿಸಿ ಸೋಲುಂಡಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ