IND vs NZ: ಟೀಮ್ ಇಂಡಿಯಾ ಗೆದ್ದರೆ ಹೊಸ ಇತಿಹಾಸ
India vs New Zealand Test: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಕಿವೀಸ್ ಪಡೆ ಗೆಲುವು ದಾಖಲಿಸಿದೆ. ಇದೀಗ ಎರಡನೇ ಪಂದ್ಯವನ್ನು ಗೆದ್ದುಕೊಂಡರೆ ಮಾತ್ರ ಟೀಮ್ ಇಂಡಿಯಾಗೆ ಸರಣಿ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು. ಹೀಗಾಗಿ ಭಾರತದ ಪಾಲಿಗೆ ದ್ವಿತೀಯ ಟೆಸ್ಟ್ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ.

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಅಂತಿಮ ಘಟ್ಟದತ್ತ ಸಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ 259 ರನ್ ಕಲೆಹಾಕಿದರೆ, ಭಾರತ ತಂಡವು 156 ರನ್ಗಳಿಗೆ ಆಲೌಟ್ ಆಗಿತ್ತು. ಇನ್ನು 103 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ 255 ರನ್ಗಳಿಗೆ ಆಲೌಟ್ ಆಗಿದೆ. ಇದೀಗ ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಭಾರತ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 359 ರನ್ಗಳ ಬೃಹತ್ ಗುರಿ ಪಡೆದುಕೊಂಡಿದೆ.
ಈ ಗುರಿ ಬೆನ್ನತ್ತಲು ಟೀಮ್ ಇಂಡಿಯಾಗೆ ಎರಡುವರೆ ದಿನದಾಟಗಳಿದ್ದು, ಇದರೊಳಗೆ 359 ರನ್ಗಳಿಸಿ ಜಯ ಸಾಧಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಏಕೆಂದರೆ ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ ಈವರೆಗೆ ಟೆಸ್ಟ್ನಲ್ಲಿ 300 ಕ್ಕಿಂತ ಹೆಚ್ಚಿನ ರನ್ಗಳನ್ನು ಚೇಸ್ ಮಾಡಿ ಗೆದ್ದಿಲ್ಲ. ಅಷ್ಟೇ ಅಲ್ಲದೆ ಭಾರತದಲ್ಲಿ ಟೀಮ್ ಇಂಡಿಯಾ 300+ ರನ್ಗಳನ್ನು ಚೇಸ್ ಮಾಡಿ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ. ಹೀಗಾಗಿಯೇ ಕಿವೀಸ್ ವಿರುದ್ಧ ಭಾರತ ತಂಡ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗುವುದು ದಿಟ.
ಇದನ್ನೂ ಓದಿ: ಝಿಂಬಾಬ್ವೆ ಅಬ್ಬರಕ್ಕೆ ಟೀಮ್ ಇಂಡಿಯಾದ ವಿಶ್ವ ದಾಖಲೆ ಉಡೀಸ್
- ಭಾರತ ತಂಡ ತವರಿನಲ್ಲಿ ಈವರೆಗೆ 26 ಬಾರಿ 300+ ರನ್ಗಳ ಟಾರ್ಗೆಟ್ ಪಡೆದುಕೊಂಡಿದೆ. ಈ ವೇಳೆ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ.
- 2008 ರಲ್ಲಿ ಇಂಗ್ಲೆಂಡ್ ವಿರುದ್ಧ 387 ರನ್ಗಳನ್ನು ಚೇಸ್ ಮಾಡಿ ಗೆದ್ದಿರುವುದು ಟೀಮ್ ಇಂಡಿಯಾದ ಸರ್ವಶ್ರೇಷ್ಠ ಸಾಧನೆ.
- ನ್ಯೂಝಿಲೆಂಡ್ ವಿರುದ್ಧ ಟೆಸ್ಟ್ನಲ್ಲಿ ಅತ್ಯಧಿಕ ರನ್ ಚೇಸ್ ಮಾಡಿದ ದಾಖಲೆ ವೆಸ್ಟ್ ಇಂಡೀಸ್ ಹೆಸರಿನಲ್ಲಿದೆ. 1969 ರಲ್ಲಿ ಆಕ್ಲೆಂಡ್‌ನಲ್ಲಿ ನಡೆದ ಕಿವೀಸ್ ವಿರುದ್ಧದ ಟೆಸ್ಟ್ನಲ್ಲಿ ವೆಸ್ಟ್ ಇಂಡೀಸ್ ನಾಲ್ಕನೇ ಇನ್ನಿಂಗ್ಸ್ನಲ್ಲಿ 345 ರನ್ಗಳನ್ನು ಚೇಸ್ ಮಾಡಿ ಈ ದಾಖಲೆ ಬರೆದಿದೆ.
- ಇದೀಗ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 359 ರನ್ಗಳನ್ನು ಬೆನ್ನತ್ತಿ ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
| ಭಾರತದಲ್ಲಿನ ಯಶಸ್ವಿ ಟೆಸ್ಟ್ ರನ್ ಚೇಸ್ | |||||
| ತಂಡ | ಗೆಲುವಿನ ಗುರಿ | ವಿಜಯದ ಅಂತರ | ಎದುರಾಳಿ | ಸ್ಥಳ | ವರ್ಷ |
| ಭಾರತ | 387 | 6 ವಿಕೆಟ್ | ಇಂಗ್ಲೆಂಡ್ | ಚೆನ್ನೈ | 2008 |
| ವೆಸ್ಟ್ ಇಂಡೀಸ್ | 276 | 5 ವಿಕೆಟ್ | ಭಾರತ | ದೆಹಲಿ | 1987 |
| ಭಾರತ | 276 | 5 ವಿಕೆಟ್ | ವೆಸ್ಟ್ ಇಂಡೀಸ್ | ದೆಹಲಿ | 2011 |
| ಭಾರತ | 261 | 5 ವಿಕೆಟ್ | ನ್ಯೂಝಿಲೆಂಡ್ | ಬೆಂಗಳೂರು | 2012 |
| ಭಾರತ | 254 | 2 ವಿಕೆಟ್ | ಆಸ್ಟ್ರೇಲಿಯಾ | ಬ್ರಬೋರ್ನ್ | 1964 |
| ಭಾರತ | 216 | 1 ವಿಕೆಟ್ | ಆಸ್ಟ್ರೇಲಿಯಾ | ಮೊಹಾಲಿ | 2010 |
| ಇಂಗ್ಲೆಂಡ್ | 207 | 6 ವಿಕೆಟ್ | ಭಾರತ | ದೆಹಲಿ | 1972 |
| ಭಾರತ | 207 | 7 ವಿಕೆಟ್ | ಆಸ್ಟ್ರೇಲಿಯಾ | ಬೆಂಗಳೂರು | 2010 |
| ಭಾರತ | 203 | 6 ವಿಕೆಟ್ | ಪಾಕಿಸ್ತಾನ್ | ದೆಹಲಿ | 2007 |
| ಆಸ್ಟ್ರೇಲಿಯಾ | 194 | 8 ವಿಕೆಟ್ | ಭಾರತ | ಬೆಂಗಳೂರು | 1998 |
Published On - 11:11 am, Sat, 26 October 24
