ಸಚಿನ್, ದ್ರಾವಿಡ್ ಯುಗ ಮುಗಿದಿದೆ… ಭಾರತೀಯ ಬ್ಯಾಟರ್ಗಳನ್ನು ಅಣಕಿಸಿದ ನ್ಯೂಝಿಲೆಂಡ್ ಕ್ರಿಕೆಟಿಗ
IND vs NZ: ಪುಣೆಯಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಕೇವಲ 156 ರನ್‌ಗಳಿಗೆ ಆಲೌಟ್ ಆಗಿ ಮತ್ತೊಮ್ಮೆ ನಿರಾಶೆ ಮೂಡಿಸಿದ್ದಾರೆ. ಈ ಕಳಪೆ ಬ್ಯಾಟಿಂಗ್ ಬೆನ್ನಲ್ಲೇ ಸೈಮನ್ ಡೌಲ್ ಅವರು ಭಾರತೀಯ ಬ್ಯಾಟ್ಸ್‌ಮನ್‌ಗಳ ಸ್ಪಿನ್ ವಿರುದ್ಧದ ದುರ್ಬಲತೆಯನ್ನು ಪ್ರಶ್ನಿಸಿದ್ದಾರೆ.
ಪುಣೆಯಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಭಾರತೀಯ ಬ್ಯಾಟರ್ಗಳು ಕಳಪೆ ಪ್ರದರ್ಶನ ನೀಡಿದ್ದಾರೆ. ಬೆಂಗಳೂರು ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ 46 ರನ್‌ಗಳಿಗೆ ಆಲೌಟ್ ಆಗಿ ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಟೀಮ್ ಇಂಡಿಯಾ ಇದೀಗ ದ್ವಿತೀಯ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 156 ರನ್‌ಗಳಿಗೆ ಕುಸಿದಿದೆ.
ಹೀಗೆ ಕೇವಲ 156 ರನ್‌ಗಳಿಗೆ ಭಾರತೀಯ ಬ್ಯಾಟರ್ಗಳನ್ನು ಕಟ್ಟಿ ಹಾಕಿದ್ದು ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್. ಮೊದಲ ಇನಿಂಗ್ಸ್ನಲ್ಲಿ 19.3 ಓವರ್ಗಳನ್ನು ಎಸೆದ ಸ್ಯಾಂಟ್ನರ್ 53 ರನ್ ನೀಡಿ 7 ವಿಕೆಟ್ ಕಬಳಿಸಿ ಮಿಂಚಿದರು. ಇತ್ತ ಕಿವೀಸ್ ಸ್ಪಿನ್ನರ್ ವಿರುದ್ಧ ಭಾರತೀಯ ಬ್ಯಾಟರ್ಗಳು ರನ್ಗಳಿಸುವುದಿರಲಿ, ಕ್ರೀಸ್ ಕಚ್ಚಿ ನಿಲ್ಲಲು ಕೂಡ ಪರದಾಡಿದರು.
ಟೀಮ್ ಇಂಡಿಯಾದ ಈ ಕಳಪೆ ಬ್ಯಾಟಿಂಗ್ ಬೆನ್ನಲ್ಲೇ ನ್ಯೂಝಿಲೆಂಡ್ನ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಸೈಮನ್ ಡೌಲ್ ನೀಡಿದ ಹೇಳಿಕೆಯು ಇದೀಗ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಡೌಲ್ ಭಾರತೀಯ ಬ್ಯಾಟರ್ಗಳ ಸ್ಪಿನ್ ಬ್ಯಾಟಿಂಗ್ ಸಾಮರ್ಥ್ಯವನ್ನೇ ಪ್ರಶ್ನಿಸಿದ್ದಾರೆ.
ಟೀಮ್ ಇಂಡಿಯಾ 156 ರನ್‌ಗಳಿಗೆ ಆಲೌಟ್ ಆಗುತ್ತಿದ್ದಂತೆ ಮಾತನಾಡಿದ ಸೈಮನ್ ಡೌಲ್, ಭಾರತೀಯ ಬ್ಯಾಟರ್ಗಳು ಉತ್ತಮ ಸ್ಪಿನ್ ಆಟಗಾರರು ಎಂಬುದು ತಪ್ಪು ಕಲ್ಪನೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಅಥವಾ ರಾಹುಲ್ ದ್ರಾವಿಡ್ ಯುಗ ಮುಗಿದು ಹೋಗಿದೆ. ಈಗ ಭಾರತೀಯ ಬ್ಯಾಟರ್ಗಳು ಕೂಡ ಬೇರೆ ದೇಶಗಳ ಬ್ಯಾಟ್ಸ್‌ಮನ್‌ಗಳಂತೆಯೇ ಸ್ಪಿನ್ ಬೌಲಿಂಗ್ ಮುಂದೆ ತಡಕಾಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತಮ ಸ್ಪಿನ್ನರ್‌ಗಳು ಬಂದ ತಕ್ಷಣ ಭಾರತೀಯ ಬ್ಯಾಟರ್ಗಳಿಗೆ ಸಮಸ್ಯೆಗಳು ಶುರುವಾಗುತ್ತವೆ. ಐಪಿಎಲ್‌ನಲ್ಲೂ ಇದೇ ರೀತಿ ಕಂಡುಬಂದಿದೆ. ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಸ್ವಿಂಗ್ ಮತ್ತು ಸೀಮ್ ಅನ್ನು ಸಹ ಆಡಲು ಸಾಧ್ಯವಿಲ್ಲ. ಇದೀಗ ಸ್ಪಿನ್ನರ್ಗಳ ವಿರುದ್ಧ ಕೂಡ ಆಡಲು ತಡಕಾಡುತ್ತಿದ್ದಾರೆ ಎಂದು ಸೈಮನ್ ಡೌಲ್ ವ್ಯಂಗ್ಯವಾಡಿದ್ದಾರೆ.
ಸ್ಪಿನ್ ಮುಂದೆ ರೋ-ಕೊ ವಿಫಲ:
2020 ರಿಂದ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಸ್ಪಿನ್ ಆಡಲು ತಡಕಾಡುತ್ತಿರುವುದಂತು ನಿಜ. ಇದು ಭಾರತ ತಂಡದ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿದೆ. 2013 ಮತ್ತು 2019 ರ ನಡುವೆ ಸ್ಟಾರ್ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿಯ ಸ್ಪಿನ್ ವಿರುದ್ಧ 72.45 ಸರಾಸರಿಯಲ್ಲಿ ರನ್ಗಳಿಸಿದ್ದರು. ಆದರೆ 2020 ರಿಂದ ಇದು 32.86 ಕ್ಕೆ ಇಳಿದಿದೆ.
ಇದನ್ನೂ ಓದಿ: ಝಿಂಬಾಬ್ವೆ ಅಬ್ಬರಕ್ಕೆ ಟೀಮ್ ಇಂಡಿಯಾದ ವಿಶ್ವ ದಾಖಲೆ ಉಡೀಸ್
ಹಾಗೆಯೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ಪಿನ್ನರ್ಗಳ ವಿರುದ್ಧ 88.33 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದರು. ಆದರೀಗ ಅವರ ಸ್ಪಿನ್ ಬ್ಯಾಟಿಂಗ್ ಸಾಮರ್ಥ್ಯ 37.83 ಸರಾಸರಿ ರನ್‌ಗಳಿಗೆ ಇಳಿದಿದೆ.