IND vs PAK: 82ನೇ ದಾಖಲೆಯ ಶತಕ; ಪಾಕ್ ವಿರುದ್ಧ ಗೆಲುವಿನ ಸೆಂಚುರಿ ಬಾರಿಸಿದ ವಿರಾಟ್ ಕೊಹ್ಲಿ

Virat Kohli Century: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ 5 ನೇ ಪಂದ್ಯದಲ್ಲಿ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ಶತಕ ಬಾರಿಸಿದ್ದಾರೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ 82 ನೇ ಶತಕವಾಗಿದೆ. ಅದೇ ಸಮಯದಲ್ಲಿ, ಪಾಕಿಸ್ತಾನ ವಿರುದ್ಧ ಅವರು ನಾಲ್ಕನೇ ಬಾರಿಗೆ 100 ರನ್​ಗಳ ಗಡಿ ದಾಟಿದ ಸಾಧನೆ ಮಾಡಿದ್ದಾರೆ.

IND vs PAK: 82ನೇ ದಾಖಲೆಯ ಶತಕ; ಪಾಕ್ ವಿರುದ್ಧ ಗೆಲುವಿನ ಸೆಂಚುರಿ ಬಾರಿಸಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

Updated on: Mar 02, 2025 | 2:20 PM

ರನ್ ಬರ.. ಕಳಪೆ ಫಾರ್ಮ್​.. ನಿವೃತ್ತಿ ಘೋಷಿಸಿಸಿ… ಕಳೆದ ಕೆಲವು ದಿನಗಳಿಂದ ಕೊಹ್ಲಿ ವಿಚಾರದಲ್ಲಿ ಹಲವು ಕ್ರಿಕೆಟ್ ಪಂಡಿತರು ಹೇಳುತ್ತಿದ್ದ ಮಾತಿದು. ಆದರೆ ಇಂದು ನಡೆದ ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಗೆಲುವಿನ ಶತಕ ಬಾರಿಸಿದ ವಿರಾಟ್ ಕೊಹ್ಲಿ, ಈ ಒಂದು ಶತಕದೊಂದಿಗೆ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೆ ಆರಂಭದಿಂದಲೂ ಕೊನೆಯವರೆಗೂ ಅಜೇಯರಾಗಿ ಉಳಿದು ತಂಡವನ್ನು ಜಯದ ದಡ ಮುಡಿಸಿದ್ದಾರೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್ ಸುತ್ತಿಗೆ ಭಾಗಶಃ ಅರ್ಹತೆ ಪಡೆದರೆ, ಇತ್ತ ಪಾಕಿಸ್ತಾನ ತಂಡ ಲೀಗ್ ಹಂತದಲ್ಲೇ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳುವ ಆತಂಕದಲ್ಲಿದೆ.

82ನೇ ಶತಕ ಬಾರಿಸಿದ ಕೊಹ್ಲಿ

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಯಾವಾಗಲೂ ರೋಮಾಂಚಕಾರಿಯಾಗಿರುತ್ತದೆ. ಹೀಗಾಗಿ ಈ ಪಂದ್ಯದಲ್ಲಿಯೂ ಕೂಡ ಭಾರತಕ್ಕೆ ಆರಂಭದಲ್ಲಿ ರನ್ ಗಳಿಸುವುದು ಸವಾಲಾಗಿತ್ತು. ಏಕೆಂದರೆ ಆರಂಭದಲ್ಲಿಯೇ ರೋಹಿತ್​ರನ್ನು ಔಟ್ ಮಾಡುವ ಮೂಲಕ ಪಾಕಿಸ್ತಾನ ಬೌಲರ್‌ಗಳು ಉತ್ತಮ ಹಿಡಿತ ಸಾಧಿಸಿದರು. ಅಂತಹ ಪರಿಸ್ಥಿತಿಯಲ್ಲಿ ತಂಡದ ಇನ್ನಿಂಗ್ಸ್ ಜವಾಬ್ದಾರಿ ಹೊತ್ತ ವಿರಾಟ್ ಕೊಹ್ಲಿ ಶತಕದ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 111 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ ಅಜೇಯ 100 ರನ್ ಕಲೆಹಾಕಿದರು.

16 ವರ್ಷಗಳ ಕಾಯುವಿಕೆ ಅಂತ್ಯ

ವಿರಾಟ್ ಕೊಹ್ಲಿ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಆಡಿದ್ದು 2009 ರಲ್ಲಿ. ಆದರೆ ಈ ಟೂರ್ನಿಯಲ್ಲಿ ವಿರಾಟ್ ಶತಕ ಬಾರಿಸಿದ್ದು ಇದೇ ಮೊದಲು. ಅಂದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಶತಕ ಬಾರಿಸಲು ಕೊಹ್ಲಿ 16 ವರ್ಷ ಕಾಯಬೇಕಾಯಿತು. ಅದೇ ಸಮಯದಲ್ಲಿ, 2023 ರ ಏಕದಿನ ವಿಶ್ವಕಪ್ ನಂತರ ಏಕದಿನದಲ್ಲಿ ಕೊಹ್ಲಿ ಶತಕ ಗಳಿಸಿದ್ದು ಇದೇ ಮೊದಲು. ಇದಲ್ಲದೆ, ಕೊಹ್ಲಿ 531 ದಿನಗಳ ನಂತರ ವಿದೇಶಿ ನೆಲದಲ್ಲಿ ಏಕದಿನ ಶತಕ ಬಾರಿಸಿದ ಸಾಧನೆಯನ್ನು ಮಾಡಿದ್ದಾರೆ.

ಕೊಹ್ಲಿ ಇನ್ನಿಂಗ್ಸ್​ನ ವಿಶೇಷತೆ

ಐಸಿಸಿ ಏಕದಿನ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ನಾಲ್ಕನೇ ಬಾರಿಗೆ 50+ ರನ್ ಗಳಿಸಿದ್ದಾರೆ, ಇದು ಒಂದು ದಾಖಲೆಯಾಗಿದೆ. ವಿರಾಟ್ ಹೊರತುಪಡಿಸಿ, ವಿವ್ ರಿಚರ್ಡ್ಸ್ ಮತ್ತು ಸಚಿನ್ ತೆಂಡೂಲ್ಕರ್ ಪಾಕಿಸ್ತಾನ ವಿರುದ್ಧ ತಲಾ 3 ಬಾರಿ 50+ ರನ್ ಗಳಿಸಿದ್ದರು. ಇದಲ್ಲದೆ, ಇದು ಐಸಿಸಿ ಏಕದಿನ ಪಂದ್ಯಾವಳಿಯಲ್ಲಿ ಅವರ 23 ನೇ 50+ ಸ್ಕೋರ್ ಆಗಿದೆ. ಅವರನ್ನು ಹೊರತುಪಡಿಸಿ, ಸಚಿನ್ ತೆಂಡೂಲ್ಕರ್ ಮಾತ್ರ ಐಸಿಸಿ ಏಕದಿನ ಪಂದ್ಯಗಳಲ್ಲಿ ಇಷ್ಟೊಂದು ಬಾರಿ 50+ ರನ್ ಗಳಿಸಲು ಸಾಧ್ಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:59 pm, Sun, 23 February 25