ಭಾರತ- ಪಾಕ್ ಪಂದ್ಯ; 7000 ಭದ್ರತಾ ಸಿಬ್ಬಂದಿ! ಮೋದಿ ಮೈದಾನದ ಸುತ್ತ ಪೊಲೀಸ್ ಸರ್ಪಗಾವಲು

|

Updated on: Oct 14, 2023 | 8:42 AM

India vs Pakistan Security: ಭದ್ರತೆಗಾಗಿ ಸುಮಾರು 7000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎನ್‌ಎಸ್‌ಜಿ ಗುಜರಾತ್ ಪೊಲೀಸ್ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ, ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ಸಿಬ್ಬಂದಿ ಭದ್ರತೆಯನ್ನು ನಿರ್ವಹಿಸಲಿದ್ದಾರೆ.

ಭಾರತ- ಪಾಕ್ ಪಂದ್ಯ; 7000 ಭದ್ರತಾ ಸಿಬ್ಬಂದಿ! ಮೋದಿ ಮೈದಾನದ ಸುತ್ತ ಪೊಲೀಸ್ ಸರ್ಪಗಾವಲು
ನರೇಂದ್ರ ಮೋದಿ ಸ್ಟೇಡಿಯಂ
Follow us on

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ನಡೆಯಲಿರುವ ಏಕದಿನ ವಿಶ್ವಕಪ್ (ICC World Cup 2023) ಪಂದ್ಯಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜಾಗಿದೆ. ಉಭಯ ದೇಶಗಳ ಸಂಬಂಧ ಹದಗೆಟ್ಟಿರುವ ಕಾರಣ ಎರಡೂ ತಂಡಗಳು ಕೇವಲ ಐಸಿಸಿ (ICC) ಈವೆಂಟ್​ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ. ಈ ತಂಡಗಳ ಮುಖಾಮುಖಿಯನ್ನು ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತೇ ಕಾಯುತ್ತಿದೆ. ಇಂದಿನ ಪಂದ್ಯಕ್ಕೆ ಇಡೀ ಕ್ರೀಡಾಂಗಣವೇ ಭರ್ತಿಯಾಗುವುದು ಖಚಿತ. ಹೀಗಾಗಿ ಪಂದ್ಯದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯವುದು ಕೂಡ ಮುಖ್ಯವಾಗಿದೆ. ಆದ್ದರಿಂದ ಪೊಲೀಸ್ ಮತ್ತು ಕೇಂದ್ರೀಯ ಏಜೆನ್ಸಿಗಳಿಂದ ಕ್ರೀಡಾಂಗಣದ ಸುತ್ತಮುತ್ತ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ಇದಲ್ಲದೆ ಕೇಂದ್ರೀಯ ಸಂಸ್ಥೆಗಳೂ ಪಂದ್ಯಕ್ಕೆ ಭದ್ರತಾ ವ್ಯವಸ್ಥೆ ಕಲ್ಪಿಸಿವೆ.

7000 ಸಿಬ್ಬಂದಿ ನಿಯೋಜನೆ

ಭದ್ರತೆಗಾಗಿ ಸುಮಾರು 7000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎನ್‌ಎಸ್‌ಜಿ ಗುಜರಾತ್ ಪೊಲೀಸ್ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ, ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ಸಿಬ್ಬಂದಿ ಭದ್ರತೆಯನ್ನು ನಿರ್ವಹಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೂ ಭದ್ರತಾ ವ್ಯವಸ್ಥೆ ಮೇಲೆ ನಿಗಾ ಇಟ್ಟಿದ್ದಾರೆ. ಅಕ್ಟೋಬರ್ 11 ರಿಂದ ನರೇಂದ್ರ ಮೋದಿ ಸ್ಟೇಡಿಯಂ ಮತ್ತು ಸುತ್ತಮುತ್ತ ಭದ್ರತಾ ತಂಡಗಳನ್ನು ನಿಯೋಜಿಸಲಾಗಿದೆ.

India vs Pakistan: ಮಳೆಯಿಂದ ಭಾರತ- ಪಾಕ್ ಪಂದ್ಯ ರದ್ದಾದರೆ ವಿಜೇತರ ಆಯ್ಕೆ ಹೇಗೆ?

ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು

ಈ ಪಂದ್ಯವನ್ನು ಆನಂದಿಸಲು ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಂದ್ಯದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಇದರಿಂದ ಕ್ರೀಡಾಂಗಣ ಕಿಕ್ಕಿರಿದು ತುಂಬುತ್ತದೆ ಎಂದು ಹೇಳಬೇಕಾಗಿಲ್ಲ. ಅಹಮದಾಬಾದ್ ಪೊಲೀಸ್ ಆಯುಕ್ತ ಜ್ಞಾನೇಂದ್ರ ಸಿಂಗ್ ಮಲಿಕ್ ಮಾತನಾಡಿ, ‘ಪಂದ್ಯದ ವೇಳೆ 7 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಜತೆಗೆ 4,000 ಗೃಹರಕ್ಷಕ ದಳದ ಯೋಧರನ್ನು ಇರಿಸಲಾಗುವುದು. ಇವರಲ್ಲದೆ ಎನ್‌ಎಸ್‌ಜಿಯ ಮೂರು ತಂಡಗಳು ಮತ್ತು ಆ್ಯಂಟಿ ಡ್ರೋನ್‌ನ ಒಂದು ತಂಡವೂ ಇರಲಿದೆ. ಅಲ್ಲದೆ, ಬಾಂಬ್ ಡಿಸ್ಪೋಸಬಲ್ ಸ್ಕ್ವಾಡ್ ಜೊತೆಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸಹ ಇರುತ್ತವೆ ಎಂದು ಮಾಹಿತಿ ನೀಡಿದರು.

ಭದ್ರತೆಗೆ ಸಂಬಂಧಿಸಿದಂತೆ ಐದು ಸೂಚನೆ

ಮತ್ತೊಂದೆಡೆ, ಈ ಪಂದ್ಯದಿಂದಾಗಿ ರಾಜ್ಯದ ಪೊಲೀಸ್ ಸಿಬ್ಬಂದಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ ಎಂದು ಗುಜರಾತ್ ಪೊಲೀಸ್ ಡಿಜಿಪಿ ವಿಕಾಸ್ ಸಹಾಯ್ ಹೇಳಿದ್ದಾರೆ. ಭಾರತ-ಪಾಕ್ ಪಂದ್ಯದ ಭದ್ರತೆ ಕುರಿತು ಮಾತನಾಡಿದ ಅವರು, ಭದ್ರತೆಗೆ ಸಂಬಂಧಿಸಿದಂತೆ ಐದು ಸೂಚನೆಗಳನ್ನು ನೀಡಲಾಗಿದೆ. ಇದರಲ್ಲಿ ಕ್ರೀಡಾಂಗಣ ಮತ್ತು ಪ್ರೇಕ್ಷಕರನ್ನು ಸುರಕ್ಷೆಯ ಬಗ್ಗೆ, ನಗರದಲ್ಲಿ ಸಂಚಾರ ದಟ್ಟಣೆಯ ನಿರ್ವಹಣೆ. ಹಾಗೆಯೇ, ಉಭಯ ಕ್ರಿಕೆಟ್ ತಂಡಗಳ ಭದ್ರತೆಯನ್ನು ನೋಡಿಕೊಳ್ಳುವುದರ ಜೊತೆಗೆ ಯಾವುದೇ ರೀತಿಯ ಸಮಾಜವಿರೋಧಿ ಚಟುವಟಿಕೆಗಳು ನಡೆಯದಂತೆ ನಿಗಾ ಇಡಲಾಗಿದೆ ಎಂದಿದ್ದಾರೆ.

ಹಾಗೆಯೇ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುವವರು ತಮ್ಮ ಖಾಸಗಿ ವಾಹನಗಳ ಬದಲು ಬದಲು ಮೆಟ್ರೋ ರೈಲು ಬಳಸಬೇಕೆಂದು ಗುಜರಾತ್ ಪೊಲೀಸ್ ಡಿಜಿಪಿ ಸಲಹೆ ನೀಡಿದ್ದಾರೆ. ಹೀಗಾದರೆ ಸಂಚಾರ ಒತ್ತಡ ಸಾಕಷ್ಟು ಕಡಿಮೆಯಾಗಲಿದೆ ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ