India vs Pakistan, Asia Cup 2022: ಏಷ್ಯಾಕಪ್ನ 2ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಿತ್ತು. ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ್ ಆಟಗಾರರು ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದರು. ಪಾಕಿಸ್ತಾನದಲ್ಲಿ ಪ್ರವಾಹದಿಂದ ಸಂತ್ರಸ್ತರಾದ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಪಾಕ್ ಆಟಗಾರರು ತೋಳಿಗೆ ಬ್ಲ್ಯಾಕ್ ಬ್ಯಾಂಡ್ ಧರಿಸಿ ಕಣಕ್ಕಿಳಿದಿದ್ದರು.
ಪಾಕಿಸ್ತಾನದ ಖೈಬರ್ ಪಖ್ತೂನ್, ಬಲೂಚಿಸ್ತಾನ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಪ್ರವಾಹ ಉಂಟಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಹಲವಾರು ಮಂದಿ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಅಲ್ಲದೆ ಅನೇಕರು ಮಂದಿ ಮನೆ ಕಳೆದುಕೊಂಡು ಅತಂತ್ರರಾಗಿದ್ದಾರೆ.
ಈ ಪಾಕೃತಿಕ ವಿಪತ್ತಿನಲ್ಲಿ ಮರಣವನ್ನಪ್ಪಿದವರಿಗೆ ಶ್ರದ್ಧಾಂಜಲಿ ಅರ್ಪಿಸಿ, ದೇಶದ ಜನರೊಂದಿಗೆ ನಾವಿದ್ದೇವೆ ಎಂದು ಆತ್ಮ ವಿಶ್ವಾಸ ತುಂಬಲು ಪಾಕ್ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದರು. ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಭಾನುವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಈ ಪ್ರವಾಹದಲ್ಲಿ 119 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಬಲೂಚಿಸ್ತಾನದ ನಾಲ್ವರು, ಗಿಲ್ಗಿಟ್ನ 6 ಮಂದಿ, ಖೈಬರ್ ಪಖ್ತೂನ್‌ನಿಂದ 31 ಮತ್ತು ಸಿಂಧ್ ಪ್ರಾಂತ್ಯದ 76 ಜನರು ಶನಿವಾರ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರವಾಹದಿಂದಾಗಿ 110 ಜಿಲ್ಲೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇನ್ನು 72 ಜಿಲ್ಲೆಗಳನ್ನು ಪ್ರವಾಹ ಪೀಡಿತ ಜಿಲ್ಲೆಗಳೆಂದು ಘೋಷಿಸಲಾಗಿದೆ. ಹಾಗೆಯೇ ಜಿಯೋ ನ್ಯೂಸ್ ಮಾಹಿತಿಯ ಪ್ರಕಾರ, 9 ಲಕ್ಷಕ್ಕೂ ಅಧಿಕ ಮನೆಗಳು ನಾಶವಾಗಿವೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಟೀಮ್ ಇಂಡಿಯಾ ಪರ ಅಧ್ಭುತ ಬೌಲಿಂಗ್ ದಾಳಿ ಸಂಘಟಿಸಿದ ಭುವನೇಶ್ವರ್ ಕುಮಾರ್ 4 ವಿಕೆಟ್ ಕಬಳಿಸಿದರು. ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಬಳಿಸಿದರು. ಪರಿಣಾಮ ಪಾಕಿಸ್ತಾನ್ ತಂಡವು 19.5 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಆಯಿತು.
ಈ ಪಂದ್ಯದಲ್ಲಿ ಕಣಕ್ಕಿಳಿದ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿದೆ:
ಪಾಕಿಸ್ತಾನ್ ತಂಡ: ಬಾಬರ್ ಆಜಮ್, ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಆಸಿಫ್ ಅಲಿ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ನಸೀಮ್ ಶಾ, ಹ್ಯಾರಿಸ್ ರೌಫ್, ಶಾನವಾಜ್ ದಹಾನಿ
ಟೀಮ್ ಇಂಡಿಯಾ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್,ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಾಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್