IND vs PAK: ಅಫ್ರಿದಿ ವಿರುದ್ಧ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್ ರೋಹಿತ್ ಶರ್ಮಾ..!

|

Updated on: Jun 09, 2024 | 10:19 PM

IND vs PAK, T20 World Cup 2024: ರೋಹಿತ್ ಈಗ ಏಕದಿನ ಮತ್ತು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶಾಹೀನ್ ಅಫ್ರಿದಿ ವಿರುದ್ಧ ತಮ್ಮ ಮೊದಲ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೋಹಿತ್ ಹೊರತುಪಡಿಸಿ ವಿಶ್ವದ ಯಾವುದೇ ಬ್ಯಾಟ್ಸ್​ಮನ್ ಶಾಹೀನ್ ಅವರ ಮೊದಲ ಓವರ್​ನಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.

IND vs PAK: ಅಫ್ರಿದಿ ವಿರುದ್ಧ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್ ರೋಹಿತ್ ಶರ್ಮಾ..!
ರೋಹಿತ್ ಶರ್ಮಾ
Follow us on

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಟಿ20 ವಿಶ್ವಕಪ್‌ನ (T20 World Cup 2024) 19 ನೇ ಪಂದ್ಯ ಇಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೇಲೂ ಮಳೆಯ ಛಾಯೆ ಆವರಿಸಿದೆ. ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಯಿತ್ತಾದರೂ, ಒಂದು ಓವರ್​ ಮುಕ್ತಾಯದ ಬಳಿಕ ಮತ್ತೆ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು. ಈ ಒಂದು ಓವರ್‌ನಲ್ಲಿ ಟೀಂ ಇಂಡಿಯಾ ಯಾವುದೇ ವಿಕೆಟ್ ಕಳೆದುಕೊಳ್ಳದೆ 8 ರನ್ ಕಲೆಹಾಕಿತು. ಪಾಕ್ ವೇಗದ ಬೌಲರ್ ಶಾಹೀನ್ ಅಫ್ರಿದಿ (Shaheen Afridi) ಎಸೆದ ಮೊದಲ ಓವರ್​ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಇತಿಹಾಸ ಬರೆದ ರೋಹಿತ್

ಮೇಲೆ ಹೇಳಿದಂತೆ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಮೊದಲ ಓವರ್‌ನ ಎಲ್ಲಾ ಎಸೆತಗಳನ್ನು ಆಡಿದರು. ಈ ಓವರ್‌ನಲ್ಲಿ ರೋಹಿತ್ 8 ರನ್ ಕಲೆಹಾಕಿದರು. ಈ 8 ರನ್​​ಗಳಲ್ಲಿ ಒಂದು ಭರ್ಜರಿ ಸಿಕ್ಸರ್​ ಕೂಡ ಸೇರಿತ್ತು. ಈ ಸಿಕ್ಸರ್​ ಜೊತೆಗೆ ರೋಹಿತ್ ಹೆಸರಿನಲ್ಲಿ ವಿಶೇಷ ದಾಖಲೆಯೊಂದಿಗೆ ಸೃಷ್ಟಿಯಾಗಿದೆ. ಅದೆನೆಂದರೆ, ರೋಹಿತ್ ಈಗ ಏಕದಿನ ಮತ್ತು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶಾಹೀನ್ ಅಫ್ರಿದಿ ವಿರುದ್ಧ ತಮ್ಮ ಮೊದಲ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೋಹಿತ್ ಹೊರತುಪಡಿಸಿ ವಿಶ್ವದ ಯಾವುದೇ ಬ್ಯಾಟ್ಸ್​ಮನ್ ಶಾಹೀನ್ ಅವರ ಮೊದಲ ಓವರ್​ನಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.

ಆರಂಭಿಕರಿಬ್ಬರು ಫೇಲ್

ಪಾಕಿಸ್ತಾನ ವಿರುದ್ಧದ ಈ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾದ ಅನುಭವಿ ಜೋಡಿ ಉತ್ತಮ ಜೊತೆಯಾಟ ಕಲೆಹಾಕುವಲ್ಲಿ ವಿಫಲವಾಗಿದೆ. ಕಳೆದ ಪಂದ್ಯದಲ್ಲಿ ಕೇವಲ 1 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 4 ರನ್​ಗಳಿಗೆ ಸುಸ್ತಾದರು. ನಾಯಕ ರೋಹಿತ್ ಶರ್ಮಾ ಕೂಡ 13 ರನ್​ಗಳಿಗೆ ಬ್ಯಾಟ್ ಎತ್ತಿಟ್ಟರು. ಹೀಗಾಗಿ ಟೀಂ ಇಂಡಿಯಾ ಆರಂಭದಲ್ಲೇ ಅನುಭವಿಗಳ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

India vs Pakistan Playing XI: ಟಾಸ್ ಗೆದ್ದ ಬಾಬರ್; ಪಾಕ್ ವಿರುದ್ಧ ಭಾರತದ ಪ್ಲೇಯಿಂಗ್ 11 ಹೀಗಿದೆ

ಪಂದ್ಯಕ್ಕೆ ಮಳೆ ಅಡ್ಡಿ

ಪಂದ್ಯ ಆರಂಭಕ್ಕೂ ಮುನ್ನವೇ ಮಳೆಯ ಮುನ್ಸೂಚನೆ ಕಂಡು ಬಂದಿತ್ತು. ಮಳೆಯಿಂದಾಗಿ ಪಂದ್ಯದ ಸಮಯವನ್ನು ಕೂಡ ಬದಲಾಯಿಸಲಾಗಿತ್ತು. ಪಂದ್ಯ 8 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯ 8:50 ಕ್ಕೆ ಆರಂಭವಾಯಿತು. ಇದಾದ ಬಳಿಕ ಒಂದು ಓವರ್ ಮುಗಿದ ಬಳಿಕ ಮಳೆ ಸುರಿಯಲಾರಂಭಿಸಿದ್ದರಿಂದ ಪಂದ್ಯವನ್ನು ನಿಲ್ಲಿಸಬೇಕಾಯಿತು.  ಈ ಸುದ್ದಿ ಬರೆಯುವ ಹೊತ್ತಿಗೆ ಟೀಂ ಇಂಡಿಯಾದ 9 ಓವರ್​ಗಳು ಮುಗಿದಿದ್ದು, ತಂಡ 3 ವಿಕೆಟ್ ಕಳೆದುಕೊಂಡು 64  ರನ್ ಕಲೆಹಾಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:11 pm, Sun, 9 June 24